Bengaluru Underpass: ಅಂಡರ್ ಪಾಸ್ ದುರಂತ ತಪ್ಪಿಸಲು ಬಿಬಿಎಂಪಿಯಿಂದ ಮೆಗಾ ಪ್ಲಾನ್
ಭಾನುವಾರ ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ಕೆಆರ್ ಸರ್ಕಲ್ ಬಳಿ ಅಂಡರ್ ಪಾಸ್‌ನಲ್ಲಿ ನೀರು ತುಂಬಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಮಾತ್ರವಲ್ಲದೆ ಹಲವು ಅಂಡರ್ ಪಾಸ್‌ಗಳು ಜಲಾವೃತವಾದ ಪರಿಣಾಮ, ವಾಹನ ಸವಾರರು ಪರದಾಡುವಂತಾಯಿತು. ಮುಂದಿನ ದಿನಗಳಲ್ಲಿ ಇಂತಹ ಅನಾಹುತ ಸಂಭವಿಸದಂತೆ ಬಿಬಿಎಂಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಅಂಡರ್ ಪಾಸ್‌ಗಳಲ್ಲಿ ನೀರು ತುಂಬಿ ಆಗುವ ಅನಾಹುತ ತಡೆಯಲು ಮೂರು ಸೂತ್ರಗಳನ್ನು ಅಳವಡಿಸಿಕೊಳ್ಳಲು ಬಿಬಿಎಂಪಿ ಮುಂದಾಗಿದೆ. ಮೊದಲನೆಯದಾಗಿ ಅಂಡರ್ ಪಾಸ್‌ನ ಇಳಿಯುವ ಮತ್ತು ಏರುವ ಎರಡೂ ಕಡೆಗಳಲ್ಲಿ ಪ್ರತ್ಯೇಕ ಚರಂಡಿಗಳನ್ನು ನಿರ್ಮಾಣ ಮಾಡುವುದು, ಅದನ್ನು ನೇರವಾಗಿ ರಾಜಕಾಲುವೆಗೆ ಸಂಪರ್ಕಿಸುವುದು.

ಎರಡನೆಯದಾಗಿ, ಮಳೆ ನೀರು ಸೇತುವೆಗೆ ಹೋಗದಂತೆ ತಡೆಯಲು ಅಂಡರ್ ಪಾಸ್ ಮುಂಭಾಗದಲ್ಲಿ ಪ್ರತ್ಯೇಕ ಚರಂಡಿ ನಿರ್ಮಾಣ ಮಾಡುವುದು. ಮೂರನೆಯದಾಗಿ ಕೆಳಸೇತುವೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡುವುದು, ವರ್ಟಿಕಲ್ ಕ್ಲಿಯರೆನ್ಸ್ ಗೇಜ್ ಬೀಮ್ ಅನ್ನು ಅಳವಡಿಸುವುದು ಮತ್ತು ಬೂಮ್ ಬ್ಯಾರಿಯರ್ ಅಳವಡಿಕೆ ಮಾಡಲು ಬಿಬಿಎಂಪಿ ಮುಂದಾಗಿದೆ.
ನಗರದಲ್ಲಿ ಭಾರಿ ಮಳೆಯಾಗುವ ಸಂದರ್ಭದಲ್ಲಿ ಸಂಚಾರ ಪೊಲೀಸರ ಸಹಾಯದೊಂದಿದೆ, ವಾಹನ ತಡೆ ಕ್ರಮ ಕೈಗೊಳ್ಳಲು ಬಿಬಿಎಂಪಿ ನಿರ್ಧಾರ ಮಾಡಿದೆ. 15 ದಿನಗಳಲ್ಲಿ ಕಾಮಗಾರಿ ಮುಗಿಸುವಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಆದೇಶ ನೀಡಿದ್ದಾರೆ.
ಬಿಬಿಎಂಪಿ ಈಗಾಗಲೇ ತನ್ನ ವ್ಯಾಪ್ತಿಯಲ್ಲಿ ನೀರು ನಿಲ್ಲುತ್ತಿರು ಅಂಡರ್‌ಪಾಸ್‌ಗಳು ಮತ್ತು ಆರ್‌ಯುಬಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೇಕ್ರಿ ಸರ್ಕಲ್, ಕಾವೇರಿ ಜಂಕ್ಷನ್ ಮತ್ತು ಕದಿರೇನಹಳ್ಳಿ, ಮಾರತ್ತಹಳ್ಳಿ ಅಂಡರ್‌ಪಾಸ್ ಮತ್ತು ನಾಯಂಡಹಳ್ಳಿಯ ಕಿನೋ ಥಿಯೇಟರ್ ಸಮೀಪವಿರುವ ಅಂಡರ್ ಪಾಸ್‌ಗಳು ಸೇರಿ ಒಟ್ಟು 30 ಅಂಡರ್ ಪಾಸ್‌ಗಳಲ್ಲಿ 16 ಅಂಡರ್ ಪಾಸ್‌ಗಳು ಪ್ರವಾಹಕ್ಕೆ ತುತ್ತಾಗಲಿವೆ.
ದೆಹಲಿ ಮಾದರಿ ಅಳವಡಿಕೆ
ದೆಹಲಿಯಲ್ಲಿ ಈಗಾಗಲೇ ಈ ಮಾದರಿಯಲ್ಲಿ ಅಂಡರ್ ಪಾಸ್‌ಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಅಲ್ಲಿಯೂ ಕೂಡ ಮಳೆ ಬಂದಾಗ ಕೆಳಸೇತುವೆಗಳು ಮುಳುಗಡೆಯಾಗುತ್ತಿದ್ದವು, ಆದರೆ ವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಅಂಡರ್ ಪಾಸ್‌ನಲ್ಲಿ ನೀರು ನಿಲ್ಲದೆ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ. ಬಿಬಿಎಂಪಿ ಕೂಡ ಇದೇ ಮಾದರಿಯಲ್ಲಿ ಅಂಡರ್ ಪಾಸ್‌ಗಳನ್ನು ನಿರ್ವಹಣೆ ಮಾಡಲು ಮುಂದಾಗಿದೆ.
ಈ ಬಾರಿಯಾದರೂ ಮಳೆಯಿಂದ ಸಮಸ್ಯೆ ತಪ್ಪುತ್ತಾ?
ಪ್ರತಿ ವರ್ಷ ಮಳೆ ಬಂದಾಗಲೂ ಬೆಂಗಳೂರಿನಲ್ಲಿ ಒಂದಿಲ್ಲೊಂದು ಸಮಸ್ಯೆ ಉಂಟಾಗುತ್ತಲೇ ಇದೆ, ಸಾಧಾರಣ ಮಳೆಗೆ ಹಲವು ಅಂಡರ್ ಪಾಸ್‌ಗಳು ಮುಳುಗಡೆಯಾಗುವುದು, ರಸ್ತೆಗಳು ಜಲಾವೃತವಾಗುವುದು ಸಾಮಾನ್ಯ ಎನ್ನುವಂತಾಗಿದೆ. ಇನ್ನು ಕಳೆದ ವರ್ಷದಂತೆ ಭಾರಿ ಮಳೆಯಾದರೆ ಪ್ರವಾಹ ಪರಿಸ್ಥಿತಿ ಎದುರಾಗುತ್ತದೆ. ಈ ಬಾರಿಯಾದರೂ ಬಿಬಿಎಂಪಿ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ ಮಳೆಯಿಂದ ಹೆಚ್ಚಿನ ಹಾನಿಯಾಗಂತೆ ನೋಡಿಕೊಳ್ಳಲಿ ಎಂದು ಜನ ನಿರೀಕ್ಷೆ ಮಾಡುತ್ತಿದ್ದಾರೆ.












Click it and Unblock the Notifications