Namma Metro: ಅನುಮತಿ ಇಲ್ಲದೇ ಈ ಕೃತ್ಯವೆಸಗಿದವನ ಬಂಧನ: ಮೆಟ್ರೋ ನಿಲ್ದಾಣಗಳಲ್ಲಿ ಆಗಿದ್ದೇನು?
ಬೆಂಗಳೂರು, ಏಪ್ರಿಲ್ 29: ನಮ್ಮ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅನುಮತಿ ಪಡೆಯದೇ ಅಸಾಂಪ್ರದಾಯಿಕ ಮಾರ್ಕೆಟಿಂಗ್ ಕೃತ್ಯ ಎಸಗಿದ ವ್ಯಕ್ತಿಯೊಬ್ಬರನ್ನು ಬಂಧಿಸಿದ ಘಟನೆ ನಡೆದಿದೆ.
ಹೌದು, ಬೆಂಗಳೂರು ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ವ್ಯಕ್ತಿಯೊಬ್ಬರು ಅಸಾಂಪ್ರದಾಯಿಕ ಮಾರ್ಕೇಟಿಂಗ್ ಕೃತ್ಯ ಎಸಗಿದ್ದಾರೆ. 31 ವರ್ಷದ ಯುವಕ ಅರುಣ್ ಎಂಬುವವರ ವಿರುದ್ಧ BMRCL ಸಿಬ್ಬಂದಿ ದೂರು ನೀಡಿದ್ದರು. ಇದರ ಆಧಾರದಲ್ಲಿ ಪೊಲೀಸರು ಅರುಣ್ ಅವರನ್ನು ಬಂಧಿಸಿದ್ದಾರೆ ಎಂದು 'ಟಿವಿ ನೈನ್' ವರದಿ ಮಾಡಿದೆ.

ಬೆಂಗಳೂರಿನ ತಲಘಟ್ಟಪುರ ಅರುಣ್ ಸ್ಟಾರ್ಟ್ ಅಪ್ ಉದ್ಯೋಗಿಯಾಗಿದ್ದಾರೆ. ಚಾಕೊಲೇಟ್ ಉತ್ಪನ್ನಗಳನ್ನು ಮಾರಾಟ ಮಾಡಲು ಅವರು ಅಸಾಂಪ್ರದಾಯಿಕ ಗೆರಿಲ್ಲಾ ವಿಧಾನ ಬಳಸಿ ನಮ್ಮ ಮೆಟ್ರೋ ಸಿಬ್ಬಂದಿ ಬಳಿ ಏಪ್ರಿಲ್ 23ರಂದು ಸಿಕ್ಕಿ ಬಿದ್ದಿದ್ದರು. ಅಂದು ದೀಪಾಂಜಲಿ ಮೆಟ್ರೋ ನಿಲ್ದಾಣದಲ್ಲಿ ಚಾಕೊಲೇಟ್ ಮಾರಾಟಕ್ಕಾಗಿ 'ಕ್ಯೂಆರ್ ಕೋಡ್' ಅಂಟಿಸುವಾಗ ಸಿಕ್ಕಿ ಬಿದ್ದಿದ್ದಾರೆ.
ವಾಶ್ ರೂಮ್‌ಗಳಲ್ಲಿ ಕ್ಯೂಆರ್ ಕೋಡ್
ನಮ್ಮ ಮೆಟ್ರೋ ಅಧಿಕಾರಿಗಳ ಯಾವುದೇ ಪೂರ್ವಾನುಮತಿಯಲ್ಲಿ ಮೆಟ್ರೋ ನಿಲ್ದಾಣಗಳ ವಾಶ್ ರೂಂ ನಲ್ಲಿ ಚಾಕೊಲೇಟ್ ಉತ್ಪನ್ನ ಮಾರಾಟಕ್ಕೆ ಸಂಬಂಧಿಸಿದ ಕ್ಯೂಆರ್ ಕೋಡ್ ಅಂಟಿಸಿದ್ದಾರೆ. ಈಗಾಗಲೇ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಅರುಣ್ ಅವರು ಅಂಟಿಸಿದ್ದಾರೆ ಎಂದು ಮೆಟ್ರೋ ಸಿಬ್ಬಂದಿ ತಿಳಿಸಿದ್ದಾರೆ.
ನಿಮ್ಮ ಪ್ರೀತಿಪಾತ್ರರನ್ನು ಡಿಜಿರ್‌ನೊಂದಿಗೆ ಆಕರ್ಷಿಸಿ, ನನ್ನನ್ನು ಸ್ಕ್ಯಾನ್ ಮಾಡಿ ಎಂದು ಟ್ಯಾಗ್ ಲೈನ್ ಹಾಕಿರುವ ಕ್ಯೂಆರ್ ಕೋಡ್ ಇದಾಗಿದೆ. ಇದನ್ನು ಸ್ಕ್ಯಾನ್ ಮಾಡಿದರೆ ಚಾಕೊಲೆಟ್ ಖರೀದಿಸಬಹುದಾಗಿದೆ.

ಸಾಕಷ್ಟು ಕಂಪನಿಗಳು ಗೆರಿಲ್ಲಾ ಮಾರ್ಕೆಟಿಂಗ್ ವಿಧಾನವನ್ನು ಬಳಸುತ್ತವೆ. ಇದ ಅಸಾಂಪ್ರದಾಯಿಕ ಮತ್ತು ಕಾನೂನುಬಾಹಿರ ವಿಧಾನವಾಗಿದೆ. ಈ ಅರುಣ್ ಅವರು ಕ್ಯೂಆರ್ ಕೋಡ್ ಅಂಟಿಸಲು ಮೊದಲು ನಮ್ಮ ಮೆಟ್ರೋ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಯಾವುದೇ ಜಾಹೀರಾತು ನೀಡಲು, ಮೆಟ್ರೋ ನಿಲ್ದಾಣವನ್ನು ಇನ್ನಿತರ ಕಾರಣಕ್ಕೆ ಬಳಕೆಗೆ ಮೊದಲು ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅದಕ್ಕಾಗಿ ಹಣ ಪಾವತಿಸಲೂ ಬೇಕಾಗುತ್ತದೆ. ನಂತರ ಒಂದಷ್ಟು ನಿಯಮಗಳಡಿ ಮಾರ್ಕೇಟಿಂಗ್ ಮಾಡಿಕೊಳ್ಳಬಹುದಾಗಿದೆ.
ಕ್ಯೂಆರ್ ಕೋಡ್ ಅಂಟಿಸುವಾಗಿ ಸಿಕ್ಕಿ ಬಿದ್ದ ಯುವಕ
ಆದರೆ ಇದ್ಯಾವುದನ್ನು ಮಾಡದೇ ಅರುಣ್ ಅವರು ಕ್ಯೂಆರ್ ಕೋಡ್ ಅಂಟಿಸಿದ್ದರು ಎಂದು ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ಸಿಬ್ಬಂದಿ ಚಂದ್ರಶೇಖರಯ್ಯ ಅವರು ಮಾಹಿತಿ ನೀಡಿದ್ದಾರೆ. ಈ ನಿಲ್ದಾಣದಲ್ಲಿ ಏಪ್ರಿಲ್ 23ರಂದು ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ ಚಾಕೊಲೇಟ್ ಮಾರಾಟದ ಕ್ಯೂಆರ್ ಕೋಡ್ ಅಂಟಿಸಿದ್ದು ಪತ್ತೆ ಆಗಿದೆ.
ಬಿಎಂಆರ್‌ಸಿಎಲ್ ನೀಡಿದ ದೂರಿಮೆ ಮೇರೆಗೆ ಆಸ್ತಿ ನಷ್ಟ ತಡೆ ಕಾಯ್ದೆ, ಕರ್ನಾಟಕ ತೆರೆದ ಸ್ಥಳಗಳ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 427 ಅಡಿ ಅರುಣ್ ಅವರ ಮೇಲೆ ದೂರು ದಾಖಲಾಗಿದೆ. ವಿಚಾರಣೆ ವೇಳೆ ಅವರು ತಾವು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.












Click it and Unblock the Notifications