ಅಳಿಲಿನಷ್ಟು ತಪ್ಪು ಮಾಡಿದ್ದೇನೆ, ತಪ್ಪುಗಳನ್ನು ಸರಿ ಮಾಡಿಕೊಳ್ಳುತ್ತೇನೆ: ಸುದೀಪ್
ಬೆಂಗಳೂರು, ಜನವರಿ 14: ತಮ್ಮ ನಿವಾಸದ ಮೇಲೆ ನಡೆದಿದ್ದ ಆದಾಯ ತೆರಿಗೆ ದಾಳಿ ಸಂಬಂಧಿಸಿದಂತೆ ಇಂದು ನಟ ಸುದೀಪ್ ಅವರು ವಿಚಾರಣೆಗೆ ಅಧಿಕಾರಿಗಳ ಮುಂದೆ ಹಾಜರಾಗಿದ್ದರು.
ವಿಚಾರಣೆ ಮುಗಿಸಿ ಬಂದ ನಟ ಸುದೀಪ್ ಸುದ್ದಿಗಾರರೊಂದಿಗೆ ಮಾತನಾಡಿ, ತೆರಿಗೆ ವಿಚಾರದಲ್ಲಿ ಅಳಿಲಿನಷ್ಟು ತಪ್ಪು ಮಾಡಿದ್ದೇನೆ, ಆ ತಪ್ಪುಗಳನ್ನು ಸರಿ ಮಾಡಿಕೊಳ್ಳಲು ಇದೊಂದು ಎಚ್ಚರಿಕೆ ಎಂದು ಹೇಳಿದರು.
ಐಟಿ ದಾಳಿ ನಡೆದಾಗ ನಮ್ಮಲ್ಲಿ ದೊರೆತ ವಸ್ತು, ಕಾಗದ ಪತ್ರಗಳು ಇತ್ಯಾದಿಗಳ ಬಗ್ಗೆ ನಮ್ಮಿಂದ ಹೇಳಿಕೆ ಪ್ರತಿಗೆ ಸಹಿ ಹಾಕಿಸಿಕೊಂಡಿದ್ದರು. ಅದೇ ಹೇಳಿಕೆ ಅನ್ವಯ ಇರುತ್ತೀರಾ ಅಥವಾ ಹೇಳಿಕೆ ಬದಲಾಯಿಸುತ್ತೀರೋ ಎಂದು ಅಧಿಕಾರಿಗಳು ಕೇಳಿದರು. ಆ ವಿಷಯವಾಗಿ ಮಾತನಾಡಲಷ್ಟೆ ಅಧಿಕಾರಿಗಳು ಇಂದು ಕರೆದಿದ್ದರು ಎಂದು ಸುದೀಪ್ ಹೇಳಿದರು.

ದಾಳಿ ನಡೆದಾಗ ಪೈಲ್ವಾನ್ ಶೂಟಿಂಗ್‌ನಲ್ಲಿದ್ದರು
ಐಟಿ ದಾಳಿ ನಡೆದ ದಿನ ನಾನು ಪೈಲ್ವಾನ್ ಶೂಟಿಂಗ್‌ನಲ್ಲಿದ್ದೆ. ದಾಳಿ ನಡೆದ ಸಮಯದಲ್ಲಿ ತಾಯಿ ಒಬ್ಬರೇ ಮನೆಯಲ್ಲಿದ್ದರು. ಆ ನಂತರ ತಡವಾಗಿ ಮನೆಗೆ ಬಂದೆ ಹಾಗಾಗಿ ಅಂದು ನಡೆದ ಘಟನೆಗಳ ಬಗ್ಗೆ ಅಧಿಕಾರಿಗಳು ಅಂದು ನನ್ನಿಂದ ಹಾಗೂ ತಾಯಿಯವರಿಂದ ಪಡೆದಿದ್ದ ಹೇಳಿಕೆಯನ್ನು ಹಾಗೇ ಉಳಿಸಿಕೊಳ್ಳುವಿರಾ ಅಥವಾ ಬದಲಾಯಿಸುತ್ತೀರಾ ಎಂದು ಅಧಿಕಾರಿಗಳು ಖಚಿತ ಪಡೆಸಿಕೊಳ್ಳಬೇಕಿತ್ತು ಅಷ್ಟೆ ಎಂದರು.

ಬೇರೆ ನಟರ ಬಗ್ಗೆ ನೋ ಕಮೆಂಟ್ಸ್
ಬೇರೆ ಕೆಲವು ನಟರು ತಮ್ಮ ಮೇಲೆ ಆದ ಐಟಿ ದಾಳಿಯ ಬಗ್ಗೆ ಮಾತನಾಡಲು ಹಿಂಜರಿಯುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುದೀಪ್, ಅವರ ಜಾಗದಲ್ಲಿ ನಾನು ನಿಂತು, ನನ್ನ ಜಾಗದಲ್ಲಿ ಅವರು ನಿಂತು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದರು.

ಸಾರ್ವಜನಿಕ ಜೀವನದಲ್ಲಿ ಪ್ರಶ್ನೆ ಕೇಳುವರು ಹೆಚ್ಚು
ಸಾರ್ವಜನಿಕ ಜೀವನದಲ್ಲಿ ಇರುವ ಕಾರಣ ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಇದರಿಂದ ಹಿಂಜರಿದರೆ ತಪ್ಪು ಸಂದೇಶ ಹೋಗುತ್ತದೆ. ಆ ನಟರಿಗೆ ಏನು ಕಿರಿಕಿರಿ-ಸಮಸ್ಯೆ ಆಗಿದೆ ಗೊತ್ತಿಲ್ಲ. ನಾನು ಆ ಬಗ್ಗೆ ಏನೂ ಹೇಳಲಾರೆ. ಪ್ರತಿಯೊಬ್ಬರು ತಮ್ಮ ಜೀವನದ ಜಜವಾಬ್ದಾರಿ ತೆಗೆದುಕೊಳ್ಳೋಣ, ಬೇರೆಯವರ ಜೀವನದ ಜವಾಬ್ದಾರಿ ನಾವು ತೆಗೆದುಕೊಳ್ಳುವುದು ಬೇಡ ಎಂದು ಅವರು ಹೇಳಿದರು.

ಸೈರಾ ಶೂಟಿಂಗ್ ನಡುವೆಯೇ ವಿಚಾರಣೆಗೆ
ಇವತ್ತು ಕೂಡ ಸೈರಾ ಶೂಟಿಂಗ್ ಇತ್ತು. ಆದರೆ ಅವರ ಬಳಿಕ ಅವಕಾಶ ಕೇಳಿಕೊಂಡು ಬಂದಿದ್ದೇನೆ. ಸದ್ಯಕ್ಕೆ ಇವತ್ತಿನ ವಿಚಾರಣೆ ಮುಗಿಯಿತು. ಅಗತ್ಯವಿದ್ದಾಗ ಅಧಿಕಾರಿಗಳು ವಿಚಾರಣೆಗೆ ಮತ್ತೆ ಕರೆಯುತ್ತಾರೆ. ಅವರು ವಿಚಾರಣೆಗೆ ಕರೆದರೆ ನಾನು ಬರುತ್ತೇನೆ. ಇವತ್ತೇ ಮುಗಿಯುವಂತಹ ವಿಚಾರ ಅಲ್ಲ ಇನ್ನೂ 5-6 ತಿಂಗಳು ವಿಚಾರಣೆ ನಡೆಯುತ್ತದೆ ಎಂದು ಸುದೀಪ್ ಹೇಳಿದರು.











Click it and Unblock the Notifications