ಅಯ್ಯಪ್ಪ ಕೊಲೆಗೆ 1 ಕೋಟಿ ಸುಪಾರಿ, ಹತ್ಯೆ ಮಾಡಿದ್ದು ವಿವಿ ನೌಕರ
ಬೆಂಗಳೂರು, ಅಕ್ಟೋಬರ್ 17 : ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಅಯ್ಯಪ್ಪ ದೊರೆ ಹತ್ಯೆ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಹತ್ಯೆಗಾಗಿ 1 ಕೋಟಿ ರೂ. ಸುಪಾರಿಯನ್ನು ನೀಡಲಾಗಿತ್ತು.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಧೀರ್ ಅಂಗೂರ್, ಸೂರಜ್ ಸಿಂಗ್ ಬಂಧಿಸಲಾಗಿದೆ. ಅಲಯನ್ಸ್ ವಿಶ್ವವಿದ್ಯಾಲಯದ ನೌಕರ ಸೂರಜ್ ಸಿಂಗ್ ಡಾ. ಅಯ್ಯಪ್ಪ ದೊರೆ ಹತ್ಯೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.
ಸುಧೀರ್ ಅಂಗೂರ್ ಮತ್ತು ಡಾ. ಮಧುಕರ್ ಜಿ. ಅಂಗೂರ್ ನಡುವೆ ವಿಶ್ವವಿದ್ಯಾಲಯದ ಮಾಲೀಕತ್ವ ವಿಚಾರದಲ್ಲಿ ವ್ಯಾಜ್ಯವಿತ್ತು. ಡಾ. ಅಯ್ಯಪ್ಪ ವ್ಯಾಜ್ಯ ಬಗೆಹರಿಸಲು ಪ್ರಯತ್ನ ನಡೆಸಿದ್ದರು. ಹಳೆ ದ್ವೇಷದ ಹಿನ್ನಲೆಯಲ್ಲಿ ಸುಧೀರ್ ಅಂಗೂರ್ ಸುಪಾರಿ ನೀಡಿ, ಹತ್ಯೆ ಮಾಡಿಸಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಸೂರಜ್ ಸಿಂಗ್ 1 ಕೋಟಿ ರೂ. ಪಡೆದು ಡಾ. ಅಯ್ಯಪ್ಪ ಹತ್ಯೆ ಮಾಡಿದ್ದರು. ಡಾ. ಮಧುಕರ್ ಜಿ. ಅಂಗೂರ್ ಹತ್ಯೆಗೂ ಸಂಚು ರೂಪಿಸಲಾಗಿತ್ತು. ಆದರೆ, ಅವರಿಗೆ ಪೊಲೀಸ್ ಭದ್ರತೆ ಇದ್ದ ಕಾರಣಕ್ಕೆ ಸಂಚು ವಿಫಲವಾಗಿದೆ.
ಡಾ. ಅಯ್ಯಪ್ಪ ದೊರೆ ಹತ್ಯೆ ಬಗ್ಗೆ ಮಧುಕರ್ ಜಿ. ಅಂಗೂರ್ ಪ್ರತಿಕ್ರಿಯೆ ನೀಡಿದ್ದು, "ಮಂಗಳವಾರ ಅವರನ್ನು ಭೇಟಿಯಾಗಿದ್ದೆ. ಹತ್ಯೆ ವಿಚಾರ ಕೇಳಿ ಶಾಕ್ ಆಗಿದ್ದೇನೆ. ಉತ್ತಮ ವ್ಯಕ್ತಿಯಾಗಿದ್ದ ಅವರು ವಿಶ್ವವಿದ್ಯಾಲಯಕ್ಕಾಗಿ ಸಾಕಷ್ಟು ಶ್ರಮ ಹಾಕಿ ಕೆಲಸ ಮಾಡಿದ್ದರು. ಸುಧೀರ್ ಅಂಗೂರ್ ಈ ಹಂತಕ್ಕೆ ಇಳಿಯುತ್ತಾರೆ ಎಂದು ಕೊಂಡಿರಲಿಲ್ಲ" ಎಂದು ಹೇಳಿದ್ದಾರೆ.












Click it and Unblock the Notifications