ಬೆಂಗಳೂರು "ರೋಡ್ ಡ್ಯಾಮೇಜ್": ಬಿಬಿಎಂಪಿಯಿಂದ ಆಸ್ತಿದಾರರಿಗೆ ಖಡಕ್ ವಾರ್ನಿಂಗ್!
ಬೆಂಗಳೂರಿನಲ್ಲಿ ಬೇಕಾಬಿಟ್ಟಿ ರಸ್ತೆಗಳನ್ನು ಹಾಳು ಮಾಡುವವರ ಮೇಲೆ ಕೊನೆಗೂ ಕ್ರಮ ತೆಗೆದುಕೊಳ್ಳುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಬೆಂಗಳೂರಿನಲ್ಲಿ ಒಂದು ಕಡೆಯಿಂದ ಬಿಬಿಎಂಪಿ ರಸ್ತೆಗಳಿಗೆ ಟಾರ್ ಹಾಕಿಕೊಂಡು ಬಂದರೂ ಮತ್ತೊಂದು ಕಡೆಯಿಂದ ಕೆಲವರು ರೋಡ್‌ಗಳನ್ನು ಹಾಳು ಮಾಡುತ್ತಿದ್ದಾರೆ. ಇದೀಗ ರೋಡ್‌ಗಳ ವಿಚಾರದಲ್ಲಿ ಬಿಬಿಎಂಪಿಯು ಗಂಭೀರ ಕ್ರಮಕ್ಕೆ ಮುಂದಾಗಿದೆ. ರೋಡ್ ಹಾಳು ಮಾಡಿದವರ ಮೇಲೆ ಎಫ್‌ಐಆರ್ ದಾಖಲಿಸಿಕೊಳ್ಳುವುದಕ್ಕೆ ಬಿಬಿಎಂಪಿ ಮುಂದಾಗಿದೆ.
ಹೌದು ಬೆಂಗಳೂರಿನಲ್ಲಿ ಹಲವು ಕಾರಣಕ್ಕೆ ರೋಡ್‌ಗಳನ್ನು ಹಾಳು ಮಾಡಲಾಗುತ್ತಿದೆ. ಇದೇ ಮೊದಲ ಬಾರಿ ಎನ್ನುವಂತೆ ಈ ವಿಚಾರದಲ್ಲಿ ಬಿಬಿಎಂಪಿಯ ಅಧಿಕಾರಿಗಳು ಕಠಿಣ ಕಾನೂನು ಕ್ರಮವನ್ನು ತೆಗೆದುಕೊಂಡಿದ್ದಾರೆ. ಈ ವಿನೂತನ ಬಿಬಿಎಂಪಿಯ ಕ್ರಮಕ್ಕೆ ಸಾರ್ವಜನಿಕ ವಲಯದಿಂದಲೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಕೆಲವು ಭಾಗದಲ್ಲಿ ರಸ್ತೆಗಳನ್ನು ಅಭಿವೃದ್ಧಿ ಮಾಡಿದರೂ ಒಂದೇ ವಾರದಲ್ಲಿ ರಸ್ತೆಗಳು ಹಾಳಾಗುತ್ತಿವೆ. ಇದೀಗ ರೋಡ್ ಡ್ಯಾಮೇಜ್ ಮಾಡುವವರ ಮೇಲೆ ಗಂಭೀರ ಕ್ರಮಕ್ಕೆ ಬಿಬಿಎಂಪಿಯ ಎಂಜಿನಿಯರ್‌ಗಳು ಮುಂದಾಗಿದ್ದಾರೆ.

ಬೆಂಗಳೂರಿನ ದಾಸರಹಳ್ಳಿ ವಲಯದಲ್ಲಿ ಶೆಟ್ಟಿಹಳ್ಳಿ ಉಪ ವಿಭಾಗ ವಾರ್ಡ್‌ನ ಆರ್.ಕೆ ಲೇಔಟ್ 3ನೇ ಕ್ರಾಸ್ ರಸ್ತೆಯಲ್ಲಿ ಅನಧಿಕೃತವಾಗಿ ರಸ್ತೆ ಅಗೆದಿರುವವರ ಮೇಲೆ ಎಫ್.ಐ.ಆರ್ ದಾಖಲಿಸಿಕೊಳ್ಳಲಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ರೋಡ್ ಡ್ಯಾಮೇಜ್ ಮಾಡುವವರಿಗೆ ವಿದೇಶಿ ಮಾದರಿ ಕ್ರಮವನ್ನು ಬಿಬಿಎಂಪಿ ಅನುಸರಿಸುತ್ತಿದೆ. ಹೌದು ವಿದೇಶದಲ್ಲಿ ಸರ್ಕಾರಿ ಮೌಲ್ಯದ ಆಸ್ತಿಗೆ ಡ್ಯಾಮೇಜ್ ಮಾಡುವುದು ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರ ಮೇಲೆ ಗಂಭೀರ ಕ್ರಮಗಳನ್ನು ಅನುಸರಿಸಲಾಗುತ್ತಿದೆ.
ಇಲ್ಲಿನ ಆರ್.ಕೆ ಲೇಔಟ್ 3ನೇ ಕ್ರಾಸ್ ರಸ್ತೆಯಲ್ಲಿ ಜ್ಯೋತಿ ಆರ್. ಎನ್ನುವವರು ಮಾರ್ಚ್ ತಿಂಗಳಿನಲ್ಲಿ ಬೆಳಿಗ್ಗೆ 9.30ರ ವೇಳೆ ಅನಧಿಕೃತವಾಗಿ ರಸ್ತೆ ಅಗೆದಿರುವ ಕುರಿತು ವಲಯ ಆಯುಕ್ತರಾದ ಸತೀಶ್ ಅವರು ವಾಟ್ಸಪ್ ಗ್ರೂಪ್ ಮೂಲಕ ಕಾನೂನು ಕ್ರಮ ಕೈಗೊಳ್ಳಲು ಸಂದೇಶ ಕೊಟ್ಟಿದ್ದರು. ಇದೀಗ ಇವರ ಮೇಲೆ ಕ್ರಮವಾಗಿದೆ.
ಮುಂದುವರಿದು, ಈ ವಿಷಯಕ್ಕೆ ಸಂಬಂಧಿಸಿದಂತೆ ದಾಸರಹಳ್ಳಿ ವಲಯದ ಮುಖ್ಯ ಎಂಜಿನಿಯರ್ ಆಗಿರುವ ಬಸವರಾಜ್ ಕಬಾಡೆ ಅವರ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆರ್.ಕೆ ಲೇಔಟ್ 3ನೇ ಕ್ರಾಸ್ ರಸ್ತೆಯಲ್ಲಿ ಬರುವ ಸ್ವತ್ತಿನ ಸಂಖ್ಯೆ 37ರ ಮಾಲೀಕರಾಗಿರುವ ಜ್ಯೋತಿ ಆರ್., ಅವರು ಪಾಲಿಕೆಯಿಂದ ಯಾವುದೇ ಅನುಮತಿ ಪಡೆಯದೆ ನಿಯಮಬಾಹಿರವಾಗಿ ರಸ್ತೆಯನ್ನು ಅಗೆದು ಸಾರ್ವಜನಿಕ ಸ್ವತ್ತನ್ನು ಹಾಳು ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ.
ಈ ಸಂಬಂಧ ಅನಧಿಕೃತವಾಗಿ ರಸ್ತೆ ಅಗೆದವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು ಶೆಟ್ಟಿಹಳ್ಳಿ ಉಪ ವಿಭಾಗ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದೀಗ ಎಫ್.ಐ.ಆರ್ ದಾಖಲಿಸಿಕೊಳ್ಳಲಾಗಿದೆ. ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಈ ಕ್ರಮಕ್ಕೆ ಸಾರ್ವಜನಿಕ ವಲಯದಿಂದಲೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.












Click it and Unblock the Notifications