NA Haris: ಬಿಡಿಎ ಅಧ್ಯಕ್ಷರ ನೇಮಕಾತಿಗೆ ವಿರೋಧ
ಬೆಂಗಳೂರು, ಜನವರಿ 28: ಕರ್ನಾಟಕ ರಾಜ್ಯ ಸರ್ಕಾರ ಸಾಕಷ್ಟು ಕಸರತ್ತಿನ ಬಳಿಕ ವಿವಿಧ ನಿಗಮಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದೆ. ಈ ಮೂಲಕ ಪಕ್ಷದಲ್ಲಿ ಸಮತೋಲನ ಕಾಯ್ದುಕೊಂಡಿದೆ. ಆದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧ್ಯಕ್ಷ ನೇಮಕಕ್ಕೆ ವಿರೋಧ ವ್ಯಕ್ತವಾಗಿದೆ.
ರಾಜ್ಯ ಸರ್ಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಸ್ಥಾನಕ್ಕೆ ಶಾಂತಿನಗರ ಶಾಸಕ ಎನ್. ಎ. ಹ್ಯಾರಿಸ್ ಅವರನ್ನು ನೇಮಕ ಮಾಡಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದರುವ ಆಮ್ ಆದ್ಮಿ ಪಾರ್ಟಿ (AAP), ಹಲವು ವರ್ಷಗಳಿಂದ ಪ್ರತಿನಿಧಿಸುತ್ತ ಬಂದಿರುವ ಸ್ವಂತ ಕ್ಷೇತ್ರ ಶಾಂತಿನಗರವನ್ನೇ ಅಭಿವೃದ್ಧಿ ಪಡಿಸಲಾಗದ ಎನ್. ಎ. ಹ್ಯಾರಿಸ್ ಅವರ ಕೈಗೆ ಇಡೀ ಬೆಂಗಳೂರು ಅಭಿವೃದ್ಧಿ ಪಡಿಸುವ ಜವಾಬ್ದಾರಿಯನ್ನು ವಹಿಸಿರುವುದು ಪ್ರಶ್ನಾರ್ಹವಾಗಿದೆ.

ಬಿಡಿಎ ಅಧ್ಯಕ್ಷರಾಗಲು ಹ್ಯಾರಿಸ್ ಅವರಿಗಿರುವ ಅರ್ಹತೆಗಳು ಏನು? ಎಂದು ಎಎಪಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಪ್ರಶ್ನೆ ಮಾಡಿದ್ದಾರೆ. ಬಿಡಿಎ ಅಧ್ಯಕ್ಷ ಸ್ಥಾನದ ನೇಮಕಕ್ಕೆ ಅವರು ವಿರೋಧ ವ್ಯಕ್ತಪಡಿಸಿದರು.
ಭರವಸೆ ಹುಸಿಯಾಗಿದೆ
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ಜನಪ್ರತಿನಿಧಿಗಳಿಗೆ ಮಣೆ ಹಾಕುವ ಪದ್ಧತಿ ಬಿಟ್ಟು, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದಾಗ ಬೆಂಗಳೂರು ಅಭಿವೃದ್ಧಿಯತ್ತ ಸಾಗಬಹುದು ಎಂಬ ಭರವಸೆ ವ್ಯಕ್ತವಾಗಿತ್ತು.
ಆದರೆ 7 ತಿಂಗಳ ಅವಧಿಯಲ್ಲೇ ಅವರಿಂದ ಅಧಿಕಾರವನ್ನು ಕಸಿದು ಪುನಃ ರಾಜಕಾರಣಿಗಳ ಹೆಗಲಿಗೆ ಏರಿಸಲಾಗುತ್ತಿದೆ. ಇಂತಹ ಬದಲಾವಣೆಗೆ ಎದುರಾದ ಒತ್ತಡವೇನು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಯೋಜನೆ ಪೂರ್ಣಗೊಂಡಿಲ್ಲ ಎಂಬ ಆರೋಪ
ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿನ ಈಜಿಪುರ ಸ್ಲಂ ಪ್ರದೇಶವನ್ನು ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಮಾಲಿಕತ್ವದ ಮೆಹರಿಕ್ ಹೋಲ್ಡಿಂಗ್ಸ್ ಸಂಸ್ಥೆಯ ಜೊತೆಗೂಡಿ ಮಾಡಿಕೊಂಡ ಒಪ್ಪಂದ ಸಂಪೂರ್ಣ ಹಳ್ಳ ಹಿಡಿದಿದೆ. ಅಭಿವೃದ್ಧಿಪಡಿಸಿ ನೂತನ ಮನೆಗಳನ್ನು ಕಟ್ಟಿಕೊಡುತ್ತೇವೆಂಬ ನೆಪವಡ್ಡಿ ತೆರವುಗೊಳಿಸಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಆಗಿದೆ. ಇದುವರೆಗೂ ಅಲ್ಲಿನ ಸಾವಿರಾರು ಕುಟುಂಬಗಳು ಬೀದಿಬದಿಯಲ್ಲಿಯೇ ವಾಸಿಸುತ್ತಿವೆ. ಇಂತಹ ಕರಾಳ ಮುಖವನ್ನು ಹೊತ್ತಿರುವ ಶಾಸಕ ಹ್ಯಾರಿಸ್, ಬೆಂಗಳೂರಿನ ಅಭಿವೃದ್ಧಿ ಹೇಗೆ ಪಡಿಸುತ್ತಾರೆ ಎಂದು ಪ್ರಶ್ನಿಸಿದರು.

ಸರ್ಕಾರದ ವಿರುದ್ಧ ಎಎಪಿ ಆರೋಪಗಳೇನು?
ನಗರದ ಅತಿದೊಡ್ಡ ಕೊಳಚೆ ಪ್ರದೇಶವೆಂದರೆ ಅದು ಶಾಂತಿನಗರ ವಿಧಾನಸಭಾ ಕ್ಷೇತ್ರವಾಗಿದೆ. ಮಿತಿಯೇ ಇಲ್ಲದ ರಾಜಕಾಲುವೆ ಒತ್ತುವರಿ, ಲೆಕ್ಕವಿಲ್ಲದಷ್ಟು ಹೊಂಡ-ಗುಂಡಿಗಳು, ಮ್ಯಾನ್‌ಹೋಲ್ ಹಾಗೂ ಚರಂಡಿಗಳ ತ್ಯಾಜ್ಯ ನೀರೆಲ್ಲ ಮೇಲೆ ಬಂದು ಗಬ್ಬೆದ್ದ ರಸ್ತೆಗಳೇ ತುಂಬಿವೆ. ದಿನಕ್ಕೊಂದು ಬಾರ್, ಪಬ್, ಹುಕ್ಕಾಬಾರ್‌ಗಳು ಹುಟ್ಟಿಕೊಳ್ಳ ಈ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು ಅವ್ಯವಸ್ಥೆಗಳ ಕೂಪವಾಗಿವೆ.
ಲೆಕ್ಕವಿಲ್ಲದಷ್ಟು ಅನಧಿಕೃತ ಕಟ್ಟಡಗಳು, ಪಬ್, ಹುಕ್ಕಾಬಾರ್‌ಗಳು ತಾಂಡವವಾಡುತ್ತಿವೆ. ಡ್ರಗ್ ಮಾಫಿಯಾಗೆ ಕಡಿವಾಣವೇ ಇಲ್ಲವಾಗಿದೆ. ಒಂದೇ ಒಂದು ಸ್ಲಮ್ ಅಭಿವೃದ್ಧಿ ಪಡಿಸಿರುವ ಉದಾಹರಣೆ ಇದ್ದರೆ ಹೇಳಿ? ಎಂದರು.
ಅನಧಿಕೃತ ಕಟ್ಟಡ, ಬಾರ್, ಪಬ್, ಹುಕ್ಕಾಬಾರ್‌ಗಳಿಗೆ ಹ್ಯಾರಿಸ್ ಕುಟುಂಬದವರೇ ಪಾಲುದಾರರು ಎಂಬ ಆರೋಪಗಳಿವೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ತಪ್ಪಾದ ಆಸ್ತಿ ವಿವರಗಳನ್ನು ಸಲ್ಲಿಸಿದ್ದಾರೆ ಎಂಬ ಆರೋಪವೂ ಇದೆ. ಅವರ ಮಗ ಮೊಹಮ್ಮದ್ ಹ್ಯಾರಿಸ್ ನಲಪಾಡ್ ನಡೆಸಿರುವ ರೌಡಿಸಮ್, ಪುಂಡಾಟಗಳಿಗೆ ಲೆಕ್ಕವಿದೆಯೇ? ಸ್ವಂತ ಮಗನನ್ನು, ಸ್ವಂತ ಕ್ಷೇತ್ರವನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಲಾಗದ ಹ್ಯಾರಿಸ್ ಅವರಿಂದ ಬೆಂಗಳೂರು ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ? ಎಂದು ಆರೋಪಿಸಿದರು.












Click it and Unblock the Notifications