Bengaluru Bandh: ಯಶಸ್ವಿ ಬಂದ್ ಮುಕ್ತಾಯ, ಬಹುತೇಕ ಸ್ತಬ್ದಗೊಂಡಿದ್ದ ಸಿಲಿಕಾನ್ ಸಿಟಿ
ಬೆಂಗಳೂರು,
ಸೆಪ್ಟಂಬರ್ 26: ಕಾವೇರಿ ನೀರು ಹಂಚಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಬಂದ್ ಬಹುತೇಕ ಯಶಸ್ವಿಯಾಗಿದೆ. ವಿನೂತನವಾಗಿ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆಯುವಲ್ಲಿ ಕನ್ನಡಿಗರು ಯಶಸ್ವಿಯಾಗಿದ್ದಾರೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಸರ್ಕಾರದ ಪರವಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಭಟನಾಕಾರರ ಮನವಿ ಆಲಿಸಿದ್ದಾರೆ. ಇದರ ನಡುವೆ, ಕಾವೇರಿ ಪ್ರಾಧಿಕಾರ ಮತ್ತೆ ಮೂರು ಸಾವಿರ ಕ್ಯೂಸೆಕ್ಸ್ ನೀರು, ಮುಂದಿನ 18ದಿನದ ವರೆಗೆ ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿದೆ. id="toptextpromo">
ಕಾಂಗ್ರೆಸ್ ಕರ್ನಾಟಕಕ್ಕೆ ದ್ರೋಹ ಬಗೆದಿದೆ
I.N.D.I.A ಮೈತ್ರಿಕೂಟವನ್ನು ಮೆಚ್ಚಿಸಲು ಕಾಂಗ್ರೆಸ್ ಕರ್ನಾಟಕಕ್ಕೆ ದ್ರೋಹ ಬಗೆದಿದೆ. ಸ್ಟಾಲಿನ್ ಸರ್ಕಾರದ ವಾದಕ್ಕೆ ಪ್ರತಿಯಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಬೇಕಾಗಿದ್ದ ಹಲವಾರು ಅಂಶಗಳನ್ನು ಮರೆತ ಪರಿಣಾಮ ಕನ್ನಡಿಗರಿಗೆ ಅನ್ಯಾಯವಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಕಾವೇರಿ ಪ್ರಾಧಿಕಾರದ ಆದೇಶ ಕರ್ನಾಟಕದ ಪಾಲಿಗೆ ಮರಣ ಶಾಸನ- ಬಿಎಸ್‌ವೈ
ಕಾವೇರಿ ಪ್ರಾಧಿಕಾರದ ಆದೇಶ ಕರ್ನಾಟಕದ ಪಾಲಿಗೆ ಮರಣ ಶಾಸನವಾಗಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ರಾಜ್ಯ ಸರ್ಕಾರ ತಮಿಳುನಾಡಿಗೆ ಮತ್ತೆ ನೀರು ಬಿಟ್ಟರೆ, ಕರ್ನಾಟಕದ ಸ್ವಾಭಿಮಾನಕ್ಕೆ ಧಕ್ಕೆಯಾದಂತೆಯೇ ಸರಿ. ಕಾವೇರಿ ನೀರಿನ ಕುರಿತಂತೆ ರಾಜ್ಯ ಸರ್ಕಾರದ ನಿರ್ಲಕ್ಷ್ಯತನದಿಂದ ಇಂದು ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬರದ ಮಧ್ಯೆ ತಮಿಳುನಾಡಿಗೆ ಈಗಾಗಲೇ ಹೆಚ್ಚಿನ ನೀರು ಬಿಟ್ಟು, ರಾಜ್ಯ ಸರ್ಕಾರ ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ತಮಿಳುನಾಡಿನ ರೈತರಿಂದಲೂ ಕಾವೇರಿ ಹೋರಾಟ
ಕಾವೇರಿ ನೀರಿನ ವಿವಾದ ತಮಿಳುನಾಡು & ಕರ್ನಾಟಕ ಸಂಬಂಧವನ್ನು ಹಾಳು ಮಾಡುವ ಜೊತೆಗೆ, ಪ್ರತಿಭಟನೆಯ ಕಿಚ್ಚನ್ನೂ ಹೊತ್ತಿಸಿದೆ. ಇದೇ ವೇಳೆ ಕರ್ನಾಟಕದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದ್ದು ಪ್ರತಿಭಟನೆ ತೀವ್ರವಾಗಿದೆ. ಹೀಗೆ ಕರ್ನಾಟಕ ಮಾತ್ರವಲ್ಲ ತಮಿಳುನಾಡಿನಲ್ಲೂ ಪ್ರತಿಭಟನೆ ಶುರುವಾಗಿದೆ. ಅದರಲ್ಲೂ ತಮಿಳುನಾಡಿಗೆ ಸುಮಾರು 5 ಸಾವಿರ ಕ್ಯೂಸೆಕ್ ನೀರು ಹರಿಸಿದರೂ ತಮಿಳುನಾಡಿನ ರೈತರು ಕರ್ನಾಟಕ ಸರ್ಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ತಲೆ ಬುರುಡೆ ಹಾಗೂ ಸತ್ತ ಇಲಿಗಳ ಜೊತೆ ತೀವ್ರ ಹೋರಾಟ ಆರಂಭಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿಕೆ

ಬೆಂಗಳೂರಿನಲ್ಲಿ ಮುಂಜಾಗೃತಾ ಕ್ರಮವಾಗಿ ಬಂಧಿಸಿದವರನ್ನು ಬಿಡುಗಡೆ ಮಾಡಲಾಗಿದೆ, ಬಿಎಂಟಿಸಿ ಬಸ್ ಸಂಚಾರ ಮತ್ತೆಆರಂಭವಾಗಿದೆ. ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ - ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿಕೆ
ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕಕ್ಕೆ ಎದುರಾಗಿರುವ ಅನ್ಯಾಯವನ್ನು ಪ್ರಶ್ನಿಸಿ ಇಂದು ಬೆಂಗಳೂರು ಬಂದ್‌ಗೆ ಕರೆ ನೀಡಿಲಾಗಿತ್ತು. ಕನ್ನಡಪರ ಸಂಘಟನೆಗಳು & ರೈತ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಬಂದ್ ಬೆಂಬಲಿಸಿದ್ದವು. ಈ ಹಿನ್ನೆಲೆ ಬೆಂಗಳೂರು ನಗರದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆದಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ. ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಎಂದು ಅವರು ತಿಳಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಮೂವರು ಶಾಸಕರನ್ನು ವಶಕ್ಕೆ ಪಡೆದು ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.
ಮಾತುಕತೆಗೆ ತಮಿಳುನಾಡು ಸರ್ಕಾರದ ಮನವೊಲಿಸಲಿ: ಬೊಮ್ಮಾಯಿ
ಇಂಡಿಯಾ ಮೈತ್ರಿಕೂಟದ ಡಿಎಂಕೆ ಹಿತ ಕಾಯಲು ರಾಜ್ಯ ಸರ್ಕಾರ ರಾಜ್ಯದ ಹಿತ ಬಲಿಕೊಡುತ್ತಿದ್ದು, ಕಾವೇರಿ ಸಮಸ್ಯೆ ಪರಿಹಾರಕ್ಕೆ ಮಾತುಕತೆಗೆ ತಮಿಳುನಾಡಿನ ಸರ್ಕಾರದ ಮನವೊಲಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.
ಕುಸಿದ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ
ಕಾವೇರಿ ನದಿ ನೀರಿನ ವಿಚಾರಕ್ಕಾಗಿ ಫೈಟಿಂಗ್ ನಡೆಯುವಾಗಲೇ ಕನ್ನಡಿಗರಿಗೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುವ KRS ಡ್ಯಾಂನಲ್ಲಿ ಇದೀಗ ಕೇವಲ 20 ಟಿಎಂಸಿ ನೀರು ಬಾಕಿ ಉಳಿದಿದ್ದು, ಬೆಂಗಳೂರು ನಗರಕ್ಕೆ ಕುಡಿಯಲು ಪ್ರತಿ ತಿಂಗಳು 1.5 ಟಿಎಂಸಿ ನೀರು ಬೇಕಿದೆ. ಜಲಾಶಯಕ್ಕೆ ಒಳಹರಿವು 7,134 ಕ್ಯೂಸೆಕ್ ಇದ್ದು, ಹೊರಹರಿವು 5,688 ಕ್ಯೂಸೆಕ್ ದಾಖಲಾಗಿದೆ. ಈ ಮೂಲಕ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 96.80 ಅಡಿಗೆ ಕುಸಿದು ಬಿದ್ದಿದೆ.
ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶ ನೀಡಿರುವುದು ಮಂಡ್ಯ ಭಾಗದ ರೈತರನ್ನು ಮತ್ತಷ್ಟು ಕೆರಳಿಸಿದೆ. ಆದೇಶ ಹೊರಬರುತ್ತಿದ್ದಂತೆ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ರೈತರು ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಪ್ರತಿಭಟೆ ಮಾಡಿದ್ದಾರೆ.
ಕಾವೇರಿ ಮತ್ತು ಕನ್ನಡಿಗರ ಪಾಲಿಗೆ ಮರಣಶಾಸನ: ಎಚ್ ಡಿ ಕುಮಾರಸ್ವಾಮಿ
ಪೆಟ್ಟಿನ ಮೇಲೆ ಪೆಟ್ಟು ತಿನ್ನುತ್ತಿರುವ ಕರ್ನಾಟಕಕ್ಕೆ ಈಗ ಮತ್ತೆ ದೊಡ್ಡ ಹಿನ್ನಡೆ ಆಗಿದೆ. ಹಿನ್ನಡೆ ಎನ್ನುವುದು ನಿರಂತರವಾಗಿದ್ದು, ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಇನ್ನೂ 18 ದಿನಗಳ ಕಾಲ ನಿತ್ಯವೂ 3,000 ಕ್ಯೂಸೆಕ್ ಹರಿಸಲು ಕರ್ನಾಟಕಕ್ಕೆ ಇಂದು ಆದೇಶ ನೀಡಿದೆ. ಇದು ನಿಜಕ್ಕೂ ಆಘಾತಕಾರಿ, ಕಾವೇರಿ ಮತ್ತು ಕನ್ನಡಿಗರ ಪಾಲಿಗೆ ಮರಣಶಾಸನ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ಪೆಟ್ಟಿನ ಮೇಲೆ ಪೆಟ್ಟು ತಿನ್ನುತ್ತಿರುವ ಕರ್ನಾಟಕಕ್ಕೆ ಈಗ ಮತ್ತೆ ದೊಡ್ಡ ಹಿನ್ನಡೆ ಆಗಿದೆ. ಹಿನ್ನಡೆ ಎನ್ನುವುದು ನಿರಂತರವಾಗಿದ್ದು, ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಇನ್ನೂ 18 ದಿನಗಳ ಕಾಲ ನಿತ್ಯವೂ 3,000 ಕ್ಯೂಸೆಕ್ ಹರಿಸಲು ಕರ್ನಾಟಕಕ್ಕೆ ಇಂದು ಆದೇಶ ನೀಡಿದೆ. ಇದು ನಿಜಕ್ಕೂ ಆಘಾತಕಾರಿ, ಕಾವೇರಿ ಮತ್ತು ಕನ್ನಡಿಗರ…
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) September 26, 2023
ಪ್ರತಿಭಟನೆಗೆ ನಮ್ಮ ತಕರಾರಿಲ್ಲ
ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು 144 ಸೆಕ್ಷನ್ ಜಾರಿ ಮಾಡಲಾಗಿದೆ. ರಾಜ್ಯದ ಹಾಗೂ ಜನತೆಯ ಹಿತದೃಷ್ಟಿಯಿಂದ ಆದೇಶ ಮಾಡಲಾಗಿದೆ. ಬಿಜೆಪಿಯವರನ್ನು ಮೊದಲು ಚಡ್ಡಿಗಳು ಎಂದೇ ಕರೆಯಲಾಗುತ್ತಿತ್ತು, ಈಗ ಚಡ್ಡಿ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಪ್ರತಿಭಟನೆಗೆ ನಮ್ಮ ತಕರಾರಿಲ್ಲ. ಆದರೆ ರಾಜಕೀಯ ಲಾಭಕ್ಕಾಗಿ ನೆಲ, ಜಲ, ಭಾಷೆಯ ವಿಷಯವನ್ನು ರಾಜಕಾರಣ ಮಾಡಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಬುದ್ದಿನೇ ಇಲ್ಲ: ಜಿ ಟಿ ದೇವೇಗೌಡ ಕಿಡಿ
ರಾಜ್ಯಾದ್ಯಂತ ಕಾವೇರಿಗಾಗಿ ಹಲವು ಸಂಘಟನೆಗಳು ಹೋರಾಟ ಮಾಡುತ್ತಿದ್ದು, ಈ ಕಾಂಗ್ರೆಸ್ ಸರ್ಕಾರಕ್ಕೆ ಬುದ್ದಿನೇ ಇಲ್ಲ, 144 ಹಾಕಿ ಹೋರಾಟಗಾರರನ್ನ ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ ಎಂದು ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಹಿರಿಯ ನಾಯಕ ಜಿ ಟಿ ದೇವೇಗೌಡ ಕಿಡಿಕಾರಿದ್ದಾರೆ.
ಕಾವೇರಿ ವಿಚಾರದಲ್ಲಿ ಮಾಜಿ ಪ್ರಧಾನಿ ಸಲಹೆ
ಕರ್ನಾಟಕ ಹಾಗೂ ತಮಿಳುನಾಡು ನಡುವೆ ಕಾವೇರಿ ನೀರಿನ ವಿಚಾರ ಕಿಚ್ಚು ಹೊತ್ತಿಸಿದೆ. ಈ ಮಧ್ಯೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರತಿಕ್ರಿಯೆ ನೀಡಿದ್ದು, ಭಾರತ-ಬಾಂಗ್ಲಾ ನಡುವಿನ 30 ವರ್ಷದ ನೀರಿನ ಸಮಸ್ಯೆಯನ್ನ ನನಗೆ ಸಿಕ್ಕ 10 ತಿಂಗಳ ಅಧಿಕಾರ ಅವಧಿಯಲ್ಲಿ ಬಗೆಹರಿಸಿದ್ದೆ. ಕಾಂಗ್ರೆಸ್ ನೇತೃತ್ವದ ಯುಪಿಎ 10 ವರ್ಷ ಆಡಳಿತ ನಡೆಸಿತ್ತು. ಈಗ ಎನ್‌ಡಿಎ ಸರ್ಕಾರ 2ನೇ ಬಾರಿ ಆಡಳಿತ ನಡೆಸುತ್ತಿದೆ ಎಂದಿದ್ದಾರೆ. ಈ ಮೂಲಕ ಕೇಂದ್ರ ಮಧ್ಯಪ್ರವೇಶ ಮಾಡಲಿ ಎಂಬ ಆಗ್ರಹವನ್ನು ಮಾಜಿ ಪ್ರಧಾನಿ ಎಚ್‌ಡಿಡಿ ವ್ಯಕ್ತಪಡಿಸಿದ್ದಾರೆ.
ಬಂದ್‌ನಿಂದ ಪ್ರಯೋಜನವಿಲ್ಲ : ಪ್ರಿಯಾಂಕ್ ಖರ್ಗೆ
ಬಂದ್ ಮಾಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. ಕಾವೇರಿ ವಿಚಾರದಲ್ಲಿ ಸರ್ಕಾರ ಮತ್ತು ಸಂಘಟನೆ ಜನರ ಅಭಿಪ್ರಾಯ ಒಂದೇ ಆಗಿದೆ. ಎಲ್ಲರೂ ಜೊತೆಯಲ್ಲಿ ಇದ್ದರೆ ಸರ್ಕಾರಕ್ಕೆ ಶಕ್ತಿ ಬರಲಿದೆ, ಹನಿ ನೀರು ಕೊಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಹೇಳಿದ್ದೇವೆ. ಬಂದ್‌ನಿಂದ ಪ್ರಯೋಜನ ಇಲ್ಲ, ಎಲ್ಲರೂ ಸೇರಿ ಸುಪ್ರೀಂಕೋರ್ಟ್ ಮತ್ತು ಕೇಂದ್ರದ ಮೇಲೆ ಒತ್ತಡ ಹಾಕೋಣ ಎಂದರು.
ತಮಿಳುನಾಡಿಗೆ ಮತ್ತೆ 18 ದಿನ ಪ್ರತಿ ದಿನ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನೀಡಿರುವ ಆದೇಶಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮೈಸೂರಿನ ಗನ್‌ಹೌಸ್ ಬಳಿ ಮಾನವ ಸರಪಳಿ ನಿರ್ಮಿಸುವ ಮೂಲಕ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿ ಸಮರ್ಪಕ ವಾದ ಮಂಡಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ತಮಿಳುನಾಡು ಮತ್ತು ಕರ್ನಾಟಕದ ವಿರುದ್ಧ ಘೋಷಣೆ ಕೂಗಿದರು.
ಕಾವೇರಿ ವಿವಾದ: ಕೇಂದ್ರ ಮಧ್ಯ ಪ್ರವೇಶಕ್ಕೆ ಕಾಂಗ್ರೆಸ್ ಆಗ್ರಹ
ಪ್ರತಿಭಟನೆ ಬಿಸಿ ಎದುರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೆ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದೆ. ಕೇಂದ್ರ ಸರ್ಕಾರ ಕಾವೇರಿ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದ ಟ್ವೀಟ್ ಮಾಡಿದೆ. ನೀರಿನ ವಿಚಾರದಲ್ಲೂ ರಾಜಕೀಯ ಹಿತಾಸಕ್ತಿಯನ್ನು ಹುಡುಕುವ ಕೆಲಸವನ್ನು ಮಾಡದೆ ಕೂಡಲೇ ಕರ್ನಾಟಕಕ್ಕೆ ಅನ್ಯಾಯವಾಗುವಂತಹ ಕಾವೇರಿ ನಿರ್ವಹಣಾ ಪ್ರಾಧಿಕಾರದ ತೀರ್ಮಾನವನ್ನು ಪುನರ್ಪರಿಶೀಲನೆ ಮಾಡಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಕೋರಿದೆ.
ಕೇಂದ್ರ ಸರ್ಕಾರ ಕಾವೇರಿ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲಿ
ಕೇಂದ್ರ ಸರ್ಕಾರ ಕಾವೇರಿ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು.
— Karnataka Congress (@INCKarnataka) September 26, 2023
ನೀರಿನ ವಿಚಾರದಲ್ಲೂ ರಾಜಕೀಯ ಹಿತಾಸಕ್ತಿಯನ್ನು ಹುಡುಕುವ ಕೆಲಸವನ್ನು ಮಾಡದೆ ಕೂಡಲೇ ಕರ್ನಾಟಕಕ್ಕೆ ಅನ್ಯಾಯವಾಗುವಂತಹ ಕಾವೇರಿ ನಿರ್ವಹಣಾ ಪ್ರಾಧಿಕಾರದ ತೀರ್ಮಾನವನ್ನು ಪುನರ್ಪರಿಶೀಲನೆ ಮಾಡಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು.@BJP4Karnataka ಸಂಸದರು ಈ…
ಕಾವೇರಿ ನೀರು ಹರಿಸಲು ಮತ್ತೆ ಆದೇಶ
ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಮತ್ತೆ ಆದೇಶ ಹೊರಡಿಸಲಾಗಿದೆ. ದೆಹಲಿಯಲ್ಲಿ ನಡೆದ ಸಿಡಬ್ಲುಆರ್‌ಸಿ ಸಭೆ ಬಳಿಕ ಕರ್ನಾಟಕಕ್ಕೆ ಕಾವೇರಿ ನೀರು ಹರಿಸುವಂತೆ ಮಂಗಳವಾರ ಪುನಃ ಆದೇಶ ಹೊರಡಿಸಲಾಗಿದೆ. ಕಾವೇರಿ ಕೊಳದಲ್ಲಿ ಶೇಕಡಾ 53 ರಷ್ಟು ಮಳೆ ಕೊರತೆ ಆಗಿದ್ದರೂ ಸಹಿತ ಬೆಂಗಳೂರು ಬಂದ್ ಮಧ್ಯೆ ಕರ್ನಾಟಕಕ್ಕೆ ಮತ್ತೊಮ್ಮೆ ಶಾಕ್ ಉಂಟಾಗಿದೆ. ಇತ್ತ ವಿವಿಧ ಸಂಘಟನೆಗಳು ರಾಜ್ಯ ಸರ್ಕಾರ ಸಿಡಬ್ಲುಆರ್‌ಸಿ ನೀಡಿದ ಆದೇಶ ಪಾಲಿಸದಂತೆ ಆಗ್ರಹಿಸಿವೆ.
ಬಂದ್ ನಡುವೆ ಕಾವೇರಿ ಪ್ರಾಧಿಕಾರದ ಶಾಕ್
ಪ್ರತಿದಿನ ಮೂರು ಸಾವಿರ ಕ್ಯೂಸೆಕ್ಸ್ ಬಿಡಲು ಪ್ರಾಧಿಕಾರದ ಶಿಫಾರಸು. ಸೆಪ್ಟಂಬರ್ 28ರಿಂದ ಹದಿನೆಂಟು ದಿನ ನೀರು ಬಿಡಲು ಸೂಚನೆ
ರಸ್ತೆ, ಬಿಎಂಟಿಸಿ ಬಸ್ ತಡೆದು ಪ್ರತಿಭಟನೆ, ಹೋಟೆಲ್‌ನಲ್ಲಿ ಹಲ್ಲೆ
ಜೆಪಿ ನಗರದ ಮಾರೇನಹಳ್ಳಿಯಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರಿಂದ ಬಿಎಂಟಿಸಿ ಬಸ್ ತಡೆದು ಪ್ರತಿಭಟನೆ ಮಾಡಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೊಶ ಹೊರ ಹಾಕಿದರು. ರಸ್ತೆ ತಡೆದು ಪ್ರತಿಭಟಿಸಿದ್ದ ವೇಳೆ ಬಂದ ಬಸ್ ಅನ್ನು ತಡೆದರು. ಈ ವೇಳೆ ಬಿಎಂಟಿಸಿ ಚಾಲಕರು, ಬಸ್ ನಿರ್ವಾಹಕರು ಜೊತೆಗೆ ಧರಣಿ ನಿರತರು ವಾಗ್ವಾದ ನಡೆಸಿದರು.
ಇನ್ನೂ ಜಯನಗರದ ಶ್ರೀ ಉಡುಪಿ ಹಬ್ ಬಂದ್ ಮಾಡುವಂತೆ ಒಳ ನುಗ್ಗಿ ಹಲ್ಲೆ ಮಾಡಲಾಗಿದೆ ಎಂದು ವರದಿ ಆಗಿದೆ.
ಫ್ರಿಡಂ ಪಾರ್ಕ್‌ಗೆ ಸಚಿವ ಭೇಟಿ: ಬಂದ್ ವಾಪಸ್‌ಗೆ ಮನವಿ
ರಾಜ್ಯ ಸರ್ಕಾರದ ಪರವಾಗಿ ಸ್ವಾತಂತ್ರ್ಯ ಉದ್ಯಾನಕ್ಕೆ ಆಗಮಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಸರ್ಕಾರದ ಪರವಾಗಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸುತ್ತಿದ್ದಾರೆ. ಇದೇ ವೇಳೆ ಜಲ ಸಂರಕ್ಷಣಾ ಸಮಿತಿ ಸಂಚಾಲಕ ಕುರುಬೂರು ಶಾಂತಕುಮಾರ್ ಅವರು ಸಚಿವರಿಗೆ ತಮ್ಮ ಮನವಿಯನ್ನು ವಿವರಿಸಿದರು.
ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರಾಜಭವನದ ಎದುರು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ಮಾಡಿದರು. ಪ್ರತಿಭಟನೆ ಸಂದರ್ಭದಲ್ಲಿ ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದು ಸೇರಿದಂತೆ ಹಲವು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತಮಿಳುನಾಡಲ್ಲಿ ಸಿಎಂ ಸಿದ್ದರಾಮಯ್ಯ ಫೋಟೊಗೆ ಹಾರ
ಕಾವೇರಿ ನೀರು ಹಂಚಿಕೆ ಸಂಬಂಧ ರಾಮನಗರದಲ್ಲಿ ಪ್ರತಿಭಟನೆ ವೇಳೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ತಿಥಿ ಕಾರ್ಯ ಮಾಡಲಾಗಿದೆ. ಅವರ ಪೋಟೊಗೆ ಹಾರ ಹಾಕಿ ಬಾಯಿ ಬಡಿದುಕೊಂಡು ಆಕ್ರೋಶ ಹೊರ ಹಾಕಿದ್ದಾರೆ. ಮೈಸೂರಿನಲ್ಲಿ ಸ್ಟಾಲಿನ್ ಶವಯಾತ್ರೆ ಮಾಡಲಾಗಿದೆ. ಇತ್ತ ತಮಿಳುನಾಡಿನಲ್ಲಿ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಹಾರ ಹಾಕಿರುವ ಮಾಹಿತಿ ಲಭ್ಯವಾಗಿದೆ.
ಸೆ.29ಕ್ಕೆ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ: ವಾಟಾಳ್
ಕಾವೇರಿ ನೀರಿನ ಸಮಸ್ಯೆ ಪರಿಹರಿಸಬೇಕು. ಕೇಂದ್ರ ಮಧ್ಯಸ್ತಿಕೆ ವಹಿಸಬೇಕು. ಸೆಪ್ಟಂಬರ್ 29ರಂದು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲಾಗುವುದು. ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಸೆ.29ರಂದು ಸರ್ಕಾರ ಪೊಲೀಸರನ್ನು ಪ್ರತಿಭಟನೆ ತಡೆಗೆ ಬಳಸದಂತೆ ವಾಟಾಳ್ ನಾಗರಾಜ್ ತಿಳಿಸಿದರು.

ಬೆಂಗಳೂರಿನ ಜನರ ಪಾಲಿನ ಜೀವನದಿ ಕಾವೇರಿಯ ಒಡಲನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಬರಿದು ಮಾಡುತ್ತಿದೆ ಎಂದು ಕಾವೇರಿ ಭವನದ ಬಳಿ ಬಿಜೆಪಿ ಪ್ರತಿಭಟನೆ.
KRS ಒಳಹರಿವು ಹತ್ತು ಸಾವಿರ ಕ್ಯೂಸೆಕ್ಸ್

KRS ಒಳಹರಿವು ಹತ್ತು ಸಾವಿರ ಕ್ಯೂಸೆಕ್ಸ್, ಇದೆಕ್ಕೆಲ್ಲಾ ಅಂಕಿಅಂಶವಿದೆ. 12,500 ಕ್ಯೂಸೆಕ್ಸ್ ನೀರು ಬಿಡಬೇಕೆಂದು ತಮಿಳುನಾಡು ಒತ್ತಾಯಿಸಿದರೆ ಅದು ನಮಗೆ ಸಾಧ್ಯವಿಲ್ಲ. ಐದು ಸಾವಿರ ಕ್ಯೂಸೆಕ್ಸ್ ನೀರು ಬಿಡಲೇ ನಮಗೆ ಆಗುತ್ತಿಲ್ಲ. ವ್ಯತಿರಿಕ್ತ ನಿರ್ಧಾರ ಪ್ರಾಧಿಕಾರ ತೆಗೆದುಕೊಂಡರೆ, ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ - ಡಿಸಿಎಂ ಡಿ.ಕೆ.ಶಿವಕುಮಾರ್
12,500 ಕ್ಯೂಸೆಕ್ಸ್ ನೀರು ಬಿಡುವಂತೆ ತಮಿಳುನಾಡು ಪಟ್ಟು
ನವದೆಹಲಿಯಲ್ಲಿ ನಡೆಯುತ್ತಿರುವ ಕಾವೇರಿ ಪ್ರಾಧಿಕಾರದ (CWRC) ಸಭೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ 12,500 ಕ್ಯೂಸೆಕ್ಸ್ ನೀರು ಬಿಡುವಂತೆ ತಮಿಳುನಾಡು ಪಟ್ಟು. ಅಷ್ಟು ನೀರು ಬಿಡಬೇಕು ಎಂದು ಹೇಳಿದ ಕೂಡಲೇ ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕದ ವಾದ.
ರಾಜಭವನ: ಸೆ.29ಕ್ಕೆ ಕರ್ನಾಟಕದಲ್ಲಿ ತೀವ್ರ ಚಳವಳಿ: ವಾಟಾಳ್
ಕಾವೇರಿ ನೀರಿಗಾಗಿ ಬೆಂಗಳೂರು ಬಂದ್‌ಗೆ ಬೆಂಬಲಿಸದ ವಾಟಾಳ್ ನಾಗರಾಜ್ ಅವರು ಪ್ರತ್ಯೇಕವಾಗಿ ರಾಜಭವನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರ್ಯಕರ್ತರ ನೇತೃತ್ವದಲ್ಲಿ ಬಂದು ರಾಜಭವನ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಮಾತನಾಡಿದ ಅವರು ಸೆ.29ರಂದು ಕರ್ನಾಟಕದಾದ್ಯಂತ ತೀವ್ರ ಚಳವಳಿ ಮಾಡಲಾಗುವುದು. ಅಂದು ಎಲ್ಲವು ಬಂದ್ ಆಗಲಿದೆ. ಅಂದು ಒಂದು ಲಕ್ಷ ಜನ ಸೇರಲಿದ್ದಾರೆ ಎಂದು ತಿಳಿಸಿದರು.
'ಇಂದಿರಾ' ಕ್ಯಾಂಟಿನ್‌ಗೂ 'ಬಂದ್' ಬಿಸಿ
ಕಾವೇರಿಗಾಗಿ ಬೆಂಗಳೂರಿನಲ್ಲಿ ಬಂದ್, ಪ್ರತಿಭಟನೆ ಮುಂದುವರಿದಿದೆ. ಈ ಸಂಬಂಧ ಜನರ ಸಂಚಾರ, ವ್ಯಾಪಾರ ವಹಿವಾಟು ಇಲ್ಲದಾಗಿದೆ. ಅಲ್ಲಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಬಂದ್ ಬಿಸಿ ತಟ್ಟಿದೆ. ಬೆಳಗ್ಗೆಯಿಂದ ಕೇವಲ 20 ಮಂದಿ ಮಾತ್ರವೇ ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಮಾಡಿದ್ದಾರೆ.
CWRC ಸಭೆ: ನೀರು ಬಿಡಲು ಆದೇಶಿಸಿದರೆ ಮತ್ತೆ ಹೋರಾಟ ತೀವ್ರ?
ದೆಹಲಿಯ ಕಾವೇರಿ ನೀರು ನಿರ್ವಹಣೆ ಸಮಿತಿ ಕಚೇರಿಯಲ್ಲಿ ಸಭೆ ಆರಂಭವಾಗಿದೆ. ನಿತ್ಯವು 12,500 ಕ್ಯೂಸೆಕ್ ನೀರು ಹರಿಸುವಂತೆ ತಮಿಳುನಾಡು ಸರ್ಕಾರ ವಾದ ಮಂಡಿಸುತ್ತಿದೆ. ಕರ್ನಾಟಕ ಈ ವರೆಗೆ 40 ಟಿಎಂಸಿ ನೀರು ಹರಿಸಿದೆ. ಸಭೆ ಬಳಿಕ ಪೂರ್ಣ ಮಾಹಿತಿ ತಿಳಿದು ಬರಲಿದೆ. ಒಂದು ವೇಳೆ ನೀರು ಹರಿಸುವಂತೆ ಸೂಚನೆ ನೀಡಿದ್ದೇ ಆದರೆ ಬೆಂಗಳೂರಲ್ಲಿ ಇನ್ನಷ್ಟು ತೀವ್ರ ಪ್ರತಿಭಟನೆ ನಡೆಸುವ ಸಂಭವವಿದೆ.
ಕಾವೇರಿಗಾಗಿ 'ರಕ್ತ' ಕೊಟ್ಟ ಪ್ರತಿಭಟನಾಕಾರರು
ಬೆಂಗಳೂರಿನಲ್ಲಿ ಪ್ರತಿಭಟನೆ ವ್ಯಾಪಿಸುತ್ತಿದೆ. ಪ್ರತಿಭಟನೆ ಮಾಡುತ್ತಿದ್ದ 'ಜಯಕರ್ನಾಟಕ' ಸಂಘಟನೆ ಸದಸ್ಯರು ಕೈಯಲ್ಲಿ ಸಿರೆಂಜು ಹಿಡಿದು ರಕ್ತ ತೆಗೆದು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾವೇರಿಗಾಗಿ ರಕ್ತ ಕೊಡುತ್ತೇವೆ ಎಂದು ಬಾಯಿ ಮಾತಿನಲ್ಲಿ ಹೇಳಿಲ್ಲ. ರಕ್ತ ತೆಗೆದೇ ತೋರಿಸಿದ್ದೇವೆ ಎಂದು ಹೋರಾಟಗಾರರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
READ MORE












Click it and Unblock the Notifications