ರಮೇಶ್ ಜಾರಕಿಹೊಳಿಗೆ ಕೋವಿಡ್; ಐಸಿಯುನಲ್ಲಿ ಚಿಕಿತ್ಸೆ
ಬೆಳಗಾವಿ, ಏಪ್ರಿಲ್ 5; ಮಾಜಿ ಸಚಿವ, ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ತಗುಲಿದೆ. ಅವರು ಆಸ್ಪತ್ರೆಗೆ ದಾಖಲಾಗಿರುವ ಕಾರಣ ಸಿಡಿ ಪ್ರಕರಣದ ವಿಚಾರಣೆಗೆ ಸೋಮವಾರ ಗೈರಾಗಿದ್ದಾರೆ.
ಸೋಮವಾರ ಗೋಕಾಕ ತಾಲೂಕು ಮುಖ್ಯ ವೈದ್ಯಾಧಿಕಾರಿ ರವೀಂದ್ರ ಅಂಟಿನ್ ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. "ರಮೇಶ್ ಜಾರಕಿಹೊಳಿ ಕಾರು ಚಾಲಕ, ಅಡುಗೆ ಸಿಬ್ಬಂದಿಗೂ ಸೋಂಕು ತಗುಲಿದ್ದು, ಐಸೋಲೇಷನ್‌ನಲ್ಲಿದ್ದಾರೆ" ಎಂದು ಹೇಳಿದರು.
"ಗುರುವಾರ ರಾತ್ರಿ ರಮೇಶ್ ಜಾರಕಿಹೊಳಿ ಬೇರೆ ರಾಜ್ಯದ ಟ್ರಾವಲ್ ಹಿಸ್ಟರಿ ಇಂದ ಬಂದಿದ್ದರು. ಭಾನುವಾರ ರಾತ್ರಿ ಅವರಿಗೆ ಕೋವಿಡ್ ಪರೀಕ್ಷೆ ಮಾಡಿದಾಗ ಸೋಂಕು ತಗುಲಿರುವುದು ಖಚಿತವಾಗಿದೆ" ಎಂದು ರವೀಂದ್ರ ಅಂಟಿನ್ ಹೇಳಿದರು.

"ಶುಗರ್ ಮತ್ತು ಬಿಪಿ ಹೆಚ್ಚಾಗಿದ್ದರಿಂದ ಅವರಿಗೆ ಐಸಿಯೂನಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಕೋವಿಡ್ ವಾರ್ಡ್ ಐಸಿಯುನಲ್ಲಿ ಅವರು ಇನ್ನೂ 3-4 ದಿನಗಳ ಕಾಲ ಇರಬೇಕಾಗುತ್ತದೆ" ಎಂದು ರವೀಂದ್ರ ಅಂಟಿನ್ ತಿಳಿಸಿದ್ದಾರೆ.

ವಿಚಾರಣೆಗೆ ಬರಬೇಕಿತ್ತು; ಸಿಡಿ ಪ್ರಕರಣದ ತನಿಖೆಗೆ ಶುಕ್ರವಾರ ರಮೇಶ್ ಜಾರಕಿಹೊಳಿ ಹಾಜರಾಗಬೇಕಿತ್ತು. ಆದರೆ, ಜ್ವರದ ಕಾರಣ ಅವರು ಹಾಜರಾಗಿರಲಿಲ್ಲ. ಸೋಮವಾರ ಎಸ್‌ಐಟಿ ಮುಂದೆ ಹಾಜರಾಗಬೇಕಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಸುಮಾರು 1 ವಾರಗಳ ಕಾಲ ಅವರು ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ.











Click it and Unblock the Notifications