ಬಿಎಂಟಿಸಿ ಮಹಿಳಾ ಕಂಡಕ್ಟರ್ ಮೇಲೆ ಆಸಿಡ್ ದಾಳಿ
ಬೆಂಗಳೂರು, ಡಿಸೆಂಬರ್ 19: ಬೈಕ್‌ನಲ್ಲಿ ಬಂದ ಅಪರಿಚಿತರು ಮಹಿಳೆ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆ ಬಿಎಂಟಿಸಿಯಲ್ಲಿ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಗುರುವಾರ ಮುಂಜಾನೆ 5.45ರ ಸುಮಾರಿಗೆ ಬಾಗಲಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಂದಿರಾ ಬಾಯಿ (35) ಎಂಬ ಮಹಿಳೆ ಮೇಲೆ ಬೈಕ್‌ನಲ್ಲಿ ಬಂದ ಇಬ್ಬರು ಆಸಿಡ್ ದಾಳಿ ನಡೆಸಿದ್ದಾರೆ.
ಇಂದಿರಾ ಬಾಯಿ ಪೀಣ್ಯಾ ಬಿಎಂಟಿಸಿ ಬಸ್ ಡಿಪೋದಲ್ಲಿ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಅವರು ಕೆಲಸಕ್ಕೆ ಹೋಗಲು ಮನೆಯಿಂದ ಹೊರಟಿದ್ದರು. ಕೆಲವು ದೂರ ಸಾಗುವಷ್ಟರಲ್ಲಿ ಈ ದಾಳಿ ನಡೆದಿದೆ.

ಆಸಿಡ್ ದಾಳಿಯಿಂದಾಗಿ ಇಂದಿರಾ ಅವರ ಮುಖದ ಬಲಭಾಗ, ಬಲಗೈಗೆ ಗಾಯವಾಗಿದೆ. ಸಪ್ತಗಿರಿ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಮಹಿಳೆ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದ್ದಾರೆ.
ತುಮಕೂರಿನ ಶಿರಾ ಮೂಲದ ಇಂದಿರಾ ಬಾಯಿ ಮೇಲೆ ಆರು ತಿಂಗಳ ಹಿಂದೆಯೂ ಆಸಿಡ್ ದಾಳಿ ನಡೆದಿತ್ತು. ಆಸಿಡ್ ದಾಳಿಗೆ ಕಾರಣಗಳೇನು ಎಂಬುದು ತಿಳಿದು ಬಂದಿಲ್ಲ. ಬಾಲಗಕುಂಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.












Click it and Unblock the Notifications