ಬಸವನಗುಡಿ ಪುಟ್ಟಣ್ಣಚೆಟ್ಟಿ ಹಾಸ್ಟೆಲ್ ನಲ್ಲಿ ಅನಂತಕುಮಾರ್
ಬೆಂಗಳೂರು, ಫೆ. 25 : ಇಂದಿನ ವಿದ್ಯಾರ್ಥಿಗಳು ಸರ್ ಪುಟ್ಟಣ್ಣಚೆಟ್ಟಿ ಅವರಂತೆ ಸಮಾಜ ಸೇವೆ ಮಾಡಲು ಮನಸ್ಸು ಮಾಡಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ ಕುಮಾರ್ ಕರೆ ನೀಡಿದ್ದಾರೆ. ಪುಟ್ಟಣ್ಣಚೆಟ್ಟಿ ಹಾಸ್ಟೆಲ್ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅನಂತ ಕುಮಾರ್ ಮಾತನಾಡುತ್ತಿದ್ದರು.
ಸೋಮವಾರ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಿಂದ ಪುಟ್ಟಣ್ಣಚೆಟ್ಟಿ ಹಾಸ್ಟೆಲ್ ನಲ್ಲಿ ಕೈಗೊಂಡಿರುವ ಅಭಿವೃದ್ಧಿಯ ಕಾಮಗಾರಿಗಳಿಗೆ ಚಾಲನೆ ನೀಡಿ ಅನಂತ ಕುಮಾರ್ ಮಾತನಾಡುತ್ತಿದ್ದರು. ಪುಟ್ಟಣ್ಣಚೆಟ್ಟಿಯವರು ದಿವಾನರಾಗಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಅದ್ಭುತ ಕೆಲಸ ಮಾಡಿದ್ದಾರೆ.
ಬೆಂಗಳೂರಿನಂತಹ ಮಹಾನಗರದಲ್ಲಿ ಕಳೆದ 70 ವರ್ಷಗಳಿಂದ ಈ ವಿದ್ಯಾರ್ಥಿ ನಿಲಯ ನಡೆದುಕೊಂಡು ಬಂದಿರುವುದು ಶ್ಲಾಘನೀಯ ಎಂದು ಅನಂತ ಕುಮಾರ್ ತಿಳಿಸಿದರು. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಳಿಯಲು ವ್ಯವಸ್ಥೆ ನೀಡಿ ಉತ್ತಮ ಊಟದ ವ್ಯವಸ್ಥೆ ಮಾಡಿರುವ ಸಂಸ್ಥೆಯು ಕಾರ್ಯದ ಬಗ್ಗೆ ಅನಂತ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಿಂದ ಪುಟ್ಟಣ್ಣಚೆಟ್ಟಿ ಹಾಸ್ಟೆಲ್ ನಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ತ್ರಿಪುರಾ ವಿಶ್ವನಾಥ್, ಆಡಳಿತ ಮಂಡಳಿ ಸದಸ್ಯರಾದ ಬನಶಂಕರಿ, ರಾಜಣ್ಣ, ಜಯರಾಜ್ ಮತ್ತು ಬಿಬಿಎಂಪಿ ಸದಸ್ಯ ಸದಾಶಿವ್ ಮುಂತಾದವರು ಭಾಗವಹಿಸಿದ್ದರು.

ನೆನಪಿನ ಬುತ್ತಿ ಬಿಚ್ಚಟ್ಟ ಅನಂತ ಕುಮಾರ್
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅನಂತ ಕುಮಾರ್, ನಿಮ್ಮೆಲ್ಲರನ್ನೂ ನೋಡಿದರೆ ನನ್ನ ಯೌವನದ ದಿನಗಳು ನೆನಪಾಗುತ್ತವೆ. ಅಂದು ನಾನು ಮೆಜೆಸ್ಟಿಕ್ ಬಳಿಯ ಕಂತಿನ ಕೃಷ್ಣಪ್ಪ ಗಲ್ಲಿಯಲ್ಲಿದ್ದ ವಿದ್ಯಾರ್ಥಿ ಪರಿಷತ್‍ನ ಕಛೇರಿಯಲ್ಲಿರುತ್ತಿದ್ದೆ. ನನ್ನೊಂದಿಗೆ ಪುಟ್ಟ ಕೊಠಡಿಯಲ್ಲಿ 30 ಮಂದಿ ವಾಸಿಸುತ್ತಿದ್ದರು. ಅವರಲ್ಲಿ ಪಿಜಿಆರ್ ಸಿಂಧ್ಯಾ, ಉಗ್ರಪ್ಪ, ಬಿ.ಎಲ್.ಶಂಕರ್, ಕಲಾವಿದ ಚಿ.ಸು.ಕೃಷ್ಣಶೆಟ್ಟಿ ಮುಂತಾದವರು ಇದ್ದರು ಎಂದು ನೆನಪು ಮಾಡಿಕೊಂಡರು.

ವಿದ್ಯಾರ್ಥಿಗಳಿಗೆ ಕರೆ
ಇಂದಿನ ವಿದ್ಯಾರ್ಥಿಗಳು ಸರ್ ಪುಟ್ಟಣ್ಣಚೆಟ್ಟಿ ಅವರಂತೆ ಸಮಾಜ ಸೇವೆ ಮಾಡಲು ಮನಸ್ಸು ಮಾಡಬೇಕು. ಬೆಂಗಳೂರಿನಂತಹ ಮಹಾನಗರದಲ್ಲಿ ಅವರು ನಿರ್ಮಿಸಿದ ಹಾಸ್ಟೆಲ್ ಕಳೆದ 70 ವರ್ಷಗಳಿಂದ ನಡೆದುಕೊಂಡು ಬಂದಿರುವುದು ಶ್ಲಾಘನೀಯ, ವಿದ್ಯಾರ್ಥಿಗಳ ಇಂತಹ ಸಮಾಜ ಸೇವೆ ಮಾಡಬೇಕು ಎಂದು ಅನಂತ್ ಕುಮಾರ್ ಕರೆ ನೀಡಿದರು.

ಗುರಿಯಿಂದ ವಿಮುಖರಾಗಬೇಡಿ
ವಿದ್ಯಾರ್ಥಿಗಳ ಏಕಾಗ್ರತೆ ಹಾಳು ಮಾಡುವ ಹಲವಾರು ಶಕ್ತಿಗಳು ಇಂದು ನಮ್ಮ ಮುಂದಿವೆ. ಆದರೆ, ವಿದ್ಯಾರ್ಥಿಗಳು ಎಂದಿಗೂ ತಮ್ಮ ಗುರಿಯಿಂದ ವಿಮುಖರಾಗಬಾರದು. ಅದಕ್ಕೆ ಅತ್ಯುತ್ತಮ ಉದಾಹರಣೆ ನಮ್ಮ ಕ್ರಿಕೆಟ್ ಪಟು ಸಚಿನ್ ತೆಂಡೂಲ್ಕರ್. ಅವರು ನಿಮ್ಮೆಲ್ಲರಿಗೂ ಮಾದರಿಯಾಗುತ್ತಾರೆ. ಅವರು ಆಟದಲ್ಲೇ ತಮ್ಮ ಗಮನವನ್ನು ಕೇಂದ್ರೀಕರಿಸಿ ಅವರ ಕೌಶಲ್ಯ ವೃದ್ಧಿಸಿಕೊಂಡು ಕ್ರಿಕೆಟ್ ಜಗತ್ತಿನ ಮಹಾನ್ ಆಟಗಾರನೆನಿಸಿಕೊಂಡರು. ನೀವು ಅಧ್ಯಯನದಲ್ಲಿ ಗಮನವಿರಿಸಿದರೆ ನೀವು ನಿಮ್ಮ ಗುರಿ ಸಾಧಿಸಬಹುದು ಎಂದರು.












Click it and Unblock the Notifications