Bengaluru-Mysuru Expressway: ದಶಪಥ ಹೆದ್ದಾರಿಯಲ್ಲಿ ಆಗಸ್ಟ್ 1ರಿಂದ ಆಟೋ, ಬೈಕ್ ಸೇರಿ ಈ ವಾಹನಗಳಿಗೆ ನಿಷೇಧ
ಬೆಂಗಳೂರು, ಜುಲೈ 25: ಆಗಸ್ಟ್ 1ರಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಬೈಕ್‌ಗಳು, ಆಟೋಗಳು, ಟ್ರ್ಯಾಕ್ಟರ್‌ಗಳು, ಮೋಟಾರು ರಹಿತ ವಾಹನಗಳು ಮತ್ತು ಮಲ್ಟಿ-ಆಕ್ಸಲ್ ಹೈಡ್ರಾಲಿಕ್ ವಾಹನಗಳ ಪ್ರವೇಶವನ್ನು ನಿಷೇಧಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಆದೇಶ ಹೊರಡಿಸಿದೆ.
ದಶಪಥ ಹೆದ್ದಾರಿ ವ್ಯಾಪ್ತಿಯಲ್ಲಿ ಇನ್ನುಮುಂದೆ ಈ ಮೇಲಿನ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ.ಬೆಂಗಳೂರಿನ ಕೆಂಗೇರಿ ಬಳಿಯ ಪಂಚಮುಖಿ ದೇವಸ್ಥಾನದಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ವರೆಗೆ 118 ಕಿಮೀ ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿದೆ.

ಪ್ರವೇಶ ನಿಯಂತ್ರಿತ ಹೆದ್ದಾರಿಯನ್ನು ಹೈ-ಸ್ಪೀಡ್ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ವಾಹನಗಳ ಗರಿಷ್ಠ ವೇಗದ ಮಿತಿ ಪ್ರತಿ ಗಂಟೆಗೆ 100 ಕಿಲೋ ಮೀಟರ್ ಇದೆ. ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಹೆದ್ದಾರಿ ಪ್ರಾಧಿಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಆರು ರೀತಿಯ ವಾಹನಗಳ ನಿಷೇಧ
ಹೆಚ್ಚಿನ ವೇಗದ ವಾಹನಗಳ ಚಲನೆಯು ಬೈಕ್‌ಗಳು, ಆಟೋಗಳು, ಟ್ರ್ಯಾಕ್ಟರ್‌ಗಳು, ಮೋಟಾರುರಹಿತ ವಾಹನಗಳು ಮತ್ತು ಇತರೆ ನಿಧಾನವಾಗಿ ಚಲಿಸುವ ಕೆಲವು ವಾಹನಗಳ ಸವಾರರ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಎನ್‌ಹೆಚ್‌ಎಐ ಅಧಿಸೂಚನೆಯಲ್ಲಿ ತಿಳಿಸಿದೆ.
"ರಾಷ್ಟ್ರೀಯ ಹೆದ್ದಾರಿಗಳ ನಿಯಂತ್ರಣ (ಭೂಮಿ ಮತ್ತು ಸಂಚಾರ) ಕಾಯಿದೆ 2002" ಸೆಕ್ಷನ್ 35 ರ ಅಡಿಯಲ್ಲಿ ನೀಡಿರುವ ಅಧಿಕಾರಗಳ ಅಡಿಯಲ್ಲಿ ಮೋಟಾರು ಸೈಕಲ್, ತ್ರಿಚಕ್ರ ವಾಹನಗಳು (ಇ-ಕಾರ್ಟ್‌ಗಳು ಮತ್ತು ಇ-ರಿಕ್ಷಾಗಳು ಸೇರಿದಂತೆ), ಟ್ರ್ಯಾಕ್ಟ್ ಟ್ರಾಲ್ ರಹಿತ ವಾಹನಗಳು, ಟ್ರಾಕ್ಟರ್, ಟ್ರಾಕ್ಟ್ ರಹಿತ ವಾಹನಗಳು, ಹೈಡ್ರಾಲಿಕ್ ವಾಹನಗಳು, ಎಲೆಕ್ಟ್ರಿಲ್ ಅಲ್ಲದ ವಾಹನಗಳು, ಮೋಟಾರು ಸೈಕಲ್‌ಗಳು (ಸ್ಕೂಟರ್ ಸೇರಿದಂತೆ) ಆರು ವರ್ಗಗಳ ವಾಹನಗಳನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
"ಆಟೋಗಳು, ಬೈಕ್‌ಗಳು ಮತ್ತು ಇತರ ನಿಷೇಧಿತ ವಾಹನಗಳಲ್ಲಿ ಸಂಚರಿಸುವ ಜನರು ಮುಖ್ಯ ರಸ್ತೆಗಳನ್ನು ಬಳಸದಂತೆ ಸೂಚನೆ ನೀಡಲಾಗಿದೆ. ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ನಿರ್ಮಿಸಲಾದ ಸರ್ವಿಸ್ ರಸ್ತೆಯಲ್ಲಿ ಅವರು ಸಂಚರಿಸಬಹುದು. ಈ ಬಗ್ಗೆ ಸೈನ್ ಬೋರ್ಡ್‌ಗಳನ್ನು ಸ್ಥಾಪಿಸುವ ಮೂಲಕ ಜಾಗೃತಿ ಮೂಡಿಸಲಿದ್ದೇವೆ." ಎಂದು ಎನ್‌ಎಚ್‌ಎಐನ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ.
ಅಪಘಾತಗಳಿಂದ ಕುಖ್ಯಾತಿ
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯ ನಂತರ 300 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅಪಘಾತಗಳ ಸಂಖ್ಯೆ ಹೆಚ್ಚಾದ ನಂತರ ವಾಹನಗಳ ವೇಗದ ಮೇಲೆ ಮಿತಿ ಹೇರಲಾಗಿದೆ. ನಿಯಮ ಉಲ್ಲಂಘನೆ ಮಾಡಿದ ವಾಹನಗಳ ಚಾಲಕರಿಗೆ ದಂಡ ವಿಧಿಸಲಾಗುತ್ತಿದೆ. ಈಗ ಹಲವು ವಾಹನಗಳಿಗೆ ನಿಷೇಧ ಹೇರುವ ಮೂಲಕ ಅಪಘಾತಗಳ ಸಂಖ್ಯೆ ಕಡಿಮೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications