ಅನರ್ಹ ಶಾಸಕ ಮಹೇಶ್ ಕುಮಟಳ್ಳಿಗೆ ಕ್ಷೇತ್ರದ ಜನರಿಂದ ಮಂಗಳಾರತಿ
ಬೆಳಗಾವಿ, ಆಗಸ್ಟ್ 11: ಅಥಣಿ ಕ್ಷೇತ್ರದ ಶಾಸಕರಾಗಿದ್ದು, ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪೀಕರ್ ಅವರಿಂದ ಅನರ್ಹತೆ ಶಿಕ್ಷೆಗೆ ಒಳಗಾಗಿರುವ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಕ್ಷೇತ್ರದ ಜನ ಇಂದು ಸರಿಯಾಗಿ ಮಂಗಳಾರತಿ ಮಾಡಿದ್ದಾರೆ.
ಇಂದು ಮಹೇಶ್ ಕುಮಟಳ್ಳಿ ಅವರು ಅಥಣಿ ಕ್ಷೇತ್ರದ ಸತ್ತಿ ಗ್ರಾಮದಲ್ಲಿ ಆರಂಭಿಸಲಾಗಿರುವ ಗಂಜಿ ಕೇಂದ್ರಕ್ಕೆ ಭೇಟಿ ನೀಡಲೆಂದು ಆಗಮಿಸಿದ್ದರು. ಆಗ ಅವರನ್ನು ಸುತ್ತವರೆದ ಜನ ಮಹೇಶ್ ಕುಮಟಳ್ಳಿ ಅವರನ್ನು ಬಲವಂತವಾಗಿ ಕಾರಿನಿಂದ ಇಳಿಸಿದರು.
ಮಹೇಶ್ ಕುಮಟಳ್ಳಿ ಅವರನ್ನು ಬಲವಂತವಾಗಿ ಕಾರಿನಿಂದ ಕೆಳಗೆ ಇಳಿಸಿದ ಜನರು, ಅವರನ್ನು ರಸ್ತೆಯ ಮೇಲೆ ಕೂರುವಂತೆ ಸೂಚಿಸಿ ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡರು.

ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತೀರಿ ಎಂದು ನಿಮ್ಮನ್ನು ಆರಿಸಿ ಕಳಿಸಿದ್ದೆವು ಆದರೆ ನೀವು ನಿಮ್ಮ ಸುಖಕಕ್ಕಾಗಿ ರಾಜೀನಾಮೆ ನೀಡಿದ್ದೀರಿ. ನೀವು ಈಗ ಸುಖವಾಗಿ ಇದ್ದೀರಿ ಆದರೆ ನಾವು ಸುಖವಾಗಿ ಇಲ್ಲ ಎಂದು ಜನರು ಮಹೇಶ್ ಕುಮಟಳ್ಳಿ ಅವರನ್ನು ತರಾಟೆಗೆ ತೆಗೆದುಕೊಂಡರು.
ರಾಜೀನಾಮೆ ನೀಡುವಾಗ ನಮ್ಮನ್ನು ಏನಾದರೂ ಕೇಳಿದ್ದಿರೇ? ಆಗ ಜನರ ಬಗ್ಗೆ ಕ್ಷೇತ್ರದ ಬಗ್ಗೆ ಇಲ್ಲದ ಕಾಳಜಿ ಈಗ ರಾಜೀನಾಮೆ ನೀಡಿದ ಮೇಲೆ ಬಂದಿದೆಯೇ ಎಂದು ಸಾರ್ವಜನಿಕರು ಕುಮಟಳ್ಳಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications