E-Khata: ಆಸ್ತಿಯ ಜಂಟಿ ಮಾಲೀಕರಿಗೆ ಹೊಸ ಸಮಸ್ಯೆ
ಬೆಂಗಳೂರು, ನವೆಂಬರ್ 30: ಇ-ಖಾತಾ ಪಡೆಯುವಲ್ಲಿ ಹಲವಾರು ಸಮಸ್ಯೆಗಳಿವೆ, ಇವುಗಳನ್ನು ಬಗೆಹರಿಸಲು ಹಲವು ಕ್ರಮಗಳನ್ನು ಸಹ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೈಗೊಳ್ಳುತ್ತಿದೆ. ನಗರದಲ್ಲಿ ಜಂಟಿ ಆಸ್ತಿ ಮಾಲೀಕರು ಹೆಚ್ಚು, ಈ ಕುರಿತು ಸಮಸ್ಯೆಯೊಂದು ಈಗ ಇ-ಖಾತಾ ಪಡೆಯುವಾಗ ಎದುರಾಗಿದೆ. ಇದಕ್ಕೆ ಪಾಲಿಕೆ ಅಧಿಕಾರಿಗಳು ಸಹ ಪರಿಹಾರವನ್ನು ಸೂಚಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಒಂದು ಆಸ್ತಿಗೆ ಒಂದಕ್ಕಿಂತ ಹೆಚ್ಚು ಮಾಲೀಕರು ಇದ್ದಾರೆ. ಇಂಹತ ಆಸ್ತಿಗಳ ಮಾಲೀಕರು ಇ-ಖಾತಾ ಪಡೆಯುವಾಗ ಮೊದಲು ಯಾರ ಹೆಸರು, ಆಧಾರ್ ಕಾರ್ಡ್ ವಿವರ ಸಲ್ಲಿಕೆ ಮಾಡಲಾಗುತ್ತದೆಯೋ ಅವರ ಆಸ್ತಿ ವಿವರ ಸಿಗುತ್ತಿದೆ. ಜಂಟಿ ಖಾತೆಯಲ್ಲಿ ಇತರ ಮಾಲೀಕರ ಹೆಸರು ಸೇರಿಸಲು ಆಗುತ್ತಿಲ್ಲ ಎಂದು ದೂರುಗಳು ಬರುತ್ತಿವೆ.

ಏನಿದು ಸಮಸ್ಯೆ?; ಉದಾಹರಣೆಗೆ ರಮೇಶ್ ಎಸ್. ಎಂಬುವವರು ಜಂಟಿಯಾಗಿ ಆಸ್ತಿಯನ್ನು ಹೊಂದಿದ್ದಾರೆ. ಇವರು ಇ-ಖಾತಾ ಪಡೆಯಲು ವಿವರ ಭರ್ತಿ ಮಾಡಿದಾಗ ಆಸ್ತಿ ರಮೇಶ್ ಅವರಿಗೆ ಸೇರಿದ್ದು ಎಂದು ಕರಡು ಇ-ಖಾತಾ ತೋರಿಸುತ್ತಿದೆ. ಇತರ ಮಾಲೀಕರ ಹೆಸರು ಅದು ತೋರಿಸುತ್ತಿಲ್ಲ. ಇತರ ಮಾಲೀಕರ ಹೆಸರು ಸೇರಿಸಲು ಅಲ್ಲಿ ಆಯ್ಕೆಗಳು ಸಹ ಇಲ್ಲ.
ಜಂಟಿ ಆಸ್ತಿ ಇರುವಾಗ ಇ-ಖಾತಾದಲ್ಲಿ ಎಲ್ಲಾ ಮಾಲೀಕರ ಹೆಸರು ಸೇರಿಸಬೇಕು, ಇಲ್ಲವಾದಲ್ಲಿ ಭವಿಷ್ಯದಲ್ಲಿ ತೊಂದರೆ ಉಂಟಾಗಲಿದೆ ಎಂದು ಆಸ್ತಿ ಮಾಲೀಕರು ಹೇಳಿದ್ದಾರೆ. ನಗರದಲ್ಲಿ ಎರಡು, ಮೂರು ಹೀಗೆ ಹಲವು ಮಾಲೀಕರು ಇರುವ ಆಸ್ತಿಗಳು ಹೆಚ್ಚಿದ್ದು, ಈ ಸಮಸ್ಯೆ ಪರಿಹಾರಕ್ಕೆ ಬಿಬಿಎಂಪಿ ಗಮನಹರಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಎಆರ್‌ಒ ಮಟ್ಟದ ಅಧಿಕಾರಿಗಳಿಗೆ ಈ ಸಮಸ್ಯೆ ಹೇಗೆ ಪರಿಹರಿಸಬೇಕು? ಎಂಬುದು ತಿಳಿದಿಲ್ಲ. ಅವರು ಬಿಬಿಎಂಪಿ ಅಧಿಕಾರಿಗಳ ಕಡೆ ಕೈ ತೋರಿಸಿದ್ದಾರೆ. ಬಿಬಿಎಂಪಿ ನಗರದ ಸುಮಾರು 22 ಲಕ್ಷ ಆಸ್ತಿಗಳ ಕರಡು ಇ-ಖಾತಾ ರಚನೆ ಮಾಡಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ದಿನ ದಿನಕ್ಕೆ ಹೊಸ ಹೊಸ ಸಮಸ್ಯೆಗಳನ್ನು ಆಸ್ತಿ ಮಾಲೀಕರು ಎದುರಿಸುತ್ತಿದ್ದಾರೆ.
ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಮೌನೀಶ್ ಮೌದ್ಗಿಲ್ ಈ ಸಮಸ್ಯೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ, "ಕಾವೇರಿ ಸಾಫ್ಟ್‌ವೇರ್‌ನ ಸೇಲ್ ಡೀಡ್‌ನಲ್ಲಿ ಒಂದು ಲೈನ್‌ನಲ್ಲಿ ಮಾಲೀಕರ ಹೆಸರು ಇದ್ದರೆ ಮುಂದಿನ ಲೈನ್‌ನಲ್ಲಿ ಮತ್ತೊಬ್ಬ ಮಾಲೀಕರ ಹೆಸರು ಸೇರಿಸಬಹುದು. ಇ-ಖಾತಾ ಮೊದಲು ಯಾವ ಮಾಲೀಕರು ಆಧಾರ್ ಮಾಹಿತಿ ಅಪ್‌ಲೋಡ್ ಮಾಡಿದ್ದಾರೆಯೋ ಅವರ ಹೆಸರಿನಲ್ಲಿ ಬರುತ್ತಿದೆ" ಎಂದು ಹೇಳಿದ್ದಾರೆ.
"ಈ ಸಮಸ್ಯೆಗೆ ಪರಿಹಾರ ಎಂದರೆ ಬಿಬಿಎಂಪಿ ವ್ಯವಸ್ಥೆಯಲ್ಲಿ ಓನರ್ ಹೆಸರು ಸೇರಿಸು ಎಂಬ ಆಯ್ಕೆ ಇದೆ. ಈ ಆಯ್ಕೆಯಲ್ಲಿ ಮಾಲೀಕರ ಹೆಸರು ಸೇರಿಸಿದರೆ ಎಲ್ಲಾ ಮಾಲೀಕರ ಹೆಸರಿನಲ್ಲಿ ಜಂಟಿ ಇ-ಖಾತಾ ಬರುತ್ತದೆ" ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
"ಒಂದು ಬಾರಿ ಬಿಬಿಎಂಪಿ ವೆಬ್‌ಸೈಟ್‌ಗೆ ಡೀಡ್ ನಂಬರ್ ಸೇರಿಸಿದರೆ, ಅದು ಕಾವೇರಿ ತಂತ್ರಾಶದಿಂದಲೂ ಮಾಹಿತಿಯನ್ನು ಪಡೆದುಕೊಳ್ಳುತ್ತದೆ. ಬಿಬಿಎಂಪಿ ತಂತ್ರಾಂಶದಲ್ಲಿ ಯಾವುದೇ ಬದಲಾವಣೆಯನ್ನು ಮಾಡಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ.
ಕೆಲವು ಸಣ್ಣಪುಟ್ಟ ಬದಲಾವಣೆಯನ್ನು ಮಾಡಲಾಗುತ್ತದೆ. ಜಂಟಿ ಆಸ್ತಿ ಮಾಲೀಕತ್ವ ಹೊಂದಿರುವ ಮಾಲೀಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಭರವಸೆ ಕೊಟ್ಟಿದ್ದಾರೆ.












Click it and Unblock the Notifications