Vande Bharat Express: ಬೆಳಗಾವಿ ಜನರಿಗೆ ಮತ್ತೊಂದು ಭರವಸೆ
ಬೆಳಗಾವಿ, ಜೂನ್ 19: ಬೆಳಗಾವಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೇಕು ಎಂಬ ಬೇಡಿಕೆ ಇದೆ. ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ನಡೆದರೂ ಸಹ ಬೆಂಗಳೂರು-ಬೆಳಗಾವಿ ನಡುವೆ ಇನ್ನೂ ರೈಲು ಸಂಚಾರ ಆರಂಭವಾಗಿಲ್ಲ. ಕುಂದಾ ನಗರಿಯ ಜನರ ಬೇಡಿಕೆ ಈಡೇರಿಲ್ಲ.
ರಾಜ್ಯಸಭಾ ಸದಸ್ಯ, ಬಿಜೆಪಿ ನಾಯಕ ಈರಣ್ಣ ಕಡಾಡಿ ಹುಬ್ಬಳ್ಳಿಯಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆ ಮಂಗಳವಾರ ಸಭೆಯನ್ನು ನಡೆಸಿದರು. ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ ಭಾಗದ ರೈಲು ಯೋಜನೆಗಳ ಕುರಿತು ಚರ್ಚೆ ನಡೆಯಿತು.

ಈ ಸಭೆಯಲ್ಲಿ ಈರಣ್ಣ ಕಡಾಡಿ, ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾದ ವಂದೇ ಭಾರತ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಇರುವ ತೊಡಕುಗಳ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದರು. ಆದಷ್ಟು ಬೇಗ ರೈಲು ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಉಳಿದಂತೆ ಸಭೆಯಲ್ಲಿ ಧಾರವಾಡ-ಕಿತ್ತೂರು-ಬೆಳಗಾವಿ ನೇರ ರೈಲು ಮಾರ್ಗ, ಪಂಢರಾಪುರ ಹಾಗೂ ರಾಜಸ್ಥಾನ ಕಡೆಗೆ ಸಾಗುವ ರೈಲುಗಳಿಗೆ ಖಾನಾಪುರ, ಘಟಪ್ರಭಾ, ರಾಯಭಾಗದಲ್ಲಿ ನಿಲುಗಡೆ ನೀಡುವುದು, ಮುಂಬೈ, ದೆಹಲಿ, ತಿರುಪತಿ, ಮಂಗಳೂರು, ಹೈದರಾಬಾದ್, ಬೀದರ್, ಸೊಲ್ಲಾಪುರ ಸಂಪರ್ಕಿಸುವ ಹೊಸ ರೈಲು ಓಡಿಸುವ ಕುರಿತು ಸಹ ಚರ್ಚೆ ನಡೆಯಿತು.
ವಂದೇ ಭಾರತ್ ರೈಲು?; ಬೆಳಗಾವಿಗೆ ವಂದೇ ಭಾರತ್ ರೈಲು ಸೇವೆ ಯಾವಾಗ? ಆರಂಭವಾಗಲಿದೆ ಎಂಬುದು ಜನರು ಪದೇ ಪದೇ ಕೇಳುವ ಪ್ರಶ್ನೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಹಲವು ಪೋಸ್ಟ್‌ಗಳಿವೆ. ಪ್ರಾಯೋಗಿಕ ಸಂಚಾರ ನಡೆದರೂ ಸಹ ರೈಲು ಸೇವೆ ಏಕೆ ಆರಂಭವಾಗಿಲ್ಲ? ಎಂಬುದು ಜನರ ಪ್ರಶ್ನೆ.
ಪ್ರಸ್ತುತ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ಸಂಚಾರ ನಡೆಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಂಬರ್ 20661/ 20662 ಬೆಳಗಾವಿ ತನಕ ವಿಸ್ತರಣೆ ಮಾಡಲು ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಆದರೆ ರೈಲು ಮಾತ್ರ ಇನ್ನೂ ಆಗಮಿಸಿಲ್ಲ.
ಲೋಕಸಭೆ ಚುನಾವಣೆ 2024ರ ಪ್ರಚಾರಕ್ಕಾಗಿ ಏಪ್ರಿಲ್ 28ರಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಆಗಮಿಸಿದ್ದರು. ಅವರನ್ನು ಜಿಲ್ಲೆಯ ಜನರು ಆತ್ಮೀಯವಾಗಿ ಸ್ವಾಗತ ಮಾಡಿದ್ದರು. ಬೆಳಗಾವಿಯಲ್ಲಿಯೇ ವಾಸ್ತವ್ಯ ಹೂಡಿದ್ದ ಅವರಿಗೆ ವಂದೇ ಭಾರತ್ ರೈಲು ಯಾವಾಗ? ಎಂದು ಪ್ರಶ್ನೆ ಮಾಡಿದ್ದರು.
ಲೋಕಸಭೆ ಚುನಾವಣೆಗೆ ಜಗದೀಶ್ ಶೆಟ್ಟರ್ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಿದಾಗಲೂ ಹುಬ್ಬಳ್ಳಿಯಿಂದ ಬರುವಾಗ ವಂದೇ ಭಾರತ್ ರೈಲು ತನ್ನಿ ಎಂದು ಜನರು ಸಾಮಾಜಿಕ ಜಾಲತಾಣದ ಮೂಲಕ ಬೇಡಿಕೆ ಇಟ್ಟಿದ್ದರು. ಈಗ ಚುನಾವಣೆ ಮುಗಿದು ಶೆಟ್ಟರ್ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಬೆಳಗಾವಿ ಭಾಗದ ಜನರ ಬೇಡಿಕೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರರ ಒತ್ತಾಯಕ್ಕೆ ಮಣಿದ ರೈಲ್ವೆ ಇಲಾಖೆ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿ ಆದೇಶ ಹೊರಡಿಸಿತ್ತು.
ವಂದೇ ಭಾರತ್ ರೈಲು ಬೆಳಗಾವಿಗೆ ವಿಸ್ತರಣೆ ಮಾಡಲು ಪೂರ್ವಭಾವಿಯಾಗಿ 2023ರ ನವೆಂಬರ್ 21ರಂದು ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವನ್ನು ನಡೆಸಲಾಗಿತ್ತು. ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದ್ದರೂ ರೈಲು ಇನ್ನೂ ಆರಂಭವಾಗಿಲ್ಲ.
ಪ್ರಾಯೋಗಿಕ ಸಂಚಾರದ ಸಮಯದಲ್ಲಿ ವಂದೇ ಭಾರತ್ ರೈಲು ನಿರ್ವಹಣೆ ಮಾಡುವ ಸೌಲಭ್ಯಗಳು ಬೆಳಗಾವಿ ರೈಲು ನಿಲ್ದಾಣದಲ್ಲಿ ಇಲ್ಲ ಎಂಬುದನ್ನು ಗಮನಿಸಲಾಗಿತ್ತು. 6 ತಿಂಗಳು ಕಳೆದಿದ್ದು, ಅನೇಕ ಕಾಮಗಾರಿಗಳು ಈಗ ಮುಕ್ತಾಯಗೊಂಡಿವೆ. ಆದರೆ ಚುನಾವಣಾ ನೀತಿ ಸಂಹಿತೆಯ ಕಾರಣಕ್ಕೆ ಬೆಳಗಾವಿಗೆ ವಂದೇ ಭಾರತ್ ರೈಲು ಸಂಪರ್ಕ ಭರವಸೆಯಾಗಿಯೇ ಉಳಿದಿತ್ತು. ಈಗ ಹೊಸ ಸರ್ಕಾರ, ಬೆಳಗಾವಿಯ ಹೊಸ ಸಂಸದರು ಕುಂದಾ ನಗರದಿಗೆ ವಂದೇ ಭಾರತ್ ತರಲಿದ್ದಾರೆಯೇ? ಕಾದು ನೋಡಬೇಕಿದೆ.












Click it and Unblock the Notifications