ಪೀಣ್ಯ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ 15 ಕೋಟಿ ಯೋಜನೆ
ಬೆಂಗಳೂರು, ಆ.6 : ಪೀಣ್ಯ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ 15 ಕೋಟಿ ರೂ. ಮಂಜೂರು ಮಾಡಲಾಗುವುದು ಎಂದು ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಕೈಗಾರಿಕಾ ಪ್ರದೇಶಗಳಲ್ಲಿನ ರಸ್ತೆಗಳ ಅಭಿವೃದ್ಧಿಗೆ ಕಾರ್ಖನೆ ಮಾಲೀಕರ ಸಹಕಾರ ಪಡೆದು ಪೀಣ್ಯವನ್ನು ಅಭಿವೃದ್ಧಿ ಪಡಿಸಲಾವುದು ಎಂದು ಸಚಿವರು ತಿಳಿಸಿದ್ದಾರೆ.
ಮಂಗಳವಾರ ಸಚಿವ ರಾಮಲಿಂಗಾ ರೆಡ್ಡಿ ಅವರು ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಸ್ಥಳೀಯ ಶಾಸಕರಾದ ಎಸ್.ಮುನಿರಾಜು, ಮುನಿರತ್ನ, ಮೇಯರ್ ಕಟ್ಟೆ ಸತ್ಯನಾರಾಯಣ, ಉಪಮೇಯರ್ ಇಂದಿರಾ, ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ಮುಂತಾದವರೊಂದಿಗೆ ಭೇಟಿ ನೀಡಿದ್ದರು.

ಸುಮಾರು ಮೂರು ಗಂಟೆಗಳ ಕಾಲ ಪೀಣ್ಯದ ಹಲವು ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ ಸಚಿವರು. ರಾಶಿ ಬಿದ್ದಿರುವ ಕಸ, ಹದಗೆಟ್ಟ ರಸ್ತೆಗಳನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೆಲವು ಪ್ರದೇಶಗಳಲ್ಲಿ ಜನರ ಸಮಸ್ಯೆ ಆಲಿಸಿದ ಅವರು, ಇಷ್ಟುದಿನ ಏನು ಕೆಲಸ ಮಾಡುತ್ತಿದ್ದಿರಿ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. [ಪೀಣ್ಯದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ]
ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಳಚರಂಡಿ ಕೊಳವೆ ಅಳವಡಿಕೆಯಿಂದಾಗಿ ಇಲ್ಲಿನ ರಸ್ತೆಗಳೆಲ್ಲವೂ ಹಾಳಾಗಿವೆ. ಹಾಗಾಗಿ ನಗರೋತ್ಥಾನ ಯೋಜನೆಯಡಿ ಪೀಣ್ಯದ ಅಭಿವೃದ್ಧಿಗೆ 15 ಕೋಟಿ ರೂ. ನೀಡಲಾಗುವುದು. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಒಪ್ಪಿಗೆ ಪಡೆಯಲಾಗುವುದು ಎಂದು ಹೇಳಿದರು.
ಕೈಗಾರಿಕಾ ಪ್ರದೇಶದಲ್ಲಿ ಆಗಿರುವ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ಸಚಿವರು, ಕೆಲವು ಕಾರ್ಖನೆಗಳು ರಾಸಾಯನಿಕ ಯುಕ್ತ ನೀರನ್ನು ರಾಜಾ ಕಾಲುವೆಗೆ ಬಿಡುವ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆ.12ರಂದು ಸಭೆ : ಪೀಣ್ಯ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಮತ್ತು ಸಮಸ್ಯೆಗಳ ಕುರಿತು ಚರ್ಚಿಸಲು ಆ. 12ರಂದು ಕೈಗಾರಿಕೋದ್ಯಮಿಗಳು, ಪೀಣ್ಯ ಕೈಗಾರಿಕಾ ಸಂಘದ ಪದಾಧಿಕಾರಿಗಳು ಮತ್ತು ನಾನಾ ಇಲಾಖೆಯ ಅಧಿಕಾರಿಗಳ ಸಭೆಯನ್ನು ವಿಕಾಸಸೌಧದಲ್ಲಿ ನಡೆಸಲಾಗುವುದು ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
ಖಾಸಗಿಯವರ ಸಹಕಾರದಲ್ಲಿ ಅಭಿವೃದ್ಧಿ : ಪೀಣ್ಯ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ನಮ್ಮ ಬೆಂಗಳೂರು, ನಮ್ಮ ಕೊಡುಗೆ ಮಾದರಿಯಲ್ಲಿ ನಮ್ಮ ಬೆಂಗಳೂರು, ನಮ್ಮ ಪೀಣ್ಯ ಎಂಬ ಕಾರ್ಯಕ್ರಮ ರೂಪಿಸಿ, ಕಾರ್ಖನೆ ಮಾಲೀಕರ ಸಹಕಾರದಲ್ಲಿ ರಸ್ತೆಗಳ ಅಭಿವೃದ್ಧಿಗೆ ಯೋಜನೆ ರೂಪಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.












Click it and Unblock the Notifications