ಆತ್ಮಹತ್ಯೆಗೆ ಶರಣಾದ ಬಿಬಿಎಂ ವಿದ್ಯಾರ್ಥಿನಿಯರು
ಬೆಂಗಳೂರು, ಅ. 20: ಭವಿಷ್ಯ ಕಟ್ಟಿಕೊಳ್ಳುವ ವಯಸ್ಸಿನಲ್ಲಿ ಇಬ್ಬರು ವಿದ್ಯಾರ್ಥಿನಿಯರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾಗರವಾರದ ಖಾಸಗಿ ಕಾಲೇಜೊಂದರಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರು ಕಾಲೇಜಿಗೆ ತೆರಳಿದ್ದ ಸಮಯದಲ್ಲೇ ನಿದ್ರೆ ಮಾತ್ರೆ ಸೇವಿಸಿ ಸಾವು ತಂದುಕೊಂಡಿದ್ದಾರೆ.
ಕೆಜಿ ಹಳ್ಳಿ ಕುಶಾಲನಗರ ವಾಸಿ ಅಬ್ದುಲ್ ಬ್ಯಾರಿ ಎಂಬುವರ ಮಗಳು ಸಾಜಿಯಾ ಬೇಗಂ (18) ಮತ್ತು ಡಿಜೆ ಹಳ್ಳಿಯ ನಿವಾಸಿ ಬಾಷಾ ಜಾನ್ ಎಂಬುವರ ಮಗಳು ರಾಖಿಯಾ ಬೇಗಂ (18) ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.[ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ]

ನಿದ್ರೆ ಮಾತ್ರೆ ಸೇವಿಸಿ ಪ್ರೇಝರ್ ಟೌನ್ ಸಮೀಪ ರಸ್ತೆ ಮೇಲೆ ಅಸ್ವಸ್ಥರಾಗಿ ಬಿದ್ದಿದ್ದರು. ಇವರನ್ನು ಕಂಡ ಸ್ಥಳೀಯರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಂಬೇಡ್ಕರ್ ವೈದ್ಯಕೀಯ ಕಾಲೇಜಿಗೆ ಕರೆ ತರುವ ಪ್ರಯತ್ನದಲ್ಲಿದ್ದಾಗಲೇ ಮಾರ್ಗ ಮಧ್ಯೆ ಸಾಜಿಯಾ ಬೇಗಂ ಮೃತಪಟ್ಟಿದ್ದಾರೆ. ರಾತ್ರಿ ರಾಖಿಯಾ ಬೇಗಂ ಕೊನೆಯುಸಿರೆಳೆದಿದ್ದಾಳೆ.[ನೇಣು ಬಿಗಿದ ಸ್ಥಿತಿಯಲ್ಲಿ ವೈದ್ಯೆ ಪತ್ತೆ, ಗಂಡ ನಾಪತ್ತೆ]
ಮರಣೋತ್ತರರ ಪರೀಕ್ಷೆ ನಡೆಸಲಾಗಿದ್ದು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಯುವತಿಯರ ಸ್ನೇಹಿತರು ಮತ್ತು ಸಂಬಂಧಿಗಳ ಹತ್ತಿರ ಈ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪುಲಕೇಶಿನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications