ವರದಕ್ಷಿಣೆ ಕಿರುಕುಳ : ನವವಿವಾಹಿತೆ ನೇಣಿಗೆ ಶರಣು
ಬೆಂಗಳೂರು, ಸೆ. 07: ಕಳೆದ ಎರಡೂವರೆ ತಿಂಗಳ ಹಿಂದಷ್ಟೇ ವಿವಾಹವಾಗಿದ್ದ 25 ವರ್ಷದ ಮಹಿಳೆಯೊಬ್ಬರು ವರದಕ್ಷಿಣೆ ಕಿರುಕುಳ ತಾಳಲಾರದೆ ನೇಣಿಗೆ ಶರಣಾದ ಘಟನೆ ಯಲಹಂಕ ಉಪ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನ ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡಿಗೆ ಮನೆಯೊಂದರ ಮೂರನೇ ಮಹಡಿಯಲ್ಲಿ ಪ್ರತಿಭಾ ಅವರ ಶವ ಪತ್ತೆಯಾಗಿದೆ.

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಪಟ್ಟಣದ ಪ್ರತಿಭಾ ಚಿಕ್ಕನಳ್ಳಿ (25) ಮೃತ ದುರ್ಧೈವಿ. ಕಳೆದ ಎರಡೂವರೆ ತಿಂಗಳ ಹಿಂದಷ್ಟೇ ಮುದ್ದೇಬಿಹಾಳ ಪಟ್ಟಣದಲ್ಲಿ ವಿವಾಹವಾಗಿತ್ತು.
ಮುದ್ದೇಬಿಹಾಳ ತಾಲೂಕಿನ ಪಡೇಕನೂರ ಗ್ರಾಮದ ಮಲ್ಲನಗೌಡ ಸಂಗನಗೌಡ ಬಿರಾದಾರ ಎನ್ನುವಾತನೊಂದಿಗೆ ವಿವಾಹವಾಗಿತ್ತು. ಬಿಬಿಎಂಪಿ ಗುತ್ತಿಗೆ ನೌಕರನಾಗಿದ್ದುಕೊಂಡು ಖಾಯಂ ನೌಕರ ಎಂದು ಸುಳ್ಳು ಹೇಳಿ, ಹದಿನೈದು ಲಕ್ಷಕ್ಕೂ ಹೆಚ್ಚು ವರದಕ್ಷಿಣೆ ಪಡೆದು ಮದುವೆಯಾಗಿದ್ದ
ಎಂ.ಕಾಂ ಪದವೀಧರೆಯಾಗಿದ್ದು, ಗೋಲ್ಡ್ ಮೆಡಲಿಸ್ಟ್ ಆಗಿದ್ದ ಪ್ರತಿಭಾ ಪ್ರತಿಭಾವಂತೆಯೂ ಹೌದು. ಮದುವೆಯ ನಂತರವೂ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಪ್ರತಿಭಾ ಸಾವಿಗೆ ಜವಹರ ನವೋದಯ ಶಾಲೆ, ಕುಕನೂರಿನ ಅಲುಮ್ನಿ ಕಂಬನಿ ಮಿಡಿದಿದೆ.

ದಿನನಿತ್ಯ ಕಿರುಕುಳ : ಗಂಡ ಮತ್ತು ಮನೆಯವರಿಂದ ಆಕೆಯ ಸಂಬಳಕ್ಕಾಗಿ ಮತ್ತು ತವರುಮನೆಯಿಂದ ಹಣ ತರುವಂತೆ ಕಿರುಕುಳ ದಿನ ನಿತ್ಯ ಸಾಗಿತ್ತು.
ಪ್ರತಿಭಾ ಅವರು ತಾಯಿ, ಹಾಗೂ ಇಬ್ಬರು ಸಹೋದರರನ್ನ ಅಗಲಿದ್ದಾರೆ. ಮನೆಯವರಿಗೆ ಗಂಡನ ಮನೆಯವರ ಕಿರುಕುಳ ವಿವರಿಸಲಾಗದೇ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಅಥವಾ ಕೊಲೆಮಾಡಿ ನೇಣು ಬಿಗಿದಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರತಿಭಾಳ ಗಂಡ, ಅತ್ತೆ, ಮಾವನ ವಿರುದ್ಧ ತವರುಮನೆಯವರಿಂದ ದೂರು ದಾಖಲು.
ಗುರುವಾರದಂದು ಮರಣೋತ್ತರ ಪರೀಕ್ಷೆ ಬಳಿಕ ಶವ ಹೂವಿನ ಹಿಪ್ಪರಗಿಯತ್ತ ತೆಗೆದುಕೊಂಡು ಹೋಗಲಾಗಿದೆ.












Click it and Unblock the Notifications