Airport: ಟೆಕ್ಕಿಗಳು, ಪ್ರವಾಸಿಗರಿಗೆ ಖುಷಿ ಸುದ್ದಿ: ಬೆಂಗಳೂರು-ಜೈಪುರ ವಿಮಾನ ಸೇವೆ ಆರಂಭ, ಟಿಕೆಟ್ ಬುಕಿಂಗ್ ಶುರು
ಬೆಂಗಳೂರು: ಬೆಂಗಳೂರು ಏರ್‍ಪೋರ್ಟ್‌ನಿಂದ ಗುಲಾಬಿ ನಗರ ಜೈಪುರಕ್ಕೆ ತೆರಳುವವರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಕರ್ನಾಟಕ ರಾಜಧಾನಿ ಬೆಂಗಳೂರು ಮತ್ತು ಜೈಪುರ ನಡುವೆ ದೇಶದ ಪ್ರತಿಷ್ಠಿತ ಏರ್‍ಲೈನ್ಸ್ ಸಂಸ್ಥೆ 'ಆಕಾಶ ಏರ್' ವಿಮಾನ ಸೇವೆ ಆರಂಭಿಸುವುದಾಗಿ ಘೋಷಿಸಿದೆ. ಈ ಮೂಲಕ ಪ್ರವಾಶ, ಶೈಕ್ಷಣಿಕ, ವ್ಯವಹಾರಿಕ ಕಾರ್ಯಗಳಿಗೆ ತೆರಳುವವರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ಬೆಂಗಳೂರಿನಿಂದ ದೇಶ, ವಿದೇಶಗಳಿಗೆ ನಿತ್ಯ ವಿಮಾನಯಾನ ಮಾಡುವವರ ವಾರ್ಷಿಕ 44 ಮಿಲಿಯನ್‌ಗೂ ಅಧಿಕ ಜನರಿದ್ದಾರೆ. ನಿತ್ಯ ನೂರಾರು ಮಾರ್ಗಗಳಲ್ಲಿ ವಿಮಾನಗಳು ಹಾರಾಟ ನಡೆಸುತ್ತಿವೆ. ಅದಕ್ಕೀಗ ಬೆಂಗಳೂರು-ಜೈಪುರ ಮಾರ್ಗದ ವಿಮಾನವು ಸೇರ್ಪಡೆಯಾಗಲಿದೆ. ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಸಂಸ್ಥೆಯಾದ 'ಆಕಾಶ ಏರ್' ಮುಂದಿನ ಅಕ್ಟೋಬರ್ 11, 2026 ರಿಂದ ಬೆಂಗಳೂರು ಮತ್ತು ಜೈಪುರ ನಡುವೆ ದೈನಂದಿನ ನೇರ ವಿಮಾನ ಸೇವೆ ಆರಂಭಿಸಲಿದೆ.

ಜೈಪುರ 29ನೇ ತಾಣ
ತನ್ನ ದೇಶೀಯ ಜಾಲವನ್ನು ವಿಸ್ತರಿಸುತ್ತಿರುವ 'ಆಕಾಶ ಏರ್' ಪಾಲಿಗೆ ಜೈಪುರ 29ನೇ ತಾಣವಾಗಿದೆ. ರಾಜಸ್ಥಾನದ ಪ್ರಮುಖ ಪ್ರವಾಸಿ ಮತ್ತು ವಾಣಿಜ್ಯ ಕೇಂದ್ರವಾಗಿರುವ ಜೈಪುರವನ್ನು, ಭಾರತದ ಐಟಿ ರಾಜಧಾನಿ ಬೆಂಗಳೂರು ಹಾಗೂ ಆರ್ಥಿಕ ರಾಜಧಾನಿ ಮುಂಬೈಗೆ ಬೆಸೆಯುವ ನಿಟ್ಟಿಲ್ಲಿ ಸಂಸ್ಥೆ ಮಹತ್ವದ ಹೆಜ್ಜೆ ಇಟ್ಟಿದೆ.
ರಾಜಸ್ಥಾನ ಪ್ರವಾಸ, ಸಂಚಾರ ಮತ್ತಷ್ಟು ಸುಲಭ
ಬೆಂಗಳೂರಿನ ಟೆಕ್ಕಿಗಳಿಗೆ, ಉದ್ಯಮಿಗಳಿಗೆ ಹಾಗೂ ಪ್ರವಾಸಿಗರಿಗೆ ರಾಜಸ್ಥಾನ ಪ್ರವಾಸ ಈಗ ಮತ್ತಷ್ಟು ಸುಲಭವಾಗಲಿದೆ. ಬೆಂಗಳೂರಿನಿಂದ ನೇರವಾಗಿ ಜೈಪುರಕ್ಕೆ ಅಕ್ಟೋಬರ್ 11 ರಿಂದ ಸೇವೆ ಆರಂಭವಾಗುತ್ತಿದ್ದರೆ, ಅಕ್ಟೋಬರ್ 15 ರಿಂದ ಬೆಂಗಳೂರಿನಿಂದ ರಾಜಸ್ಥಾನದ ಮತ್ತೊಂದು ಸುಂದರ ನಗರವಾದ ಉದಯಪುರಕ್ಕೂ ವಿಮಾನ ಸೇವೆಗಳು ಶುರುವಾಗಲಿವೆ.
ಬೆಂಗಳೂರು - ಜೈಪುರ ದೈನಂದಿನ ವಿಮಾನ, ವೇಳಾಪಟ್ಟಿ
* ಬೆಂಗಳೂರಿನಿಂದ ಜೈಪುರಕ್ಕೆ QP 1529 ಸಂಖ್ಯೆಯ 'ಆಕಾಶ್ ಏರ್' ವಿಮಾನವು ಬೆಳಗ್ಗೆ 08:20ಕ್ಕೆ ಬೆಂಗಳೂರಿನಿಂದ ಹೊರಡಲಿರುವ ವಿಮಾನ ಬೆಳಗ್ಗೆ 10:50ಕ್ಕೆ ಜೈಪುರ ತಲುಪಲಿದೆ.
* ಜೈಪುರದಿಂದ ಬೆಂಗಳೂರಿಗೆ QP 1530 ಸಂಖ್ಯೆಯ ವಿಮಾನವು ಬೆಳಗ್ಗೆ 11:30ಕ್ಕೆ ಜೈಪುರದಿಂದ ಹೊರಡಲಿರುವ ವಿಮಾನ ಮಧ್ಯಾಹ್ನ 2:00 ಗಂಟೆಗೆ ಬೆಂಗಳೂರು ಏರ್ ಪೋರ್ಟ್‌ಗೆ ಆಗಮಿಸಲಿದೆ.
ಮುಂಬೈ - ಜೈಪುರ ದೈನಂದಿನ ವಿಮಾನ, ವೇಳಾಪಟ್ಟಿ
* ಮುಂಬೈನಿಂದ ಜೈಪುರಕ್ಕೆ (QP 1153): ಬೆಳಗ್ಗೆ 09:10ಕ್ಕೆ ಮುಂಬೈನಿಂದ ಹೊರಡಲಿರುವ ವಿಮಾನ ಬೆಳಗ್ಗೆ 11:10ಕ್ಕೆ ಜೈಪುರ ತಲುಪಲಿದೆ.
* ಜೈಪುರದಿಂದ ಮುಂಬೈಗೆ (QP 1154): ಮಧ್ಯಾಹ್ನ 12:00ಕ್ಕೆ ಜೈಪುರದಿಂದ ಹೊರಡಲಿರುವ ವಿಮಾನ ಮಧ್ಯಾಹ್ನ 1:55 ಗಂಟೆಗೆ ಮುಂಬೈ ತಲುಪಲಿದೆ.
ಟಿಕೆಟ್ ಬುಕ್ಕಿಂಗ್ ಆರಂಭ
ಈ ಹೊಸ ಮಾರ್ಗದ ವಿಮಾನಗಳ ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ಪ್ರಯಾಣಿಕರು ಆಕಾಶ ಏರ್‌ನ ಅಧಿಕೃತ ವೆಬ್‌ಸೈಟ್, ಆ್ಯಪ್‌ಗಳು ಹಾಗೂ ಇತರ ಪ್ರಮುಖ ಟಿಕೆಟ್ ಬುಕ್ಕಿಂಗ್ ಏಜೆನ್ಸಿಗಳ ಮೂಲಕ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡಲಾಗಿದೆ.
ಹೊಸ ಸೇವೆಯ ಬಗ್ಗೆ ಮಾತನಾಡಿರುವ ಆಕಾಶ ಏರ್‌ನ ಸಹ ಸಂಸ್ಥಾಪಕ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ಆನಂದ್ ಶ್ರೀನಿವಾಸನ್, "ಜೈಪುರಕ್ಕೆ ವಿಮಾನ ಸೇವೆ ಆರಂಭಿಸುತ್ತಿರುವುದು ನಮ್ಮ ದೇಶೀಯ ನೆಟ್‌ವರ್ಕ್ ವಿಸ್ತರಣೆಯ ಮತ್ತೊಂದು ಮೈಲಿಗಲ್ಲಾಗಿದೆ. ರಾಜಸ್ಥಾನವು ನಮಗೆ ಪ್ರಮುಖ ಮಾರುಕಟ್ಟೆಯಾಗಿದ್ದು, ಬೆಂಗಳೂರು ಮತ್ತು ಮುಂಬೈನಂತಹ ಪ್ರಮುಖ ಆರ್ಥಿಕ ಮತ್ತು ಪ್ರವಾಸೋದ್ಯಮ ಕೇಂದ್ರಗಳನ್ನು ಪಿಂಕ್ ಸಿಟಿಯೊಂದಿಗೆ ಸಂಪರ್ಕಿಸಲು ನಾವು ಉತ್ಸುಕರಾಗಿದ್ದೇವೆ. ಪ್ರಯಾಣಿಕರಿಗೆ ಆರಾಮದಾಯಕ ಹಾಗೂ ವಿಶ್ವಾಸಾರ್ಹ ಅನುಭವ ನೀಡುವುದು ನಮ್ಮ ಬದ್ಧತೆಯಾಗಿದೆ," ಎಂದು ಭರವಸೆ ನೀಡಿದ್ದಾರೆ.
ಆಗಸ್ಟ್ 2022 ರಲ್ಲಿ ಆರಂಭವಾಗಿ ಇದುವರೆಗೆ ಬರೋಬ್ಬರಿ 29 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ನೀಡಿರುವ 'ಆಕಾಶ ಏರ್', ತನ್ನ ವಿಶಿಷ್ಟ ಸೌಲಭ್ಯಗಳಿಂದ ಗಮನ ಸೆಳೆಯುತ್ತಿದೆ. ಆರಾಮದಾಯಕ ಪ್ರಯಾಣ, ಚಾರ್ಜಿಂಗ್ ಸೌಲಭ್ಯ, ಕೆಫೆ ಆಕಾಶ ಮೂಲಕ ರುಚಿಕರ ಊಟ ಸಂಸ್ಥೆಯ ವಿಶೇಷತೆಯಾಗಿವೆ. ಒಟ್ಟಾರೆ ಮುಂಬರುವ ದಸರಾ - ದೀಪಾವಳಿ ರಜೆಗಳಲ್ಲಿ ರಾಜಸ್ಥಾನದತ್ತ ಪ್ರವಾಸ ಬೆಳೆಸುವ ಪ್ಲ್ಯಾನ್‌ನಲ್ಲಿರುವ ಕನ್ನಡಿಗರಿಗೆ ಆಕಾಶ ಏರ್‌ನ ಈ ಹೊಸ ಸೇವೆ ಹೇಳಿ ಮಾಡಿಸಿದಂತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.


Click it and Unblock the Notifications
