ಬಿಬಿಎಂಪಿಯಿಂದ ಮತ್ತೆ ರಾಜಾಕಾಲುವೆ ಒತ್ತುವರಿ ತೆರವು
ಬೆಂಗಳೂರು, ಆಗಸ್ಟ್ 23 : ಬೆಂಗಳೂರು ನಗರದಲ್ಲಿ ಮತ್ತೆ ಜೆಸಿಬಿಗಳು ಸದ್ದು ಮಾಡಲಿವೆ. ಹೌದು...ರಾಜಾಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಶೀಘ್ರದಲ್ಲೇ ಆರಂಭಿಸಲಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಸಂಪತ್ ರಾಜ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಮುಂದಿನ ವಾರದಿಂದ ರಾಜಾಕಾಲುವೆ ಒತ್ತುವರಿ ತೆರವು ಕಾರ್ಯವನ್ನು ಆರಂಭಿಸುವ ಸಾರಧ್ಯತೆ ಇದೆ' ಎಂದು ಹೇಳಿದ್ದಾರೆ.
'ರಾಜಾಕಾಲುವೆ ಒತ್ತುವರಿಯಾಗಿರುವ ಪ್ರದೇಶಗಳ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಮೂರು ದಿನದಲ್ಲಿ ಸಂಪೂರ್ಣ ವರದಿ ಕೈ ಸೇರಲಿದೆ. ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ ಜೊತೆ ಚರ್ಚೆ ನಡೆಸಿದ ಬಳಿಕ ದಿನಾಂಕ ನಿಗದಿ ಮಾಡಲಾಗತ್ತದೆ' ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಡಾ.ಜಿ.ಪರಮೇಶ್ವರ ಅವರು ರಾಜಾಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪುನಃ ಆರಂಭಿಸ ಸುಳಿವು ನೀಡಿದ್ದರು. ಬಿಬಿಎಂಪಿ ಈ ಕುರಿತು ಸಮೀಕ್ಷೆ ಮಾಡಿಸಿದ್ದು, ವರದಿ ಮುಂದಿನ ವಾರ ಸಲ್ಲಿಕೆಯಾಗುವ ಸಾಧ್ಯತೆ ಇದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರು ನಗರದಲ್ಲಿ ಭಾರೀ ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ, ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತಕ್ಷಣ ಆರಂಭಿಸುವ ಸಾಧ್ಯತೆ ಇದೆ.
2016ರಲ್ಲಿ ಬೆಂಗಳೂರು ನಗರದಲ್ಲಿ ಬಿಬಿಎಂಪಿ ರಾಜಾಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಿತ್ತು. 1225 ಒತ್ತುವರಿಯನ್ನು ಆಗ ಗುರುತಿಸಲಾಗಿತ್ತು. 728 ಕಡೆ ಒತ್ತುವರಿಯನ್ನು ತೆರವುಗೊಳಿಸಲಾಗಿತ್ತು.
2017ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ನಗರದಲ್ಲಿ ಭಾರಿ ಮಳೆಯಾಗಿತ್ತು. ಆಗ ಪುನಃ ಒತ್ತುವರಿ ತೆರವು ಬಗ್ಗೆ ಸುದ್ದಿಗಳು ಹಬ್ಬಿದ್ದವು. ಈಗ ಬಿಬಿಎಂಪಿ ಕಾರ್ಯಾಚರಣೆಯನ್ನು ಆರಂಭಿಸಲು ಯೋಜನೆ ಸಿದ್ಧಪಡಿಸುತ್ತಿದೆ.












Click it and Unblock the Notifications