ಗೊರಗುಂಟೆ ಪಾಳ್ಯ ಜಂಕ್ಷನ್ ಸಂಚಾರ ದಟ್ಟಣೆ ತಪ್ಪಿಸಲು ಹೊಸ ಯೋಜನೆ
ಬೆಂಗಳೂರು, ಜೂನ್ 29: ಬೆಂಗಳೂರಿನಲ್ಲಿ ಅತಿಹೆಚ್ಚು ಸಂಚಾರಿ ದಟ್ಟಣೆ ಉಂಟಾಗುವ ಜಂಕ್ಷನ್ ಯಾವುದು ಗೊತ್ತಾ. ಸಂಚಾರಿ ದಟ್ಟಣೆ ಉಂಟಾಗಲು ಕಾರಣವೇನು? ಯಾವ ಕ್ರಮವನ್ನು ಕೈಗೊಂಡರೆ ಸಂಚಾರಿ ದಟ್ಟಣೆಯನ್ನು ಕಡಿಮೆ ಮಾಡಬಹುದು. ಗೊರಗುಂಟೆ ಪಾಳ್ಯ ಜಂಕ್ಷನ್ ರಿಪೋರ್ಟ್ ಇಲ್ಲಿದೆ.
ನಗರದ ಗೊರಗುಂಟೆಪಾಳ್ಯ ಜಂಕ್ಷನ್ ಮೂಲಕ ಸುಮಾರು 20 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಪ್ರತಿನಿತ್ಯ ಸಹಸ್ರಾರು ವಾಹನಗಳು ಸಂಚರಿಸಲಿವೆ. ವಾರದ ಕೊನೆಯ ದಿನ ಸಂಚಾರ ದಟ್ಟಣೆ ಇನ್ನೂ ಹೆಚ್ಚಾಗಿ ಸಾಲುಗಟ್ಟಲೆ ವಾಹನಗಳು ನಿಂತಿರುತ್ತವೆ. ಈ ಪೈಕಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಅಲ್ಪಾವಧಿಯ ಯೋಜನೆಗಳನ್ನು ಕೈಗೆತ್ತಿಕೊಂಡು ಅವುಗಳನ್ನು ತುರ್ತಾಗಿ ಪೂರ್ಣಗೊಳಿಸುವುದರಿಂದ ವಾಹನ ಸಂಚಾರ ದಟ್ಟಣೆ ಶೇ 20 ಸುಧಾರಿಸಲಿದೆ.
ಗೊರಗುಂಟೆ ಪಾಳ್ಯ ಜಂಕ್ಷನ್‌ನಲ್ಲಿ ಬಸ್‌ಗಳು ರಸ್ತೆಯಲ್ಲೇ ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಈ ಪೈಕಿ ಪೀಣ್ಯ ಬಸ್ ಟರ್ಮಿನಲ್‌ಗೆ ಬಸ್‌ಗಳು ಹೋಗುವ ವ್ಯವಸ್ಥೆ ಮಾಡಿದರೆ ಬಹುತೇಕ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಆದ್ದರಿಂದ ಕೆ. ಎಸ್. ಆರ್. ಟಿ. ಸಿ ಮತ್ತು ಖಾಸಗಿ ಬಸ್‌ಗಳ ಸಂಚಾರವನ್ನು ನಗರದೊಳಗೆ ನಿರ್ಬಂಧಿಸಿ ಪೀಣ್ಯ ಬಸ್ ಟರ್ಮಿನಲ್ ಬಳಿಯೇ ಬಸ್ ನಿಲುಗಡೆ ಮಾಡುವ ಸಂಬಂಧ ಕೆಎಸ್‌ಆರ್‌ಟಿಸಿ ಇಲಾಖೆ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.

ಪಾದಚಾರಿ ಮೇಲ್ಸೇತುವೆ ತುರ್ತಾಗಿ ನಿರ್ಮಾಣ
ರಸ್ತೆ ಹಾಳಾಗಿದ್ದು, ದುರಸ್ತಿ ಕಾರ್ಯವನ್ನು ಕೂಡಲೇ ಆರಂಭಿಸಿ ರಸ್ತೆಯನ್ನು ಮಿಲ್ಲಿಂಗ್(ರಸ್ತೆ ಮೇಲ್ಪದರವನ್ನು ಯಂತ್ರದ ಮೂಲಕ ಕೆರೆದು ಡಾಂಬರೀಕರಣ ಮಾಡುವುದು) ಮಾಡಿ ರಾತ್ರಿ ವೇಳೆ ಸಂಚಾರ ದಟ್ಟಣೆ ಕಡಿಮೆಯಿದ್ದು, ಸಂಚಾರಿ ಪೊಲೀಸ್ ಅಧಿಕಾರಿಗಳ ಸಹಯೋಗದೊಂದಿಗೆ ರಾತ್ರಿ 11.00 ಗಂಟೆಯ ನಂತರ ಗುಣಮಟ್ಟ ಕಾಪಾಡಿಕೊಂಡು ರಸ್ತೆ ದುರಸ್ತಿ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಜಂಕ್ಷನ್‌ನಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದಿರುವುದನ್ನು ಗಮನಿಸಿ, ಕೂಡಲೇ ಜಂಕ್ಷನ್ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸದ್ಯ ಇರುವ ಶೌಚಾಲಯವನ್ನು ಮುಚ್ಚಲಾಗಿದ್ದು, ಅದನ್ನು ಕೂಡಲೇ ದುರಸ್ತಿಪಡಿಸಿ ಸಾರ್ವಜನಿಕರು ಉಪಯೋಗಕ್ಕೆ ಅನುವು ಮಾಡಿಕೊಡಬೇಕು. ರಸ್ತೆ ದಾಟುವ ಪ್ರಯಾಣಿಕರ ಸಂಖ್ಯೆ ಹೆಚಿದ್ದು, ಪಿಪಿಪಿ ಮಾದರಿಯಲ್ಲಿ ತ್ವರಿತಗತಿಯಲ್ಲಿ ಪಾದಚಾರಿ ಮೇಲುಸೇತುವೆ ತುರ್ತಾಗಿ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಮೇಲ್ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರಕ್ಕೂ ಅವಕಾಶ
ಎನ್‌ಎಚ್‌ಎಐ ಮೇಲುಸೇತುವೆ ಮೇಲೆ ಭಾರೀ ವಾಹನಗಳ ಸಂಚಾರಕ್ಕೂ ಅವಕಾಶ ಕಲ್ಪಿಸಿದರೆ ಸಂಚಾರ ದಟ್ಟಣೆಯ ಸಮಸ್ಯೆ ಕಡಿಮೆಯಾಗಲಿದ್ದು, ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮಕೊಳ್ಳಬೇಕಿದೆ. ನಾಯಂಡಹಳ್ಳಿ ಜಂಕ್ಷನ್ ಕಡೆಯಿಂದ ಬರುವ ವಾಹನಗಳನ್ನು ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಹೋಗಲು ಪರ್ಯಾಯ ರಸ್ತೆಯಿದ್ದು, ಅದನ್ನು ದುರಸ್ತಿ ಪಡಿಸಿದರೆ ವಾಹನಗಳ ಮಾರ್ಗ ಬದಲಾವಣೆ ಮಾಡಿ ಸಂಚಾರ ದಟ್ಟಣೆಯನ್ನು ನಿವಾರಿಸಬಹುದು. ಈ ನಿಟ್ಟಿನಲ್ಲಿ ಕೂಡಲೆ ರಸ್ತೆ ದುರಸ್ತಿ ಮಾಡಿ ಸೈನೇಜ್ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಬಿಡಿಎ ಅಧಿಕಾರಿಗಳಿಗೆ ನಿರ್ಧಿಷ್ಟ ಸೂಚನೆ
ತುಮಕೂರು ಕಡೆಯಿಂದ ನಗರದೊಳಗೆ ಬರುವ ರಸ್ತೆ ಮಾರ್ಗದಲ್ಲಿ ಅಳವಡಿಸಿ ದೊಡ್ಡ ಸೈನೇಜ್(ಗ್ಯಾಂಟ್ರಿನ್) ರಸ್ತೆ ಭಾಗದಲ್ಲಿದ್ದು, ಅದನ್ನು ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಂತೆ ಅಳವಡಿಸಿದರೆ ವಾಹನಗಳ ಸಂಚಾರಕ್ಕೆ ಇನ್ನೂ ಹೆಚ್ಚಿನ ಸ್ಥಳಾವಕಾಶ ಸಿಗಲಿದೆ. ಈ ಪೈಕಿ ಕೂಡಲೆ ಗ್ಯಾಂಟ್ರಿನ್ ಅನ್ನು ಬದಲಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಹೆಬ್ಬಾಳದ ಕಡೆಯಿಂದ ಬರುವ ರಸ್ತೆ ಮಾರ್ಗದ ಜಂಕ್ಷನ್ ನಲ್ಲಿರುವ ಪೊಲೀಸ್ ಕಿಯೋಸ್ಕ್ ರಸ್ತೆಗೆ ಹೊಂದಿಕೊಂಡಿದ್ದು, ಇದರಿಂದ ನಗರದ ಕಡೆ ತಿರುವು ತೆಗೆದುಕೊಳ್ಳುವ ವಾಹನಗಳಿಗೆ ಸಮಸ್ಯೆಯಾಗುವುದನ್ನು ಗಮನಿಸಿ, ವಾಹನಗಳು ಸರಾಗವಾಗಿ ತಿರುವು ತೆಗೆದುಕೊಳ್ಳುವ ಸಲುವಾಗಿ ಪೊಲೀಸ್ ಕಿಯೋಸ್ಕ್ ಅನ್ನು ತೆರವು ಮಾಡಿ ಪಕ್ಕದಲ್ಲಿರುವ ಖಾಲಿ ಸ್ಥಳಕ್ಕೆ ಸ್ಥಳಾಂತರಿಸಿ ವಾಹನಗಳು ಸರಾಗವಾಗಿ ತಿರುವು ತೆಗೆದುಕೊಳ್ಳುವಂತೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ದೀರ್ಘಾವಧಿ ಯೋಜನೆಗಳು
ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಬಿಬಿಎಂಪಿ ಎರಡು ರೀತಿಯ ಯೋಜನೆಯನ್ನು ಹಾಕಿ ಕೊಂಡಿದೆ. ಅಲ್ಪಾವಧಿ ಯೋಜನ ಮತ್ತು ದೀರ್ಘಾವಧಿ ಯೋಜನೆಯನ್ನು ಹಾಕಿಕೊಂಡಿದೆ.
ಅಲ್ಪಾವಧಿಯ ಯೋಜನೆಗಳು:
*ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವುದು
*ಪಾದಚಾರಿ ಮೇಲುಸೇತುವೆ ನಿರ್ಮಾಣ
*ಸಾರ್ವಜನಿಕ ಶೌಚಾಲಯ ನಿರ್ಮಾಣ
*ಪಾದಚಾರಿ ಮಾರ್ಗ ದುರಸ್ತಿಪಡಿಸಿ, ಪಾದಚಾರಿ ಮಾರ್ಗ ಇಲ್ಲದಿರುವ ಕಡೆ ಹೊಸದಾಗಿ ನಿರ್ಮಿಸುವುದು
*ಬೀದಿ ದೀಪಗಳನ್ನು ಅಳವಡಿಸುವುದು
*ಸೈನೇಜ್ ಇರುವ ಗ್ಯಾಂಟ್ರಿಯನ್ನು ಬದಲಾಯಿಸಲು ಬಿಡಿಎ ಅಧಿಕಾರಿಗಳಿಗೆ ಸೂಚನೆ.
*ಎನ್. ಹೆಚ್. ಎ. ಐ ಮೇಲುಸೇತುವೆ ಮೂಲಕ ಭಾರಿ ವಾಹನಗಳ ಸಂಚಾರಕ್ಕೂ ಅವಕಾಶ ಕಲ್ಪಿಸಲು ಪರಿಶೀಲನೆ ಮಾಡಲು ಸೂಚನೆ.
*ಪೀಣ್ಯದಲ್ಲಿರುವ ಬಸ್ ಟರ್ಮಿನಲ್ ಗೆ ಸರ್ಕಾರಿ ಹಾಗೂ ಖಾಸಗಿ ಬಸ್ ಗಳು ತೆರಳುವ ವ್ಯವಸ್ಥೆ ಮಾಡಲು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಸೂಚನೆ.
ದೀರ್ಘಾವಧಿ ಯೋಜನೆ:
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಪ್ಲಾನ್ ಮಾಡುತ್ತಿದ್ದು, ಸಮರ್ಪಕ ಯೋಜನೆ ರೂಪಿಸಲು ಬಿಡಿಎ ಆಯುಕ್ತರಿಗೆ ಸೂಚನೆಯನ್ನು ನೀಡುವುದಾಗಿದೆ.












Click it and Unblock the Notifications