ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಸಕ್ರಿಯ ರಾಜಕೀಯಕ್ಕೆ?
ಬೆಳಗಾವಿ, ಏಪ್ರಿಲ್ 21: ಬೆಳಗಾವಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಚುನಾವಣೆ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತದೆ. ಈ ಚುನಾವಣೆಯನ್ನು ಬೆಳಗಾವಿಯ ಪ್ರಭಾವಿ ರಾಜಕೀಯ ಕುಟುಂಬಗಳು ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತವೆ. ಈ ಬಾರಿಯ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಕುರಿತು ಚರ್ಚೆಗಳು ಆರಂಭವಾಗಿದೆ. ಅದಕ್ಕೆ ಕಾರಣ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ.
ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಬದಲಾವಣೆ ವಿಚಾರದಲ್ಲಿ ಸತೀಶ್ ಜಾರಕಿಹೊಳಿ ಈಗಾಗಲೇ ಸುದ್ದಿಯಲ್ಲಿದ್ದಾರೆ. ಆದರೆ ಈಗ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಮೂಲಕ ಪುತ್ರನನ್ನು ಸಕ್ರಿಯ ರಾಜಕೀಯಕ್ಕೆ ತರಲು ಸತೀಶ್ ಜಾರಕಿಹೊಳಿ ಮುಂದಾಗಿದ್ದಾರೆ ಎಂಬುದು ಚರ್ಚೆಯ ವಿಚಾರವಾಗಿದೆ.

ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಈಗಾಗಲೇ 2024ರ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಜಯಗಳಿಸುವ ಮೂಲಕ ರಾಜಕೀಯಕ್ಕೆ ಬಂದಿದ್ದಾರೆ. ಆದರೆ ಪುತ್ರ ರಾಹುಲ್ ಜಾರಕಿಹೊಳಿ ಸಕ್ರಿಯ ರಾಜಕೀಯದಲ್ಲಿ ಇಲ್ಲ. ತಂದೆಯ ಜೊತೆಗೆ ಆಗಾಗ ಕ್ಷೇತ್ರದ ಕಾರ್ಯಕ್ರಮ, ಚುನಾವಣಾ ಪ್ರಚಾರದಲ್ಲಿ ಅವರು ತೊಡಗಿಕೊಳ್ಳುತ್ತಾರೆ.
ಕೆಲವು ದಿನಗಳ ಹಿಂದೆ ನಡೆದ ರಾಜ್ಯ ಯುವ ಕಾಂಗ್ರೆಸ್ ಘಟಕದ ಚುನಾವಣೆಯಲ್ಲಿ ರಾಹುಲ್ ಜಾರಕಿಹೊಳಿ ಪ್ರಧಾನ ಕಾರ್ಯದರ್ಶಿಯಾಗಿ ಗೆದ್ದು ಬೀಗಿದ್ದಾರೆ. ಈ ಮೂಲಕ ಪಕ್ಷದಲ್ಲಿ ಅಧಿಕಾರವನ್ನು ಪಡೆದುಕೊಂಡಿದ್ದಾರೆ. ಈಗ ಅವರನ್ನು ಸಕ್ರಿಯ ರಾಜಕೀಯಕ್ಕೆ ತರಲು ಸತೀಶ್ ಜಾರಕಿಹೊಳಿ ಬಯಸಿದ್ದಾರೆ ಎಂಬ ಸುದ್ದಿಗಳು ಹಬ್ಬಿದೆ.
ಸತೀಶ್ ಜಾರಕಿಹೊಳಿ ಹೇಳಿದ್ದೇನು?; ಸಚಿವ ಸತೀಶ್ ಜಾರಕಿಹೊಳಿ ಪುತ್ರನ ರಾಜಕೀಯ ಪ್ರವೇಶದ ಕುರಿತು ಮಾತನಾಡಿದ್ದಾರೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಮೂಲಕ ರಾಹುಲ್ ರಾಜಕೀಯಕ್ಕೆ ಬರುವ ಕುರಿತು ಮಾತನಾಡಿದ ಅವರು, 'ಈಗಾಗಲೇ ರಾಜಕೀಯದಲ್ಲಿ ಇದ್ದಾನಲ್ಲ" ಎಂದು ಹೇಳಿದರು.
ಸತೀಶ್ ಜಾರಕಿಹೊಳಿ, "ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಾಹುಲ್ ಕಣಕ್ಕಿಳಿಸಬೇಕು ಎಂದು ಚರ್ಚೆಗಳು ನಡೆದಿವೆ. ಈ ಕುರಿತು ಹಲವು ಮುಖಂಡರ ಜೊತೆ ಚರ್ಚೆ ನಡೆಸಬೇಕಿದೆ. ಬಳಿಕ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ" ಎಂದರು.
"ಈ ವಿಚಾರದಲ್ಲಿ ನಾನು ಒಬ್ಬನೇ ತೀರ್ಮಾನ ಮಾಡಲು ಬರುವುದಿಲ್ಲ. ಹಲವು ನಾಯಕರ ಜೊತೆ ಚರ್ಚಿಸಿ ತೀರ್ಮಾನಿಸಲಾಗುತ್ತದೆ" ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕರು. ಇವರಿಬ್ಬರು ಸೇರಿ ತಂತ್ರ ರೂಪಿಸಿ ರಮೇಶ್ ಜಾರಕಿಹೊಳಿ ಬಣಕ್ಕೆ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹಿನ್ನಡೆಯಾಗುವಂತೆ ತಂತ್ರ ರೂಪಿಸಲಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ಅತಿ ದೊಡ್ಡದು ಎಂಬ ಹೆಗ್ಗಳಿಕೆ ಹೊಂದಿದೆ. ಈ ಬ್ಯಾಂಕ್ ಅಧ್ಯಕ್ಷರಾದವರು ಸಚಿವ ಸಮನಾದ ಸ್ಥಾನ ಹೊಂದಿದ್ದಾರೆ ಎಂದು ಬಿಂಬಿಸಲಾಗುತ್ತದೆ. 5791 ಕೋಟಿ ರೂ. ಠೇವಣಿ ಹೊಂದಿರುವ ಬ್ಯಾಂಕ್ ಸದ್ಯದ ಮಾಹಿತಿಯಂತೆ 1155 ಪಿಕೆಪಿಎಸ್‌ಗಳನ್ನು ಹೊಂದಿದೆ. ಆದ್ದರಿಂದ ಈ ಬ್ಯಾಂಕ್ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
2024ರ ಅಂತ್ಯದಲ್ಲಿ ರಮೇಶ ಕತ್ತಿ ರಾಜೀನಾಮೆಯಿಂದ ತೆರವಾದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಬಿಡಿಸಿಸಿ) ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಹಲವು ವರ್ಷಗಳಿಂದ ಬ್ಯಾಂಕ್ ಅಧ್ಯಕ್ಷರಾಗಿದ್ದ ರಮೇಶ್ ಕತ್ತಿ ದಿಢೀರ್ ಆಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ನವೆಂಬರ್ 13ರಂದು ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ರಾಯ್‌ಬಾಗ್‌ನ ಕಾಂಗ್ರೆಸ್ ನಾಯಕ ಅಪ್ಪಾ ಸಾಹೇಬ್ ಕುಲಗೋಡೆ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಕುಲಗೋಡೆ ಅವರು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರು.
ಜಿಲ್ಲೆಯ ರಾಜಕೀಯವನ್ನು ಹತ್ತಿರದಿಂದ ನೋಡಿದವರು ಸಚಿವ ಸತೀಶ್ ಜಾರಕಿಹೊಳಿ ಡಿಸಿಸಿ ಬ್ಯಾಂಕ್ ರಾಜಕೀಯಕ್ಕೆ ಎಂದೂ ಕೈ ಹಾಕಿಲ್ಲ ಎಂದೇ ಹೇಳುತ್ತಾರೆ. ಆದರೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಅವರು 2024ರಲ್ಲಿ ದಿಢೀರ್ ಎಂದು ಡಿಸಿಸಿ ಬ್ಯಾಂಕ್ ಚುನಾವಣೆ ರಾಜಕೀಯಕ್ಕೆ ಮಧ್ಯಪ್ರವೇಶ ಮಾಡಿದರು.
ಅಣ್ಣಾಸಾಹೇಬ ಜೊಲ್ಲೆ, ಮಹಾಂತೇಶ ದೊಡ್ಡಗೌಡರ, ಸುಭಾಷ ಢವಳೇಶ್ವರ, ಅರವಿಂದ ಪಾಟೀಲ ಈ ನಾಲ್ವರಲ್ಲಿ ಒಬ್ಬರು ಅಧ್ಯಕ್ಷರಾಗುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಜಾರಕಿಹೊಳಿ ರಣತಂತ್ರದಿಂದ ಅಪ್ಪಾಸಾಹೇಬ ಕುಲಗೋಡೆ ಅವರಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿತ್ತು.












Click it and Unblock the Notifications