ಬೆಳಗಾವಿ : ಕುರಿ ಕಾಯ್ದ ಪೊಲೀಸರು
ಬೆಳಗಾವಿ, ನವೆಂಬರ್ 15 : ಸುವರ್ಣಸೌಧದ ಒಳಗೆ ಅಧಿವೇಶನ ನಡೆಯುತ್ತಿದ್ದರೆ ಹೊರಗೆ ಪೊಲೀಸರು ಲಾಠಿ ಬೀಸುತ್ತಾ 'ಟರ್ ಬ್ಯಾ' ಎನ್ನುತ್ತಾ ಕುರಿಗಳನ್ನು ಸುವರ್ಣಸೌಧದ ಅಂಗಳದಿಂದ ಆಚೆ ಅಟ್ಟುವುದರಲ್ಲಿ ನಿರತರಾಗಿದ್ದರು.
ಹೌದು ಇಂದು (ನವೆಂಬರ್ 15) ರ ಮಧ್ಯಾಹ್ನ ವಿಧಾನಸಭೆ ಕಲಾಪ ಪ್ರಾರಂಭವಾಗುವ ಹೊತ್ತಿಗೆ ಸರಿಯಾಗಿ ನೂರಾರು ಜನ ಕುರುಬ ಜನಾಂಗದ ಹೋರಾಟಗರರು ಬಾವುಟಗಳನ್ನು ಹಿಡಿದು ಸುವರ್ಣಸೌಧದ ಮುಂದೆ ಘೋಷಣೆಗಳನ್ನು ಕೂಗತೊಡಗಿದರು. ತಮ್ಮೊಂದಿಗೆ ತಂದಿದ್ದ ಕುರಿಗಳನ್ನು ಸೌಧದ ಒಳಕ್ಕೆ ನುಗ್ಗಿಸಲು ಪ್ರಯತ್ನಪಟ್ಟರು. ಇದರಿಂದ ಸದನದ ಹೊರಗೆ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು.

ಕುರುಬ ಜನಾಂಗವನ್ನು ಎಸ್.ಟಿ ಗೆ ಸೇರಿಬೇಕೆಂಬ ಒತ್ತಾಯದೊಂದಿಗೆ ಬಂದಿದ್ದ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆಯ ಹೋರಾಟಗಾರರು ಸುವರ್ಣಸೌಧದ ಒಳಕ್ಕೆ ಕುರಿಗಳನ್ನು ಹಾಯಿಸಲು ಪ್ರಯತ್ನಪಟ್ಟರು.
ಪ್ರತಿಭಟನಾಕಾರರನ್ನು ಚದುರಿಸಲು ವಿಫಲರಾದ ಪೊಲೀಸರು ಕೊನೆಗೆ ಲಘು ಲಾಠಿ ಪ್ರಹಾರ ಮಾಡಬೇಕಾಯಿತು. ನಂತರ ಹೋರಾಟ ಮಾಡುತ್ತಿದ್ದ ಕೆಲವು ಮುಖಂಡರನ್ನು ಪೊಲೀಸರು ಬಂಧಿಸಿದರು.
ಕೊನೆಗೆ ಪೊಲೀಸರೆ ತಮ್ಮ ಲಾಠಿ ಬೀಸುತ್ತಾ 'ಟರ್ ಬ್ಯಾ' ಎನ್ನುತ್ತಾ ಕುರಿಗಳನ್ನು ಸುವರ್ಣಸೌಧದ ಅಂಗಳದಿಂದ ಆಚೆಗೆ ತರುಬಿದರು.












Click it and Unblock the Notifications