Bengaluru: 5 ಹೊಸ ಸಂಚಾರ ಪೊಲೀಸ್ ಠಾಣೆ, 12 ರಸ್ತೆ ಕಾರಿಡಾರ್ ನಿರ್ಮಾಣ : CM
ಬೆಂಗಳೂರಲ್ಲಿನ ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ ಹೊಸದಾಗಿ 12 ರಸ್ತೆ ಕಾರಿಡಾರ್ ನಿರ್ಮಿಸಲಾಗುವುದು. ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ತಿಳಿಸಿದ್ದಾರೆ. ಏನದು ತಿಳಿಯಿರಿ.
ಬೆಂಗಳೂರು, ಫೆಬ್ರವರಿ 09: ಬೆಂಗಳೂರಲ್ಲಿನ ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ ಹೊಸದಾಗಿ 12 ರಸ್ತೆ ಕಾರಿಡಾರ್ ನಿರ್ಮಿಸುವುದರ ಜೊತೆಗೆ ಹೊಸದಾಗಿ ಐದು ಟ್ರಾಫಿಕ್ ಪೊಲೀಸ್ ಠಾಣೆ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಿದ್ದ ಎಚ್ಎಎಲ್. ವಿಮಾನ ನಿಲ್ದಾಣದ ವಾರ್ಡ್ ಮತ್ತು ಸುರಂಜನ್ ದಾಸ್ ಜಂಕ್ಷನ್ ಬಳಿಯ ಕೆಳಸೇತುವೆ ಲೋಕಾರ್ಪಣೆಗೊಳಿಸಿ ಅವರು ಈ ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಹೊಸದಾಗಿ ಐದು ಟ್ರಾಫಿಕ್ ಪೊಲೀಸ್ ಠಾಣೆ ಸ್ಥಾಪಿಸಿ, ಒಬ್ಬರು ಡಿಸಿಪಿ, ಸಿಬ್ಬಂದಿ, ವಾಹನ ಹಾಗೂ ಎಲ್ಲಾ ಸಲಕರಣೆಗಳನ್ನು ಸರ್ಕಾರ ಒದಗಿಸುತ್ತದೆ. ವಾಹನ ದಟ್ಟಣೆಯನ್ನು ಸಂಪೂರ್ಣ ನಿಯಂತ್ರಿಸುವ ಉದ್ದೇಶದಿಂದಲೇ ಹೊಸದಾಗ 12 ರಸ್ತೆ ಕಾರಿಡಾರ್ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.
ಸುರಂಜನ್‌ದಾಸ್ ಜಂಕ್ಷನ್ ಬಳಿಯ ಕೆಳಸೇತುವೆ (Underpass) ವೈಟ್ ಫೀಲ್ಡ್ ನಿಂದ ಹಿಡಿದು ಎಂಜಿ ರಸ್ತೆಯವರೆಗೆ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗಲಿದೆ. ವಾಹನಗಳ ಸುಗಮವಾಗಿ ಸಂಚಾರಕ್ಕೆ ಇದು ಅನುಕೂಲವಾಗಲಿದೆ. ಹಿಂದೊಮ್ಮೆ ಎಚ್.ಎ.ಎಲ್ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಸಮಸ್ಯೆ ನೋಡಿದ್ದು, ಅದನ್ನು ಪರಿಹರಿಸಲು ಅಧಿಕಾರಿಗಳು ಸೂಚನೆ ನೀಡಲಾಗಿತ್ತು ಎಂದು ಅವರು ವಿವರಿಸಿದರು.

ನಿತ್ಯ 5000 ವಾಹನಗಳು ರಸ್ತೆಗೆ ಇಳಿಯುತ್ತವೆ
ಬೆಂಗಳೂರು ನಗರ ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಇಲ್ಲಿ ನಿತ್ಯ ಕಡಿಮೆಯೆಂದರೂ ಸುಮಾರು 5 ಸಾವಿರ ವಾಹನಗಳು ರಸ್ತೆಗಿಳಿಯುತ್ತವೆ. ಬೆಂಗಳೂರಿನಲ್ಲಿ ಪ್ರತಿ ದಿನ 10 ಲಕ್ಷ ಜನ ಸಂಚಾರ ಮಾಡುತ್ತಾರೆ. ಇದರ ಪರಿಹಾರಕ್ಕೆ ಹಲವಾರು ದೀರ್ಘಾವಧಿ ಮತ್ತು ಅಲ್ಪಾವಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯತೆ ಇದೆ. ಸಂಚಾರ ಸುಗಮಗೊಳಿಸಲು ಅಮೃತ ನಗರೋತ್ಥಾನದಲ್ಲಿ 11 ಮೇಲ್ಸೇತುವೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಅನುಮೋದನೆ ಸಹ ನೀಡಲಾಗಿದೆ.

1ವರ್ಷ 11 ಮೇಲ್ಸೇತುವೆಗೆ ಅನುಮೋದನೆ ಇತಿಹಾಸ
ಬೆಂಗಳೂರಿನ ಇತಿಹಾಸದಲ್ಲಿಯೇ ಒಂದೇ ವರ್ಷ 11 ಮೇಲ್ಸೇತುವೆಗಳಿಗೆ ಅನುಮೋದನೆ ನೀಡಿರುವುದು ಇದೇ ಪ್ರಥಮ ಬಾರಿ. ಬೆಂಗಳೂರಿಗೆ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಮಾಡಿದಾಗ ಮಾತ್ರ ಬೆಂಗಳೂರಿನ ನಾಗರಿಕರಿಗೆ ಪರಿಹಾರ ನೀಡಿದಂತಾಗುತ್ತದೆ ಎಂಬ ನಿಲುವಿನಿಂದ ಅಮೃತನಗರೋತ್ಥಾನ ಯೋಜನೆಯಡಿಯಲ್ಲಿ ಮೂರು ಸಾವಿರ ಕೋಟಿ ರೂ.ಗಳ ಅನುದಾನವನ್ನು ರಸ್ತೆ ನಿರ್ಮಾಣಕ್ಕೆ ಒದಗಿಸಲಾಗಿದೆ.
ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ವಿಶೇಷ ಆಯುಕ್ತರನ್ನು ನೇಮಿಸಲಾಗಿದ್ದು, ಸಂಚಾರ ದಟ್ಟಣೆಯನ್ನು ಬಹಳಷ್ಟು ಕಡಿಮೆ ಮಾಡಲಾಗಿದೆ. ಹೊರಗಿನಿಂದ ಬರುವ ವಾಹನಗಳನ್ನು ನಿಯಂತ್ರಿಸಿ ಇಲ್ಲಿ ಹೆಚ್ಚು ದಕ್ಷತೆಯಿಂದ ಸಂಚಾರ ಪೋಲಿಸರನ್ನು ನಿಯೋಜಿಸಿ, ವಾಹನ ದಟ್ಟಣೆಯನ್ನು ಕಡಿಮೆ ಮಾಡಲಾಗಿದೆ.

ಬೆಂಗಳೂರಿನ ಈ ಎಲ್ಲ ಅಭಿವೃದ್ದಿಗೆ ಅನುದಾನ
ಬೆಂಗಳೂರು ಉಪನಗರ ರೈಲು ಯೋಜನೆಗೆ ಪ್ರಧಾನಮಂತ್ರಿಗಳು ಚಾಲನೆ ಈಡಿದ್ದಾರೆ. ಕಾಮಗಾರಿ ನಡೆಯುತ್ತಿದೆ.
ಸ್ಯಾಟೆಲೈಟ್ ರಿಂಗ್ ರೋಡ್ ಕಾಮಗಾರಿ ಪ್ರಗತಿಯಲ್ಲಿದೆ. ಪಿಆರ್ಆರ್ ಬಗ್ಗೆ ಆದಷ್ಟು ಬೇಗನೆ ತೀರ್ಮಾನಿಸಲಾಗುವುದು. ನಮ್ಮ ಮೆಟ್ರೊ 3ನೇ ಹಂತಕ್ಕೆ ಚಾಲನೆ ನೀಡಿದ್ದೇವೆ. ರಾಜಕಾಲುವೆಗಳ ಸಮಸ್ಯೆಗೆ 2 ಸಾವಿರ ಕೊಟಿ ರೂ.ಗಳನ್ನು ಒದಗಿಸಿದೆ. ಅಡೆತಡೆಗಳನ್ನು ತೆರವುಗೊಳಿಸಿ ಸಮಸ್ಯೆಗೆ ಪರಿಹಾರ ನೀಡುತ್ತಿದ್ದೇವೆ. ಸರ್ಕಾರ ಬೆಂಗಳೂರಿನ ಅಭಿವೃದ್ದಿಗೆ ಅನುದಾನ ಒದಗಿಸಿದೆ. ಪ್ರಮುಖ ಕೆರೆಗಳಿಗೆ ಗೇಟ್ ಅಳವಡಿಸಿ ನೀರಿನ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು. ವರ್ಷ 11 ಮೇಲ್ಸೇತುವೆಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಸೂಚಿಸಿದರು.

ಬೆಂಗಳೂರು ಅಭಿವೃದ್ಧಿ ಬಿಜೆಪಿ ಸ್ಪಂದನಾಶೀಲ ಕೆಲಸ
ನಮ್ಮದು ಸ್ಪಂದನಾಶೀಲ ಸರ್ಕಾರ. ಬೆಂಗಳೂರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ನಮ್ಮ ಸಚಿವರು ಅವರವರ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ನಗರದ ಅಭಿವೃದ್ಧಿಗೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಬೆಂಗಳೂರಿನ ಅಂತಾರಾಷ್ಟ್ರೀಯ ಬ್ರಾಂಡ್ ಉಳಿಸುವ ನಿಟ್ಟಿನಲ್ಲಿ ನಮ್ಮ ಕೆಲಸ ನಡೆದಿದೆ ಎಂದು ಅವರು ಹೇಳಿದರು.
ಸಚಿವರಾದ ಬಿ.ಎ. ಬಸವರಾಜ, ಮುರುಗೇಶ್ ನಿರಾಣಿ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆಡಳಿತಗಾರರಾದ ರಾಕೇಶ್ ಸಿಂಗ್, ಆರೋಗ್ಯ ಇಲಾಖೆ ವಿಶೇಷ ಆಯುಕ್ತ ಡಾ: ಕೆ.ವಿ.ತ್ರಿಲೋಕ್ ಚಂದ್ರ ಮೊದಲಾದವರು ಉಪಸ್ಥಿತರಿದ್ದರು.












Click it and Unblock the Notifications