ಇಸ್ರೋ ವಿಶ್ವದಾಖಲೆ ಹಿಂದೆ ಇರುವ 8 ಮಹಿಳೆಯರಿಗೊಂದು ಸಲಾಂ
ಇಸ್ರೋದಿಂದ ಈಚೆಗೆ ಏಕಕಾಲಕ್ಕೆ ನೂರಾನಾಲ್ಕು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಯಿತು. ಆ ಸಾಧನೆಗೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಯಿತು. ಈ ಸಾಧನೆ ಹಿಂದೆ ಕೆಲಸ ಮಾಡಿದ ಎಂಟು ಮಹಿಳೆಯರ ಪರಿಚಯವನ್ನು ಇಲ್ಲಿ ಮಾಡಿಕೊಡಲಾಗಿದೆ
ಬೆಂಗಳೂರು, ಫೆಬ್ರವರಿ 21: ಇಸ್ರೋದಿಂದ 104 ಉಪಗ್ರಹಗಳನ್ನು ಒಟ್ಟಿಗೆ ಕಕ್ಷೆಗೆ ಸೇರಿಸಲಾಯಿತು ಎಂಬುದು ದೇಶಕ್ಕೇ ಕೋಡು ಮೂಡಿಸಿದ ಕ್ಷಣ. ವಿದೇಶದ ಮಾಧ್ಯಮಗಳು ಸಹ ಭಾರತದ ಸಾಧನೆಗೆ ಉಘೇ ಉಘೇ ಅಂದವು. ಈ ಸಾಧನೆಯ ಹಿಂದೆ ಇಸ್ರೋದಲ್ಲಿ ಹಗಲು-ರಾತ್ರಿ ಎನ್ನದೆ, ತಮ್ಮ ವೈಯಕ್ತಿಕ ಜೀವನವನ್ನೂ ಪಕ್ಕಕ್ಕಿಟ್ಟು ದುಡಿದ ಮಹಿಳೆಯರ ಶ್ರಮವಿದೆ.
ಆ ಎಂಟು ಮಹಿಳೆಯರ ಪರಿಚಯವನ್ನು ಇಲ್ಲಿ ಮಾಡಿಕೊಡುತ್ತಿದ್ದೀವಿ. ಈ ಸಾಧಕಿಯರಿಗೊಂದು ಸಲಾಂ ಹೇಳೋಣ. ಜೊತೆಗೆ ಅವರ ಆಸಕ್ತಿ ಕುದುರಿದ್ದು ಹೇಗೆ ಅಂತ ತಿಳಿದುಕೊಳ್ಳೋಣ. ಇಸ್ರೋದಲ್ಲಿ ಅವರು ನಿಭಾಯಿಸಿದ ಜವಾಬ್ದಾರಿ ಏನು ಎಂಬ ಬಗ್ಗೆ ಸಣ್ಣ ಪರಿಚಯ ಕೂಡ ಆಗಲಿ. ಹೆಣ್ಣು ಅಂದರೆ ಶಕ್ತಿ ಎಂಬ ಅದೇ ಹಳೇ ಟೇಪ್ ನ ತಿರುಗಾ ಮುರುಗಾ ಓಡಿಸದೆ, ಒಂದು ನೇರ ಪರಿಚಯ ಮಾಡಿಕೊಳ್ಳೋಣ.[ಇಸ್ರೋದಿಂದ ಸ್ಚದೇಶಿ ನಿರ್ಮಿತ ಕ್ರಯೋಜೆನಿಕ್ ಇಂಜಿನ್ ಪರೀಕ್ಷೆ ಯಶಸ್ವಿ]
ಮನೆಯಲ್ಲಿ ಮಗಳಿಗೋ ತಂಗಿಗೋ ಅಕ್ಕನಿಗೋ, ಎಷ್ಟಿದ್ದರೂ ಮದುವೆ ಮಾಡಿಕೊಂಡು ಹೋಗ್ತೀಯಲ್ಲಮ್ಮಾ, ನಿನ್ನ ಗಂಡನ ಕೆಲಸಕ್ಕೆ ಅನುಕೂಲ ಮಾಡಿಕೊಟ್ಟು, ಅದರಲ್ಲಿ ಸಂತೋಷ ಕಾಣು ಎಂಬ ಮಾತನಾಡುವ ಮುನ್ನ ಈ ಸಾಧಕಿಯರ ತಪಸ್ಸು, ಆ ಮೂಲಕ ಕಂಡ ಯಶಸ್ಸನ್ನು ಒಮ್ಮೆ ಕಣ್ಣೆದುರು ತಂದುಕೊಳ್ಳಿ. ಒಲಿಂಪಿಕ್ಸ್ ನಲ್ಲಿ ದೇಶದ ಮರ್ಯಾದೆ ಉಳಿಸಿದ ಹೆಣ್ಣುಮಕ್ಕಳ ಸಾಧನೆಯನ್ನು ನೆನಪಿಸಿಕೊಳ್ಳಿ..

ಮಿನಲ್ ಸಂಪತ್
ಮಂಗಳ ಯೋಜನೆಯಲ್ಲಿ ಕಳೆದ ಎರಡು ವರ್ಷಗಳಿಂದ ಮಿನಲ್ ಸಂಪತ್ ಸಿಸ್ಟಮ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ ಹದಿನೆಂಟು ಗಂಟೆ ದುಡಿಯುತ್ತಿರುವ ಈಕೆಗೆ ದೇಶದ ಹೆಮ್ಮೆಯ ಯೋಜನೆಯ ಭಾಗವಾಗಿರುವುದೇ ಹೆಮ್ಮೆ. "ನಾವು, ನಮ್ಮ ತಂಡದ ಮಧ್ಯೆ ಹೊಂದಾಣಿಕೆ ಬಹಳ ಚೆನ್ನಾಗಿದೆ. ನಿಗದಿತ ಸಮಯದೊಳಗೆ ಕೆಲಸ ಮಾಡಬೇಕು" ಎಂದು ನಮಗೆ ಗೊತ್ತಿದೆ ಎನ್ನುತ್ತಾರೆ ಆಕೆ.
ಮಂಗಳಯಾನ ಯೋಜನೆಗಾಗಿ ಮಿನಲ್ ಮತ್ತು ಆಕೆಯ ತಂಡದ ಸದಸ್ಯರು ಎರಡು ವರ್ಷ ಯಾವುದೇ ರಜಾ ತೆಗೆದುಕೊಳ್ಳದೆ ಕೆಲಸ ಮಾಡಿದ್ದಾರೆ.

ಅನುರಾಧಾ ಟಿಕೆ
ಚಂದ್ರನ ಮೇಕೆ ನೀಲ್ ಆರ್ಮ್ ಸ್ಟ್ರಾಂಗ್ ಮೊದಲ ಹೆಜ್ಜೆಗಳನ್ನಿರಿಸಿದ್ದನ್ನು ನೋಡಿದ ಅನುರಾಧಾ ಅವರು ಬಾಹ್ಯಾಕಾಶ ವಿಜ್ಞಾನಿ ಅಗಬೇಕು ಎಂದು ಆಗಲೇ ನಿರ್ಧರಿಸಿದ್ದಂತೆ. ಕನಸು ಕಂಡ ವಯಸ್ಸು ಯಾವುದೇ ಇದ್ದರೂ ಅದನ್ನು ಸಾಕಾರ ಮಾಡಿಕೊಳ್ಳುವ ಕಸುವು ಕಳೆದುಕೊಳ್ಳದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಈಕೆ ಉದಾಹರಣೆ.
ಆಕೆಯೀಗ ಇಸ್ರೋದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರ ಪೈಕಿ ಹಿರಿಯ ಉದ್ಯೋಗಿ. ಅಲ್ಲಿ ಕಾರ್ಯನಿರ್ವಹಿಸುವ ಎಲ್ಲರಿಗೂ ಅನುರಾಧಾ ಅಂದರೆ ಸ್ಫೂರ್ತಿ

ರಿತು ಕರಿಧಲ್
ಎರಡು ಮಕ್ಕಳ ತಾಯಿಯಾದ ರಿತು ಅವರಿಗೆ ವೈಯಕ್ತಿಕ ಬದುಕು ಗುರಿಯೆಡೆಗಿನ ನಡೆಗೆ ಅಡ್ಡಿಯಾಗಿಲ್ಲ. ಅವರು ಚಿಕ್ಕವಯಸ್ಸಿನಲ್ಲಿ ಮನೆಯ ಮಹಡಿ ಮೇಲೆ ನಕ್ಷತ್ರ ನೋಡುತ್ತಾ, ಪುಸ್ತಕಗಳನ್ನು ಓದುತ್ತಾ ಕಳೆದವರಂತೆ. "ನನಗೆ ಆಕಾಶದ ಹೊರಗಿನ ರಹಸ್ಯಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿತ್ತು. ನಾನು ಯಾವುದರಲ್ಲಿ ತೊಡಗಿಕೊಳ್ಳಬೇಕು ಎಂದು ಆ ಮೂಲಕ ಗೊತ್ತಾಯಿತು" ಎಂದು ಆಕೆ ಹೇಳಿಕೊಂಡಿದ್ದಾರೆ.
ಮಂಗಳಯಾನ ಯೋಜನೆಯ ಡೆಪ್ಯುಟಿ ಆಪರೇಷನ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದವರು ರಿತು.

ಮೌಮಿತಾ ದತ್ತಾ
ಚಂದ್ರಯಾನ-1ರ ಬಗ್ಗೆ ಕೋಲ್ಕತ್ತಾದಲ್ಲಿ ಆನಂದ್ ಬಜಾರ್ ಪತ್ರಿಕೆಯ ಲೇಖನ ಓದಿದ ಮೌಮಿತಾಗೆ "ದೇಶಕ್ಕೋಸ್ಕರ ಇಂಥ ಮಹತ್ತರ ಕೆಲಸ ಮಾಡಿದವರೇ ಅದೃಷ್ಟವಂತರು" ಎಂದೆನಿಸಿತ್ತಂತೆ. ಮುಂದೆ 2015ರಲ್ಲಿ ದತ್ತಾ ಇಸ್ರೋದ ಪ್ರಮುಖ ವಿಜ್ಞಾನಿಗಳ ಪೈಕಿ ಒಬ್ಬರಾದರು. ಮಂಗಳಯಾನ ಯೋಜನೆಯಲ್ಲಿ ಕೆಲಸ ಮಾಡಿದರು.
ಸದ್ಯಕ್ಕೆ ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಆಪ್ಟಿಕಲ್ ಸೈನ್ಸ್ ವಿಚಾರವಾಗಿ ಕೆಲಸ ಮಾಡುತ್ತಿದ್ದಾರೆ.

ನಂದಿನಿ ಹರಿನಾಥ್
ಡೆಪ್ಯೂಟಿ ಡೈರೆಕ್ಟರ್ ಆಗಿರುವ ನಂದಿನಿ ಅವರಿಗೆ ಎರಡು ಸಾವಿರ ರುಪಾಯಿ ನೋಟಿನಲ್ಲಿ ಮಂಗಳ ಯಾನದ ಚಿತ್ರ ನೋಡುವುದು ಹೆಮ್ಮೆ. ಇಸ್ರೋ ಆಕೆಯ ಮೊದಲ ಕೆಲಸ. ಕಳೆದ ಇಪ್ಪತ್ತು ವರ್ಷಗಳಿಂದ ಇಲ್ಲೇ ಇದ್ದಾರೆ. "ಮಷೀನ್ ನಲ್ಲಿ ಮಾಡುವ ಕೆಲಸ ನಿಮ್ಮದಾಗಿದ್ದರೆ ಅದಕ್ಕಾಗಿ ಸೈನ್ಸ್ ಫಿಕ್ಷನ್ ಸಿನಿಮಾ ನೋಡಬೇಕು ಅಂತೇನಿಲ್ಲ. ನಾವು ನಿತ್ಯದ ಬದುಕಿನಲ್ಲೇ ಅಂಥ ಉತ್ಸಾಹ ಕಾಣ್ತೀವಿ" ಎನ್ನುತ್ತಾರೆ ನಂದಿನಿ.

ಕೃತಿ ಫೌಜ್ ದಾರ್
ಕೃತಿ ಮತ್ತವರ ತಂಡ ಉಪಗ್ರಹಗಳು ಮತ್ತು ಇತರ ಯೋಜನೆಗಳ ಗಮನ ಹರಿಸುತ್ತದೆ. ಮಹಿಳೆಯರು ಕೆಲಸ ಮಾಡುವುದಕ್ಕೆ ಇಸ್ರೋ ತುಂಬ ಒಳ್ಳೆ ವಾತಾವರಣ ಕಲ್ಪಿಸಿಕೊಡುತ್ತದೆ ಎನ್ನುತ್ತಾರೆ ಅವರು.

ಎನ್.ವಲರ್ ಮತಿ
ರಿಸ್ಯಾಟ್-1 ಭಾರತದ ಮೊದಲ ದೇಸಿ ರಾಡಾರ್ ಇಮೇಜಿಂಗ್ ಉಪಗ್ರಹದ ಪ್ರಾಜೆಕ್ಟ್ ಡೈರೆಕ್ಟರ್ ವಲರ್ ಮತಿ. ತಮಿಳುನಾಡು ಸರಕಾರದ ಅಬ್ದುಲ್ ಕಲಾಂ ಪ್ರಶಸ್ತಿ ಪಡೆದ ಮೊದಲಿಗರು. 1984ರಲ್ಲಿ ಇಸ್ರೋ ಸೇರಿದ ಅವರು ಹಲವು ಯೋಜನೆಗಳಲ್ಲಿ ತೊಡಗಿಸಿಕೊಂಡವರು. ಟಿಕೆ ಅನುರಾಧಾ ನಂತರ ಇಸ್ರೋದ ಪ್ರತಿಷ್ಠಿತ ಯೋಜನೆಗಳನ್ನು ಮುನ್ನಡೆಸಿದ ಮಹಿಳಾ ವಿಜ್ಞಾನಿ ವಲರ್ ಮತಿ.

ಟೆಸ್ಸಿ ಥಾಮಸ್
ಟೆಸ್ಸಿ ಅವರು ಜನಿಸಿದ್ದು 1963ರಲ್ಲಿ. ಅಗ್ನಿ-IV ಕ್ಷಿಪಣಿಯ ಪ್ರಾಜೆಕ್ಟ್ ಡೈರೆಕ್ಟರ್. ಆಕೆ ಮೊದಲ ಮಹಿಳಾ ಇಂಜಿನಿಯರ್ ಭಾರತದಲ್ಲಿ ಕ್ಷಿಪಣಿ ಯೋಜನೆಗಳನ್ನು ಮುನ್ನಡೆಸಿದವರು. ಆಕೆಯನ್ನು ಭಾರತದ 'ಕ್ಷಿಪಣಿ ಮಹಿಳೆ' ಅಂತಲೇ ಕರೆಯುತ್ತಾರೆ. ಆಕೆ ಡಿಆರ್ ಡಿಒಗಾಗಿ ಕೆಲಸ ಮಾಡುತ್ತಾರೆ, ಇಸ್ರೋಗಲ್ಲ.












Click it and Unblock the Notifications