ಕಸ ಸಂಗ್ರಹಕ್ಕೂ ಸೆಸ್ ಕಟ್ಟಬೇಕಾ ಬೆಂಗಳೂರಿಗರು?
ಬೆಂಗಳೂರು, ಫೆಬ್ರವರಿ 03; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮನೆ-ಮನೆಯಿಂದ ಕಸ ಸಂಗ್ರಹಕ್ಕೂ ಸೆಸ್ ಹಾಕಲು ಮುಂದಾಗಿದೆಯೇ?. ಹಿಂದೆಯೂ ಈ ಕುರಿತು ಚರ್ಚೆ ನಡೆದಿತ್ತು, ಈಗ ವಿದ್ಯುತ್ ಬಿಲ್ ಜೊತೆಗೆ ಕಸದ ಸೆಸ್ ಸಂಗ್ರಹ ಮಾಡಲು ಬಗ್ಗೆ ಮತ್ತೆ ಸುದ್ದಿ ಹಬ್ಬಿದೆ.
ಬಿಬಿಎಂಪಿ ಕಸ ಸಂಗ್ರಹ ಸೆಸ್ ಜಾರಿಗೆ ತರಲು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ ಎಂಬುದು ಸದ್ಯದ ಸುದ್ದಿ. ಜನಪ್ರತಿನಿಧಿಗಳು ಇಲ್ಲದೇ ಪಾಲಿಕೆ ಆಡಳಿತ ನಡೆಸುತ್ತಿರುವ ಅಧಿಕಾರಿಗಳ ಇಂತಹ ಪ್ರಸ್ತಾವನೆ ಇಲ್ಲ ಎಂದು ಸಹ ಹೇಳುತ್ತಿದ್ದಾರೆ.
ಕಸ ನಿರ್ವಹಣಾ ವೆಚ್ಚ ಶೇ 15ರಷ್ಟು ಸಂಗ್ರಹ ಮಾಡಲು ಪಾಲಿಕೆ ಮುಂದಾಗಿದೆ. ಅಂದರೆ ಪ್ರತಿ ತಿಂಗಳು ಮನೆಗೆ ವಿದ್ಯುತ್ ಬಿಲ್ ಬರುವಾಗ ಅದಕ್ಕೆ ಕಸ ಸಂಗ್ರಹಣೆ ಸೆಸ್ ಸೇರಿಸಲಾಗುತ್ತದೆ. ಇದರಿಂದ ಪಾಲಿಕೆ ಮಾಸಿಕ ಆದಾಯವೂ ಹೆಚ್ಚಲಿದೆ ಎಂಬುದು ಲೆಕ್ಕಾಚಾರ.

ಗೃಹ ತ್ಯಾಜ್ಯ ಸಂಗ್ರಹಣೆಗೆ ಬೇರೆ, ವಾಣಿಜ್ಯ ಕಟ್ಟಡಗಳ ಕಸ ಸಂಗ್ರಹಣೆಗೆ ಬೇರೆ ಸೆಸ್ ವಿಧಿಸಲು ಪಾಲಿಕೆ ಮುಂದಾಗಿದೆ. ಈ ಆದಾಯದ ಮೂಲಕ ಕಸ ಸಾಗಿಸಲು ಗುತ್ತಿಗೆದಾರರ ಬಿಲ್, ಪೌರ ಕಾರ್ಮಿಕರ ಸಂಬಳ ನೀಡಲು ಅನುಕೂಲವಾಗಲಿದೆ ಎಂಬುದು ಚಿಂತನೆಯಾಗಿದೆ.
ಎಷ್ಟು ಸೆಸ್ ಕಟ್ಟಬೇಕು?; ಪಾಲಿಕೆಯ ಲೆಕ್ಕಾಚಾರದಂತೆ 200 ರೂ. ತನಕ ವಿದ್ಯುತ್ ಬಿಲ್ ಕಟ್ಟುವವರು 30 ರೂ., 200 ರಿಂದ 500 ರೂ. ತನಕ 60 ರೂ. ಮತ್ತು 500 ರಿಂದ 100 ರೂ. ಬಿಲ್ ಕಟ್ಟುವವರು 100 ರೂ. ಕಸದ ಸೆಸ್ ಕಟ್ಟಬೇಕು. 300 ಸಾವಿರ ರೂ.ಗಳಿಗಿಂತ ಹೆಚ್ಚು ಬಿಲ್ ಕಟ್ಟುವವರಿಗೆ 500 ರೂ. ಸೆಸ್ ಹೊರೆ ಬೀಳಲಿದೆ.
ಸೆಸ್ ಹಾಕಲು ಬಿಬಿಎಂಪಿ ಏನೋ ಚಿಂತನೆ ನಡೆಸಿದೆ. ಆದರೆ ಸರ್ಕಾರದಿಂದ ಇದಕ್ಕೆ ಒಪ್ಪಿಗೆ ಸಿಕ್ಕಿಲ್ಲ. ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಟ್ಟುಕೊಂಡಿದ್ದಾರೆ. ಅವರು ಅಂತಿಮ ತೀರ್ಮಾನವನ್ನು ಈ ವಿಚಾರದಲ್ಲಿ ಕೈಗೊಳ್ಳಬೇಕಿದೆ.
ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಚುನಾವಣೆ ಮುಂದಿಟ್ಟುಕೊಂಡು ಜನರ ಮೇಲೆ ಸೆಸ್ ಹೊರೆ ಹೊರಿಸಲು ಸರ್ಕಾರ ಮುಂದಾಗುವ ಸಾಧ್ಯತೆ ಕಡಿಮೆ ಇದೆ.
ಬೆಸ್ಕಾಂ ಸಹಾಯದ ಮೂಲಕ ಕಸ ಸಂಗ್ರಹಣೆ ಸೆಸ್ ಸಂಗ್ರಹ ಮಾಡುವ ಪ್ರಸ್ತಾವನೆ ಹಿಂದೆಯೂ ಕೇಳಿ ಬಂದಿತ್ತು. ಕಸ ಸಂಗ್ರಹಣೆ, ವಿಲೇವಾರಿಗೆ ಸುಮಾರು 800 ಕೋಟಿ ಖರ್ಚು ಮಾಡುವ ಪಾಲಿಕೆ ಸೆಸ್ ಸಂಗ್ರಹದ ಮೂಲಕ ಸುಮಾರು 200 ಕೋಟಿ ಆದಾಯ ಸಂಗ್ರಹ ಮಾಡಬಹುದು ಎಂದು ಅಂದಾಜಿಸಿದೆ.
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಬಿಬಿಎಂಪಿ ಅಧಿಕಾರಿಗಳ ಜೊತೆ ಈ ಕುರಿತು ಸಭೆ ನಡೆಸುವ ನೀರಿಕ್ಷೆ ಇದೆ. ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಂಡು ಬಳಿಕ ವಿಚಾರವನ್ನು ಮುಖ್ಯಮಂತ್ರಿಗಳ ಮುಂದೆ ತೆಗೆದುಕೊಂಡು ಹೋಗಲಾಗುತ್ತದೆ.
ಆದರೆ ಬಿಬಿಎಂಪಿ ಆಯುಕ್ತರು ಇಂತಹ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಕಸದ ಸೆಸ್ ಸಂಗ್ರಹ ಮಾಡುವ ಚಿಂತನೆ ನಮ್ಮ ಮುಂದಿಲ್ಲ. ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ಹೇಳಿದ್ದಾರೆ.
ಬಿಬಿಎಂಪಿ ಚುನಾವಣೆ; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೌನ್ಸಿಲ್ ಅವಧಿ 2020ರ ಸೆಪ್ಟೆಂಬರ್‌ನಲ್ಲಿ ಪೂರ್ಣಗೊಂಡಿದೆ. ಬಳಿಕ ಪಾಲಿಕೆಯ ಅಧಿಕಾರ ಅಧಿಕಾರಿಗಳ ಕೈಯಲ್ಲಿ ಇದೆ.
ಬಿಬಿಎಂಪಿ 198 ವಾರ್ಡ್‌ಗಳನ್ನು ಹೊಂದಿತ್ತು. ಈಗ ಅದನ್ನು 243ಕ್ಕೆ ಏರಿಕೆ ಮಾಡಲಾಗಿದೆ. ವಾರ್ಡ್ ಗಡಿ ವಿಂಗಡನೆ, ಮತದಾರರ ಪಟ್ಟಿ ಮುಂತಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ.












Click it and Unblock the Notifications