ಚಾಕೊಲೇಟ್ ಅಜ್ಜಿ ಲಕ್ಷ್ಮಮ್ಮನ ಜೀವನೋತ್ಸಾಹ ಎಲ್ಲರಿಗೂ ಮಾದರಿ
ಬೆಂಗಳೂರು: ನೀವಿಲ್ಲಿ ಕಾಣುತ್ತಿರುವ ಅಜ್ಜಿ ಲಕ್ಷ್ಮಮ್ಮ ಅಂತ ಇವರು ಅಂತಿಂಥ ಅಜ್ಜಿಯಲ್ಲ. ಇವರಿಗೆ 67 ವಯಸ್ಸು. ಈ ತಲೆಮಾರಿನ ಎಷ್ಟೋ ಯುವಕ-ಯುವತಿಯರಿಗಿಂತಲೂ ಫಿಟ್ ಆಗಿದ್ದಾರೆ. ಇವರ ವಯಸ್ಸಿನ ಎಷ್ಟೋ ಜನರು ಮನೆಯಲ್ಲಿ ನೆಮ್ಮದಿಯಾಗಿ ಇದ್ರೆ ಸಾಕು, ಚಳಿಯಲ್ಲಿ ಹೊರಗೆ ಯಾಕೆ ಹೋಗಬೇಕು ಎನ್ನುವ ಮನಸ್ಥಿತಿಯಲ್ಲಿರುತ್ತಾರೆ. ಅಂಥವರ ನಡುವೆ ಈ ಅಜ್ಜಿ ಡಿಫರೆಂಟ್ ಅನ್ನಿಸಿಕೊಳ್ತಾರೆ.(ಬರಹ: ಗೌತಮ್ ಹೆಗ್ಡೆ)
ಕೋರಮಂಗಲದ ವಿಪ್ರೋ ಪಾರ್ಕ್ ಬಳಿ ಮಾತಿಗೆ ಸಿಕ್ಕ ಈ ಅಜ್ಜಿ, ಪ್ರತಿದಿನ ಬೆಳಗ್ಗೆ 3:30ಕ್ಕೆ ಎದ್ದು ಮನೆ ಕೆಲಸ ಮುಗಿಸುತ್ತಾರೆ. ಆರೋಗ್ಯದ ಒಳಿತಿಗಾಗಿ ಒಂದು ಸಂಸ್ಥೆಯಲ್ಲಿ ಸ್ವಲ್ಪ ಸಮಯ ಕಳೆದು ತನ್ನ ಬಟ್ಟೆಯ ಕೈಚೀಲ ತುಂಬಾ ಚಾಕೊಲೇಟ್, ಬಿಸ್ಕೀಟ್, ಕಡಲೆಕಾಯಿಯನ್ನು ತುಂಬಿಸಿಕೊಂಡು ವಾಕಿಂಗ್ ಹೊರಡುತ್ತಾರೆ. ರಸ್ತೆಯುದ್ದಕ್ಕೂ ಸಿಗೋ ಮಕ್ಕಳಿಗೆ ಚಾಕೊಲೇಟ್, ನಾಯಿಗಳಿಗೆ ಬಿಸ್ಕೆಟ್, ಅಜ್ಜಿ ಜೊತೆ ಪ್ರೀತಿಯಲ್ಲಿ ಮಾತಡೋ ಎಲ್ಲರಿಗೂ ಕಡಲೆಕಾಯಿ ಕೊಡುತ್ತಾರೆ. ಕೋರಮಂಗಲದ ವಿಪ್ರೋ ಪಾರ್ಕ್‌ನಲ್ಲಿ ವಾಕಿಂಗ್, ವ್ಯಾಯಮ ಮಾಡಿ ಆರೋಗ್ಯ ಕಾಪಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಸದಾ ಖುಷಿಖುಷಿಯಿಂದ ಹತ್ತು ಜನರ ಜೊತೆಗೆ ಮಾತನಾಡುವುದರಿಂದ ಇವರ ಮಾನಸಿಕ ಆರೋಗ್ಯವೂ ಚೆನ್ನಾಗಿಯೇ ಇರುತ್ತೆ.

ಸುಮಾರು 40 ವರ್ಷದಿಂದ ಪ್ರತಿ ದಿನವನ್ನು ಹೀಗೆಯೇ ಕಳೆಯುತ್ತಿರುವ ಈ ಮಕ್ಕಳ ಪ್ರೀತಿಯ ಚಾಕೊಲೇಟ್ ಅಜ್ಜಿಗೆ ಶೀತ, ಕೆಮ್ಮು ಬಿಟ್ಟರೆ ಬೇರೆ ಯಾವ ಕಾಯಿಲೆಯೂ ಹತ್ತಿರ ಬರೋದಿಲ್ಲ. 'ನಾನು ಆಸ್ಪತ್ರೆಯ ಮುಖ ಕಂಡವಳಲ್'ಲ ಅಂತ ಅಜ್ಜಿ ಹೇಳುತ್ತಾರೆ.
ಇವರ ಆರೋಗ್ಯ ಹೀಗೆ ಇರಲಿ ಎಂದು ನಾವು ಆಶಿಸೋಣ. ಇವರ ಚಟುವಟಿಕೆಯ ವಿಡಿಯೊ ಇಲ್ಲಿದೆ. ಸಂಪೂರ್ಣ ವಿಡಿಯೊ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.












Click it and Unblock the Notifications