ಎರಡು ಕಿ.ಮೀ.ಓಡಿ 600 ಜನರ ಪ್ರಾಣ ಉಳಿಸಿದ್ರು

ಬೆಂಗಳೂರು ವಿಭಾಗದ ಧರ್ಮಪುರಿ ಹಾಗೂ ಸೇಲಂ ಸೆಕ್ಷನ್ ನಡುವಿನ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನಲೆಯಲ್ಲಿ ಸುಮಾರು 20 ಮೀಟರ್ ರೇಲ್ವೆ ಹಳಿ ಕೊಚ್ಚಿ ಹೋಗಿತ್ತು. ಈ ಮಾರ್ಗದಲ್ಲಿ ಬರುತ್ತಿದ್ದ ರೈಲನ್ನು ತಡೆಯುವ ಮೂಲಕ ಸಿಬ್ಬಂದಿ ಪ್ರಯಾಣಿಕರನ್ನು ಉಳಿಸಿದ್ದಾರೆ.
ಗ್ಯಾಂಗ್ ಮೇಟ್ ಎಸ್. ಮುರುಗನ್ ಹಾಗೂ ಟ್ರಾಲಿಮ್ಯಾನ್ ಎಂ. ವೇಲು ಕರ್ತವ್ಯ ಪ್ರಜ್ಞೆಯಿಂದಾಗಿ ಮಂಗಳವಾರ ರಾತ್ರಿ ಸಂಭವಿಸಬಹುದಾಗಿದ್ದ ಯಶವಂತಪುರ - ಸೇಲಂ ಪ್ಯಾಸೆಂಜರ್ ರೈಲಿನ ಅಪಘಾತ ತಪ್ಪಿದೆ. ಇದರಲ್ಲಿದ್ದ 600ಕ್ಕೂ ಹೆಚ್ಚು ಪ್ರಯಾಣಿಕರು ಪಾರಾಗಿದ್ದಾರೆ.
ಆಗಿದ್ದೇನು : ಮಂಗಳವಾರ ಸಂಜೆ ಮುರುಗನ್ ಮತ್ತು ವೇಲು ಶಿವಾಡಿ - ತೋಪುರ್ ಘಟ್ಟದಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದರು. ಈ ವೇಳೆ ಭಾರಿ ಮಳೆ ಸುರಿಯುತ್ತಿತ್ತು. ತಕ್ಷಣ ಅವರು ರೇಲ್ವೆ ಹಳಿಗಳ ಪರಿಶೀಲನೆ ಮುಂದುವರೆಸಿದರು.
ಘಟ್ಟ ಪ್ರದೇಶದ ನಡುವೆ ಇಬ್ಬರೂ ಕಾಲ್ನಡಿಗೆಯಲ್ಲೇ ಸೇತುವೆಗಳು, ಹಾಗೂ ಎತ್ತರದಲ್ಲಿರುವ ರೇಲ್ವೆ ಹಳಿಗಳ ಪರಿಶೀಲನೆ ನಡೆಸುತ್ತಿರುವಾಗ, ರಾತ್ರಿ 8 ಗಂಟೆ ಸುಮಾರಿಗೆ 44/100 ಕಿಲೋ ಮೀಟರ್ ನಲ್ಲಿ ಹಳಿಗಳ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತಿತ್ತು.
ಅದೇ ಹಳಿಯ ಮೇಲೆ ಸ್ಪಲ್ಪ ಸಮಯದಲ್ಲೇ 600ಕ್ಕೂ ಅಧಿಕ ಪ್ರಯಾಣಿಕರಿದ್ದ 56242 ಸಂಖ್ಯೆಯ ಯಶವಂತಪುರ- ಸೇಲಂ ಪ್ಯಾಸೆಂಜರ್ ರೈಲು ಬರಬೇಕಾಗಿತ್ತು. ಕೂಡಲೇ ಎಚ್ಚೆತ್ತ ಮುರುಗನ್ ಹಾಗೂ ವೇಲು ಹತ್ತಿರದ ಸ್ಟೇಷನ್ ಗೆ ಓಡಿದ್ದಾರೆ.
ಸ್ಥಳದಿಂದ 2 ಕಿ.ಮೀ.ದೂರವಿದ್ದ ಮುತ್ತಂಪಟ್ಟಿ ರೇಲ್ವೆ ನಿಲ್ದಾಣಕ್ಕೆ ಬಂದ ಅವರು, ಪ್ಯಾಸೆಂಜರ್ ರೈಲನ್ನು ಮುತ್ತಂಪಟ್ಟಿ ನಿಲ್ದಾಣದಲ್ಲಿ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಬಳಿಕ ಸಿಬ್ಬಂದಿಯೊಂದಿಗೆ ನೀರು ಹರಿಯುತ್ತಿದ್ದ ಸ್ಥಳಕ್ಕೆ ಬಂದವರಿಗೆ ಶಾಕ್ ಕಾದಿತ್ತು.
ಅಲ್ಲಿ ಸುಮಾರು 20 ಮೀಟರ್ ನಷ್ಟು ಹಳಿ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಒಂದು ವೇಳೆ ರೈಲು ಆ ಮಾರ್ಗದಲ್ಲಿ ಬಂದಿದ್ದರೆ ಭಾರಿ ದುರಂತ ಸಂಭವಿಸುತ್ತಿತ್ತು. ಮುರುಗನ್ ಹಾಗು ವೇಲು ಸಮಯ ಪ್ರಜ್ಞೆಯನ್ನು ಕೊಂಡಾಡಿರುವ ನೈಋತ್ಯ ರೇಲ್ವೆ ವ್ಯವಸ್ಥಾಪಕ ಇಬ್ಬರಿಗೂ 5 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.












Click it and Unblock the Notifications