ಸೈಕಲ್ ರವಿ ಜತೆ ನಂಟು: ಸಿಸಿಬಿಗೆ ಹಾಜರಾದ ಸಾಧು ಕೋಕಿಲ
Recommended Video

ಬೆಂಗಳೂರು, ಜುಲೈ 10: ರೌಡಿ ಶೀಟರ್ ಸೈಕಲ್ ರವಿಗೆ ನಿರಂತರವಾಗಿ ಮೊಬೈಲ್ ಕರೆ ಮಾಡಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಸಿಸಿಬಿ ಕಚೇರಿಗೆ ಸೋಮವಾರ ಭೇಟಿ ನೀಡಿದರು.
ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಿಸಿಬಿ ಕಚೇರಿಗೆ ತೆರಳಿದ ಸಾಧು ಕೋಕಿಲ, ಅಲ್ಲಿ ಹಿರಿಯ ಅಧಿಕಾರಿಯನ್ನು ಭೇಟಿ ಮಾಡಿದರು.
ಸ್ವಯಂಪ್ರೇರಿತರಾಗಿ ಹೋಗಿದ್ದ ಅವರು, ತಮಗೂ ಸೈಕಲ್ ರವಿಗೂ ಸಂಬಂಧವಿಲ್ಲ. ಆದರೂ ಈ ಪ್ರಕರಣದಲ್ಲಿ ತಮ್ಮ ಹೆಸರು ಏಕೆ ಕೇಳಿಬರುತ್ತಿದೆ ಎಂದು ವಿಚಾರಿಸಿದರು ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಸಿಸಿಬಿ ಅಧಿಕಾರಿ, ಸೈಕಲ್ ರವಿ ಜತೆ ನಿಮಗೆ ಸಂಪರ್ಕವಿದೆ ಎಂದು ನಾವು ಹೇಳಿಕೆ ನೀಡಿಲ್ಲ. ಅದಕ್ಕೆ ಸಾಕ್ಷ್ಯಗಳು ಕೂಡ ಇಲ್ಲ. ವಿಚಾರಣೆಯ ಅಗತ್ಯವಿದ್ದರೆ ನಾವೇ ನಿಮ್ಮನ್ನು ಕರೆಯುತ್ತೇವೆ ಎಂದು ಹೇಳಿ ಅಲ್ಲಿಂದ ಕಳುಹಿಸಿದರು ಎನ್ನಲಾಗಿದೆ.
ಕಚೇರಿಯಿಂದ ಹೊರಬಂದ ಸಾಧು ಕೋಕಿಲ, ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡದೆ ಹೊರಟು ಹೋದರು.
ಸೈಕಲ್ ರವಿ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆಯ ಜೆಡಿಎಸ್‌ನ ಪರಾಜಿತ ಅಭ್ಯರ್ಥಿ ಅಲ್ತಾಫ್‌ಖಾನ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅಲ್ತಾಫ್, ಇವೆಲ್ಲವೂ ರಾಜಕೀಯ ಗಿಮಿಕ್ಕಿಗಾಗಿ ಜಮೀರ್ ಅಹ್ಮದ್ ಈ ರೀತಿ ಮಾಡುತ್ತಿರುವ ತಂತ್ರ. ಸೈಕಲ್ ರವಿಯನ್ನು ನಾನು 18 ವರ್ಷದ ಹಿಂದೆ ನೋಡಿದ್ದೆ.
ಸೈಕಲ್ ರವಿ ತಮ್ಮ ಮಹೇಶ್ ನನ್ನ ಕ್ಷೇತ್ರದ ನಿವಾಸಿ. ಚುನಾವಣೆ ವೇಳೆ ನನ್ನ ಪರವಾಗಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸೈಕಲ್ ರವಿ ನನಗೆ ಕರೆ ಮಾಡಿ ಮಾತನಾಡಿದ್ದರು ಎಂದು ಹೇಳಿದ್ದಾರೆ.
ಸೈಕಲ್ ರವಿಯ ನಂಬರ್‌ನಿಂದ ಕರೆ ಬಂದಿದ್ದು ನಿಜ. ಆದರೆ ಅವರೇ ಮಾತನಾಡಿದ್ದೋ ಅಲ್ಲವೋ ತಿಳಿದಿಲ್ಲ. ಚುನಾವಣೆಯ ಒತ್ತಡದಲ್ಲಿ ಅದನ್ನು ಗಮನಿಸಲಿಲ್ಲ.
ಆದರೆ, ಇಂದು ಸೈಕಲ್ ರವಿಗೂ ನನಗೂ ಸಂಬಂಧಿವಿದೆ ಎಂದು ಸಿಸಿಬಿ ಪೊಲೀಸರನ್ನು ನನ್ನನ್ನು ವಿಚಾರಣೆಗೆ ಕರೆಯಿಸಿದ್ದರು. ಬೇಕಿದ್ದರೆ ತನಿಖೆ ಮಾಡಲಿ. ಎಲ್ಲವನ್ನೂ ಎದುರಿಸುತ್ತೇನೆ ಎಂದರು.
ರೌಡಿ ಶೀಟರ್ ಸೈಕಲ್ ರವಿಯನ್ನು ಜೂನ್ 27ರಂದು ರಾಜರಾಜೇಶ್ವರಿ ನಗರದ ನೈಸ್ ರೋಡ್ ಸಮೀಪ ಬಂಧಿಸಲು ಹೋದಾಗ ಆತ, ಪೊಲೀಸ್ ಕಾನ್‌ಸ್ಟೆಬಲ್ ಸತೀಶ್ ಮೇಲೆ ಹಲ್ಲೆಗೆ ಯತ್ನಿಸಿದ್ದ.
ಆಗ ಸಿಸಿಬಿ ಇನ್‌ಸ್ಪೆಕ್ಟರ್ ಪ್ರಕಾಶ್ ಮತ್ತು ಪಿಐ ಮಲ್ಲಿಕಾರ್ಜುನ್ ಎರಡು ಸುತ್ತು ಗುಂಡುಹಾರಿಸಿ ಅವನನ್ನು ವಶಕ್ಕೆ ಪಡೆದುಕೊಂಡಿದ್ದರು.
ಸೈಕಲ್ ರವಿಯೊಂದಿಗೆ ರಾಜಕಾರಣಿಗಳು ಮತ್ತು ಸಿನಿಮಾರಂಗದ ಅನೇಕರು ನಂಟು ಇರಿಸಿಕೊಂಡಿದ್ದರು ಎಂಬ ಆರೋಪಗಳು ಕೇಳಿಬಂದಿವೆ.












Click it and Unblock the Notifications