Schools Start: ಮಕ್ಕಳೇ.. ಪುಸ್ತಕ, ಬ್ಯಾಗ್, ಪೆನ್ ಎಲ್ಲಾ ರೆಡಿ ಮಾಡ್ಕೋಳಿ ನಾಳೆಯಿಂದ ಶಾಲೆ ಶುರು...
ಬೆಂಗಳೂರು ಮೇ 28: ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳೇ ಪುಸ್ತಕ, ಪೆನ್, ಬ್ಯಾಗ್ ರೆಡಿ ಮಾಡಿಕೊಳ್ಳಿ. ಯಾಕೆಂದರೆ ನಾಳೆಯಿಂದ ಶಾಲೆಗಳು ಶುರುವಾಗಲಿವೆ. ಬೇಸಿಗೆ ರಜೆ ಕಳೆದ ನಂತರ ಮಕ್ಕಳನ್ನು ಸ್ವಾಗತಿಸಲು ಶಾಲೆಗಳು ಸಜ್ಜಾಗುತ್ತಿವೆ.
2024-2025ನೇ ಸಾಲಿನ ಶೈಕ್ಷಣಿಕ ಅವಧಿ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಬೇಸಿಗೆ ರಜೆಯಿಂದ ಬಂದ್ ಆಗಿದ್ದ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಮತ್ತೆ ಬಾಗಿಲು ತೆರೆಯಲಿವೆ. ಆದರೆ, ಮಕ್ಕಳನ್ನು ಮಾತ್ರ ಮೇ 31ರಂದು ಶಾಲಾ ಪ್ರಾರಂಭೋತ್ಸವದ ಮೂಲಕ ಸಿಹಿ ನೀಡಿ ಶಿಕ್ಷಕರು ಬರಮಾಡಿಕೊಳ್ಳಲಿದ್ದಾರೆ.

ವಿಶೇಷವೆಂದರೆ ಈ ಬಾರಿ ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಎರಡು ಜೊತೆ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ನೀಡಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಪ್ರತೀ ಬಾರಿಯಂತೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ತಡಗೊಳಿಸದೆ ಸಮಯಕ್ಕೆ ಸರಿಯಾಗಿ ವಿತರಿಸುವ ಪ್ರಯತ್ನ ನಡೆಸಿದೆ.
ಈಗಾಗಲೇ ಸಮವಸ್ತ್ರ ಪೂರ್ಣ ಪ್ರಮಾಣದಲ್ಲಿ ತಾಲ್ಲೂಕು ಮಟ್ಟಕ್ಕೆ ರವಾನೆಯಾಗಿದ್ದು ಪಠ್ಯಪುಸ್ತಕಗಳನ್ನು ಕೂಡ ಶೇ. 75 ರಿಂದ 80ರಷ್ಟು ಸರಬರಾಜು ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಉಳಿದ ಪಠ್ಯಪುಸ್ತಕಗಳ ಪೂರೈಕೆ ಮಾಡಲಾಗುವುದು. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಿಡಿಪಿಐಗಳು ಶಾಲೆಗಳಿಗೆ ಅವುಗಳನ್ನು ತಲುಪಿಸಿ ಪ್ರಾರಂಭೋತ್ಸವದ ದಿನವೇ ವಿತರಣೆಗೆ ಕ್ರಮ ವಹಿಸಬೇಕೆಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.
ಶಾಲಾ ಪ್ರಾರಂಭೋತ್ಸವದೊಂದಿಗೆ ಮೊದಲ ದಿನ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಬುಧವಾರ ಮತ್ತು ಗುರುವಾರ ಶಾಲೆಗಳಲ್ಲಿ ಪ್ರತಿಯೊಂದು ತರಗತಿ ಕೊಠಡಿ, ಹೊರಾಂಗಣ, ಬಿಸಿಯೂಟ ಕೊಠಡಿ, ಆಟದ ಮೈದಾನ, ಕಾಂಪೌಂಡ್ ಸೇರಿದಂತೆ ಇಡೀ ಶಾಲೆಯನ್ನು ಉತ್ತಮ ರೀತಿಯಲ್ಲಿ ಸ್ವಚ್ಚಗೊಳಿಸಬೇಕು. ಅಲ್ಲದೆ ತಳಿರು ತೋರಣ, ರಂಗೋಲಿ ಬಿಡಿಸಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮುಖ್ಯ ಶಿಕ್ಷಕರುಗಳಿಗೆ ಶಿಕ್ಷಣ ಇಲಾಖೆ ಸೂಚಿಸಿದೆ.

ಎಸ್ಸೆಸ್ಸೆಲ್ಸಿ -2 ಪರೀಕ್ಷೆಗೆ ವಿಶೇಷ ತರಗತಿಗಳು ನಾಳೆಯಿಂದ ಆರಂಭ
ಇದೇ ಜೂನ್ 14ರಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ 'ಪರೀಕ್ಷೆ 2'ಕ್ಕೆ ನೋಂದಾಯಿಸಿರುವ ಶಾಲಾ ವಿದ್ಯಾರ್ಥಿಗಳಿಗೆ ಮೇ 29 ರಿಂದ ಜೂನ್ 13ರವರೆಗೆ ವಿಶೇಷ ಬೋಧನಾ ತರಗತಿಗಳು ಆರಂಭವಾಗಲಿವೆ. ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡಿದ ಪ್ರೌಢಶಾಲೆಗಳಿಗೆ ತೆರಳಿ ಈ ತರಗತಿಗಳ ಪ್ರಯೋಜನ ಪಡೆಯಬಹುದು.
ಎಸ್ಸೆಸ್ಸೆಲ್ಸಿ ಪರೀಕ್ಷೆ 1ರಲ್ಲಿ ಫಲಿತಾಂಶ ಶೇ. 10ರಷ್ಟು ಕುಸಿತವಾದ ಹಿನ್ನೆಯಲ್ಲಿ ಅನುತ್ತೀರ್ಣ ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳಲಿಚ್ಚಿಸುವ ವಿದ್ಯಾರ್ಥಿಗಳಿಗೆ ಮೇ 15ರಿಂದ ಜೂನ್ 6ರವರೆಗೆ ಬೇಸಿಗೆ ರಜೆ ಅವಧಿಯಲ್ಲಿ 'ವಿಶೇಷ ಬೋಧನಾ ತರಗತಿ' ನಡೆಸಲು ಶಿಕ್ಷಣ ಇಲಾಖೆ ಆದೇಶಿಸಿತ್ತು. ಇದಕ್ಕೆ ಶಿಕ್ಷಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲು ಆರಂಭವಾಗುವ ಮೇ 29 ರಿಂದ ಜೂನ್ 13ರವರೆಗೆ ಈ ವಿಶೇಷ ತರಗತಿ ನಡೆಸುವಂತೆ ಪರಿಷ್ಕರಿಸಲಾಗಿತ್ತು.












Click it and Unblock the Notifications