ಬೆಂಗಳೂರು: ಎಲ್ಲೆಂದರಲ್ಲಿ ಕಸ ಎಸೆದರೆ ತೆರಬೇಕಾಗುತ್ತದೆ ಭಾರಿ ದಂಡ
ಬೆಂಗಳೂರು, ಜುಲೈ 04: ಕಸ ವಿಂಗಡಣೆ, ಸಂಸ್ಕೃರಣೆ ಅಶಿಸ್ತಿಗೆ ವಿಧಿಸಲಾಗುತ್ತಿದ್ದ ದಂಡವನ್ನು ಹೆಚ್ಚು ಮಾಡಿದ್ದು ನಗರದಲ್ಲಿ ಇನ್ನು ಮುಂದೆ ಎಲ್ಲೆಂದರಲ್ಲಿ ಕಸ ಎಸೆದರೆ ಮುಂಚಿಗಿಂತಲೂ ಹೆಚ್ಚಿನ ದಂಡ ತೆರಬೇಕಾಗುತ್ತದೆ.
ಕಸ ವಿಂಗಡಣೆ ಮಾಡದಿದ್ದರೆ, ಎಲ್ಲೆಂದರಲ್ಲಿ ಉಗುಳಿದರೆ, ಪಾಲಿಕೆ ಸೂಚಿಸಿದ ನಿಯಮಗಳನ್ನು ಜಾರಿಗೆ ತರದೆ ಇದ್ದರೆ, ರಸ್ತೆ ಬದಿ ಕಟ್ಟಡದ ತ್ಯಾಜ್ಯ ಸುರಿದರೆ ಭಾರೀ ದಂಡ ಕಟ್ಟಬೇಕಾಗುತ್ತದೆ.
ಬಿಬಿಎಂಪಿ ಮೇಯರ್ ಗಂಗಾಂಬಿಕೆ, ಬಿಬಿಎಂಪಿ ಆಯುಕ್ತ ಮಂಜುನಾಥ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಸ ಸಂಬಂಧಿ ಅಶಿಸ್ತಿಗೆ ದಂಡ ಹೆಚ್ಚಳ ಮಾಡಿರುವ ಬಗ್ಗೆ ಮಾಹಿತಿ ನೀಡಿದರು.

ರಸ್ತೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಆಟದ ಮೈದಾನ ಮತ್ತಿತರ ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದು, ಮೂತ್ರ ವಿಸರ್ಜನೆ ಮಾಡಿದರೆ ಮೊದಲ ಬಾರಿಗೆ 200ರೂ. ದಂಡ, ಎರಡನೆ ಬಾರಿಗೆ 1000ರೂ. ದಂಡ ವಿಧಿಸಲು ತೀರ್ಮಾನಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.
ರಸ್ತೆಯಲ್ಲಿ ಕಟ್ಟಡ ತ್ಯಾಜ್ಯ ಹಾಕುವುದು, ಗೊತ್ತಾದ ಸ್ಥಳ ಬಿಟ್ಟು ಬೇರೆಡೆ ಕಸ ಹಾಕುವುದು, ರಸ್ತೆಗೆ ಕಸ ಹಾಕುವುದು ಇನ್ನಿತರೆ ತಪ್ಪುಗಳಿಗೆ ಪ್ರತ್ಯೇಕ ದಂಡಗಳನ್ನು ತೆರಬೇಕಾಗುತ್ತದೆ.
ವಿಂಗಡಣೆ ಮಾಡದ ಕಸ ಪಡೆದರೆ, ಅಥವಾ ಪಡೆದ ಕಸವನ್ನು ಸೂಕ್ತವಾಗಿ ವಿಂಗಡಣೆ ಮಾಡದಿದ್ದರೆ ಗುತ್ತಿಗೆದಾರರಿಗೂ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಮೇಯರ್ ಮಾಹಿತಿ ನೀಡಿದರು.
ರಸ್ತೆ ಬದಿ ಕಟ್ಟಡ ತ್ಯಾಜ್ಯ ಸುರಿದರೆ ಮೊದಲ ಬಾರಿಗೆ 5000, ಆನಂತರ 25,000ರೂ. ದಂಡ ವಿಧಿಸಲಾಗುತ್ತದೆ. ವಾಣಿಜ್ಯ ಕಟ್ಟಡದವರಿಗೆ ಮೊದಲ ಬಾರಿಗೆ 1000ರೂ., ನಂತರ 5000ರೂ. ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು. ಆಸ್ಪತ್ರೆ ತ್ಯಾಜ್ಯವನ್ನು ವಿಂಗಡಣೆ ಮಾಡಬೇಕು. ವಿಂಗಡಿಸದಿದ್ದರೆ ಮೊದಲ ಬಾರಿಗೆ 1000ರೂ. ನಂತರ 5000ರೂ. ದಂಡ ವಿಧಿಸಲಾಗುತ್ತದೆ.
ಮನೆ, ಮನೆಯಿಂದ ಕಸ ಸಂಗ್ರಹಣೆಯನ್ನು ಶೇ.100ರಷ್ಟು ಯಶಸ್ವಿಗೊಳಿಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ. ಸೆಪ್ಟೆಂಬರ್ 2019ರ ವೇಳೆಗೆ ಶೇ.90ರಷ್ಟು ಯಶಸ್ಸು ಸಾಧಿಸಲಾಗುವುದು. ಡಿಸೆಂಬರ್ ವೇಳೆಗೆ ಶೇ.100ರಷ್ಟು ಕಸ ಸಂಗ್ರಹಣೆ ಯಶಸ್ವಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.












Click it and Unblock the Notifications