ಮೋರಿಯಲ್ಲಿ ಕೊಚ್ಚಿಹೋದ ಹುಡುಗಿಗೆ ಮುಂದುವರೆದ ಶೋಧ
ಬೆಂಗಳೂರು, ಅ.7 : ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಮಳೆ ನೀರಿನಲ್ಲಿ ಕೊಚ್ಚಿ ಹೋದ 9 ವರ್ಷದ ಬಾಲಕಿಗಾಗಿ ಹುಡುಕಾಟ ಮುಂದುವರೆದಿದೆ. ಸತತ 14 ಗಂಟೆಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು ಮಗುವಿನ ಶವ ಇನ್ನೂ ಪತ್ತೆಯಾಗಿಲ್ಲ. ಅಗ್ನಿ ಶಾಮಕ ದಳದ ಸಿಬ್ಬಂದಿ ಮಂಗಳವಾರ ಬೆಳಗ್ಗೆಯೂ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಸೋಮವಾರ ರಾತ್ರಿ ಮಳೆ ನೀರಿನಲ್ಲಿ ಕೊಚ್ಚಿಹೋದ ಬಾಲಕಿಯನ್ನು ಗೀತಾ ಲಕ್ಷ್ಮೀ ಎಂದು ಗುರುತಿಸಲಾಗಿದೆ. ತಮಿಳುನಾಡಿನ ಕಡಲೂರಿನ ಶಂಕರ್ ಮತ್ತು ಕಸ್ತೂರಿ ದಂಪತಿಯ ಪುತ್ರಿ ಗೀತಾ ದಸರಾ ರಜೆ ಕಳೆಯಲು ಬೆಂಗಳೂರಿನಲ್ಲಿರುವ ಚಿಕ್ಕಮ್ಮನ ಮನೆಗೆ ಬಂದಿದ್ದಳು. ರಾತ್ರಿ ಚಿಕ್ಕಮ್ಮನ ಜೊತೆ ಗೀತಾ ಪುಟ್‌ಪಾತ್ ಮೇಲೆ ನಡೆದು ಹೋಗುತ್ತಿದ್ದಾಗ, ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿ ಬಳಿ ಕಾಲುಜಾರಿ ಚರಂಡಿಗೆ ಬಿದ್ದಿದ್ದಾಳೆ.

ಫುಟ್‌ಪಾತ್ ಮೇಲೆ ನಡೆಯುವಾಗ ಗೀತಾಳ ಒಂದು ಕಾಲಿನ ಚಪ್ಪಲಿ ಕಳಚಿದ್ದರಿಂದ ಚಿಕ್ಕಮ್ಮನ ಕೈ ಬಿಡಿಸಿಕೊಂಡು ಚಪ್ಪಲಿ ತೆಗೆದುಕೊಳ್ಳಲು ಮುಂದಾಗಿದ್ದಳು. ಆಗ ಕಾಲುಜಾರಿ ಚರಂಡಿಗೆ ಬಿದ್ದಿದ್ದಾಳೆ. ಗೀತಾ ನೀರಿನಲ್ಲಿ ಕೊಚ್ಚಿ ಹೋಗುವುದನ್ನು ಕಂಡ ಚಿಕ್ಕಮ್ಮ ನೆರವಿಗಾಗಿ ಕೂಗಿದ್ದಾರೆ. ಸಮೀಪದಲ್ಲೇ ಇದ್ದ ಆಟೋ ಚಾಲಕರು ಓಡಿ ಬಂದು ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ, ನೀರಿನ ರಭಸ ಹೆಚ್ಚಾಗಿದ್ದರಿಂದ ಅದು ಸಾಧ್ಯವಾಗಿಲ್ಲ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮಗುವಿನ ಶವಕ್ಕಾಗಿ ಶೋಧಕಾರ್ಯ ಕೈಗೊಂಡರು. ಆದರೆ, ಘಟನೆ ನಡೆದ ಸ್ಥಳದಿಂದ 200 ಮೀ. ದೂರದಲ್ಲಿ ಬೃಹತ್ ರಾಜಾ ಕಾಲುವೆಯಿದ್ದು, ಬಾಲಕಿ ಕಾಲುವೆಯಲ್ಲಿ ಕೊಚ್ಚಿ ಹೋಗಿರುಬಹುದು ಎಂದು ಶಂಕಿಸಿಲಾಗಿದೆ. ರಾತ್ರಿ 2 ಗಂಟೆಯವರೆಗೂ ಕಾರ್ಯಾಚರಣೆ ನಡೆಸಲಾಗಿದ್ದು, ಬಾಲಕಿ ಶವ ಪತ್ತೆಯಾಗಿಲ್ಲ. ಮಂಗಳವಾರ ಬೆಳಗ್ಗೆ ಪುನಃ ಶೋಧ ಕಾರ್ಯ ಆರಂಭಿಸಲು ನಿರ್ಧರಿಸಲಾಗಿದೆ.
ಕಾಮಗಾರಿ ನಡೆಯುತ್ತಿತ್ತು : ಬಿಳೇಕಹಳ್ಳಿ ಬಳಿ ಚರಂಡಿ ದುರಸ್ತಿ ಕಾಮಗಾರಿ ಆರು ತಿಂಗಳಿನಿಂದ ನಡೆಯುತ್ತಿತ್ತು. ಆದ್ದರಿಂದ ಅಲ್ಲಲ್ಲಿ ಕಲ್ಲು ಚಪ್ಪಡಿಗಳನ್ನು ತೆಗೆದು ಹಾಗೆಯೇ ಬಿಡಲಾಗಿತ್ತು. ಆದ್ದರಿಂದ ಮಗು ಕಾಲುಜಾರಿ ಚರಂಡಿಗೆ ಬಿದ್ದು ಕೊಚ್ಚಿ ಹೋಗಿದ್ದಾಳೆ ಎಂದು ಸ್ಥಳೀಯರು ಹೇಳಿದ್ದಾರೆ. ಅಂದಹಾಗೆ 2009ರ ಜೂನ್‌ನಲ್ಲಿ ಅಭಿಷೇಕ್ ಎಂಬ ಬಾಲಕ ಲಿಂಗರಾಜಪುರದಲ್ಲಿ ಚರಂಡಿಗೆ ಬಿದ್ದು ಕೊಚ್ಚಿ ಹೋಗಿದ್ದ. ಶೋಧ ಕಾರ್ಯ ನಡೆಸಿದರೂ ಬಾಲಕನ ಶವ ಪತ್ತೆಯಾಗಿರಲಿಲ್ಲ.

ಇನ್ನೂ ಎರಡು ದಿನ ಮಳೆ : ಸೋಮವಾರ ನಗರದಲ್ಲಿ 25.8 ಮಿ.ಮೀ. ಮಳೆಯಾಗಿದೆ. ಎಚ್‌ಎಎಲ್‌ನಲ್ಲಿ 8.2 ಮಿ.ಮೀ. ಹಾಗೂ ಯಲಹಂಕದಲ್ಲಿ 35 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅ.12ರಂದು ಆಂಧ್ರ ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಭೀತಿ ಇದ್ದು, ಕರ್ನಾಟಕದ ಮೇಲೆ ನೇರ ಪರಿಣಾಮ ಬೀರದಿದ್ದರೂ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ತುಮಕೂರಿನಲ್ಲಿ ಸಿಡಿಲು ಬಡಿದು ಮೂವರು ಮೃತಪಟ್ಟಿದ್ದರೆ, ಕಡೂರಿನ ಉಪ್ಪಿನಹಳ್ಳದ ನೆರೆ ನೀರಿನಲ್ಲಿ ಇಬ್ಬರು ಮಹಿಳೆಯರು ಕೊಚ್ಚಿ ಹೋಗಿದ್ದಾರೆ.












Click it and Unblock the Notifications