ಬೆಳಗಾವಿ : ಖಾನಾಪುರದಲ್ಲಿ ಮತ್ತೊಂದು ಹುಲಿ ಪ್ರತ್ಯಕ್ಷ
ಬೆಳಗಾವಿ, ಜ. 1 : ಬೆಳಗಾವಿಯಲ್ಲಿ ನರಭಕ್ಷಕ ಹುಲಿ ಗುಂಡಿಗೆ ಬಲಿಯಾಯಿತು ಎಂದು ನಿರಾಳರಾಗಿದ್ದ ಜನರು ಪುನಃ ಆತಂಕಗೊಂಡಿದ್ದಾರೆ. ಖಾನಾಪುರ ತಾಲೂಕಿನ ಜಾಂಬೋಟಿ ಅರಣ್ಯ ಪ್ರದೇಶಗಳಲ್ಲಿ ಮತ್ತೊಂದು ಹುಲಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ.
ಡಿ.24ರಂದು ಮುಡುಗೈ ಗ್ರಾಮದ ಅಂಜನಾ ಅವರನ್ನು ನರಭಕ್ಷಕ ಹುಲಿ ಹೊಲದಲ್ಲಿ ಭತ್ತದ ಕೆಲಸ ಮಾಡುತ್ತಿದ್ದಾಗ ದಾಳಿ ಮಾಡಿ ಕೊಂದು ಹಾಕಿತ್ತು. ಸದ್ಯ ಗುರುವಾರ ಅದೇ ಸ್ಥಳದಲ್ಲಿ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮಸ್ಥರ ಕಣ್ಣಿಗೆ ಹುಲಿ ಕಂಡಿದೆ. [ಬೆಳಗಾವಿಯ ನರಭಕ್ಷಕ ಹುಲಿ ಗುಂಡೇಟಿಗೆ ಬಲಿ]

ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಭತ್ತದ ಗದ್ದೆಯ ಕೆಲಸವನ್ನು ನಿಲ್ಲಿಸಿ ಜನರು ಮನೆಗಳಿಗೆ ವಾಪಸ್ ಹೋಗಿದ್ದಾರೆ. ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದು, ಹುಲಿಯನ್ನು ಸೆರೆ ಹಿಡಿಯಿರಿ ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸುತ್ತಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಹಿಳೆ ಕೊಂದು ಸೆರೆ ಸಿಕ್ಕ ಹುಲಿಯನ್ನು ಖಾನಾಪುರದ ಭೀಮಗಡದ ಕಾಡಿಗೆ ಬಿಡಲಾಗಿತ್ತು. ಗ್ರಾಮದ 2 ಹಸುಗಳನ್ನು ತಿಂದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಹುಲಿ, ಡಿ.24ರಂದು ಅಂಜನಾ (23) ಎಂಬ ಮಹಿಳೆಯನ್ನು ಕೊಂದು ಹಾಕಿತ್ತು. [ಚಿಕ್ಕಮಗಳೂರು ಹುಲಿಗೆ ಬೆಳಗಾವಿಯಲ್ಲೂ ಮಹಿಳೆ ಬಲಿ]
ಸತತ ಮೂರು ದಿನಗಳ ಕಾರ್ಯಾಚರಣೆ ಬಳಿಕ ಡಿ.28 ಖಾನಾಪುರ ತಾಲೂಕಿನ ಕೊಂಗಳಾ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹುಲಿಯನ್ನು ಗುಂಡಿಕ್ಕಿ ಕೊಂದು ಹಾಕಲಾಗಿತ್ತು. ಈಗ ಪುನಃ ಮತ್ತೊಂದು ಹುಲಿ ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕ ಮೂಡಿಸಿದೆ.












Click it and Unblock the Notifications