NWKRTC: ಬೆಳಗಾವಿ-ಚೆನ್ನೈ ಐರಾವತ ಕ್ಲಬ್ ಕ್ಲಾಸ್ ಬಸ್, ದರ ಮತ್ತು ವೇಳಾಪಟ್ಟಿ
ಬೆಳಗಾವಿ, ಡಿಸೆಂಬರ್ 07: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ-ಚೆನ್ನೈ ನಡುವೆ ಸಂಪರ್ಕ ಕಲ್ಪಿಸಲು ಐಷಾರಾಮಿ ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್ ವಯಾ ಹುಬ್ಬಳ್ಳಿ, ಧಾರವಾಡ ಮಾರ್ಗದ ಮೂಲಕ ಸಾಗಲಿದ್ದು, ಅಂತರರಾಜ್ಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಬಸ್‌ನ ವೇಳಾಪಟ್ಟಿ, ಪ್ರಯಾಣದರದ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕುಂದಾನಗರಿ ಬೆಳಗಾವಿ ಮತ್ತು ತಮಿಳುನಾಡು ರಾಜಧಾನಿ ಚೆನ್ನೈ ನಡುವೆ ಐರಾವತ ಕ್ಲಬ್ ಕ್ಲಾಸ್ ಬಸ್ ಅನ್ನು ಪ್ರತಿದಿನ ಓಡಿಸಲಿದೆ. ಈ ಬಸ್‌ಗೆ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಲು ಸಹ ವ್ಯವಸ್ಥೆ ಮಾಡಿದ್ದು, ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಲು ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಬಸ್ ಪ್ರಯಾಣ ದರ, ವೇಳಾಪಟ್ಟಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ-ಚೆನ್ನೈ ನಡುವಿನ ಪ್ರತಿದಿನದ ಐರಾವತ ಕ್ಲಬ್ ಕ್ಲಾಸ್ ಬಸ್‌ಗೆ 1,737 ರೂ. ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ. ಬೆಳಗಾವಿಯಿಂದ ಹೊರಡುವ ಬಸ್ ಧಾರವಾಡ, ಹುಬ್ಬಳ್ಳಿ ಮೂಲಕ ಸಾಗಲಿದೆ.
ಐರಾವತ ಕ್ಲಬ್ ಕ್ಲಾಸ್ ಬಸ್ ಬೆಳಗಾವಿ ಬಿಡುವ ವೇಳೆ 12:05, ಚೆನ್ನೈ ಬಿಡುವ ವೇಳೆ 13:15. ಚೆನ್ನೈ ತಲುಪುವ ವೇಳೆ 05:00 ಮತ್ತು ಬೆಳಗಾವಿ ತಲುಪುವ ವೇಳೆ 07:50 ಎಂದು ಪ್ರಕಟಣೆ ಮಾಹಿತಿ ನೀಡಿದೆ. ಪ್ರಯಾಣಿಕರು ಆನ್‌ಲೈನ್ ಟಿಕೆಟ್ ಬುಕ್ ಮಾಡಲು http://ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.
ರಾಣೆಬೆನ್ನೂರು-ಸೊಲ್ಲಾಪುರ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮತ್ತು ಮಹಾರಾಷ್ಟ್ರದ ಸೊಲ್ಲಾಪುರ ನಡುವೆ ರಾಜಹಂಸ ಬಸ್ ಸೇವೆಯನ್ನು ಆರಂಭಿಸಿದೆ. ಈ ಮಾರ್ಗದ ಪ್ರಯಾಣ ದರ 600 ರೂ. ಎಂದು ನಿಗದಿ ಮಾಡಲಾಗಿದೆ.
ಬಸ್ ರಾಣೆಬೆನ್ನೂರಿನಿಂದ ಬಿಡುವ ವೇಳೆ 17:45, ತಲುಪುವ ವೇಳೆ 06:15. ಸೊಲ್ಲಾಪುರ ತಲುಪುವ ವೇಳೆ 03:45 ಮತ್ತು ಬಿಡುವ ವೇಳೆ 20:00 ಆಗಿದೆ ಎಂದು ವೇಳಾಪಟ್ಟಿಯಲ್ಲಿ ಮಾಹಿತಿ ನೀಡಲಾಗಿದೆ. ಈ ಬಸ್ ಹಾವೇರಿ, ಶಿಗ್ಗಾವಿ, ಹುಬ್ಬಳ್ಳಿ, ನರಗುಂದ, ಗದ್ದನಕೇರಿ ಕ್ರಾಸ್, ವಿಜಯಪುರ ಮೂಲಕ ಸಂಚಾರವನ್ನು ನಡೆಸಲಿದೆ.
ಬೆಂಗಳೂರು-ಮುರುಡೇಶ್ವರ ಬಸ್: ಹುಬ್ಬಳ್ಳಿಯಲ್ಲಿ ಪ್ರಧಾನ ಕಛೇರಿ ಹೊಂದಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕರ್ನಾಟಕದ ವಿವಿಧ ನಗರಗಳಿಗೆ ಮತ್ತು ಅಂತರರಾಜ್ಯ ಬಸ್ ಸೇವೆಯನ್ನು ನೀಡುತ್ತಿದೆ. ಬೆಂಗಳೂರು ಮತ್ತು ಮುರುಡೇಶ್ವರ ನಡುವೆ ಸಹ ನಾನ್ ಎಸಿ ಸ್ಲೀಪರ್ ಪಲ್ಲಕ್ಕಿ ಬಸ್ ಓಡಿಸುತ್ತಿದೆ. ಬಸ್‌ನ ವೇಳಾಪಟ್ಟಿ ಮಾಹಿತಿ ಹೀಗಿದೆ.
ಮುರುಡೇಶ್ವರ-ಬೆಂಗಳೂರು ಮಾರ್ಗದ ಬಸ್ ಭಟ್ಕಳ, ಬೈಂದೂರು, ಕೊಲ್ಲೂರು, ನಗರ, ಹೊಸನಗರ ಮೂಲಕ ಸಂಚಾರವನ್ನು ನಡೆಸುತ್ತದೆ. ಬಸ್ ಮುರುಡೇಶ್ವರ ಬಿಡುವ ವೇಳೆ 19:15, ತಲುಪುವ ವೇಳೆ 07:00, ಬೆಂಗಳೂರು ತಲುಪುವ ವೇಳೆ 06:30, ಬಿಡುವ ವೇಳೆ 19:15 ಆಗಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಉತ್ತರ ಕರ್ನಾಟಕ ಭಾಗದ ಜನರಿಗೆ ಉತ್ತಮ, ಮಿತವ್ಯಯದ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. 01-11-1997ರ ಕರ್ನಾಟಕ ರಾಜ್ಯೋತ್ಸವದಂದು ಮಾತೃ ಸಂಸ್ಥೆಯಾದ ಕರಾರಸಾಸಂಸ್ಥೆಯಿಂದ ವಿಭಜನೆಗೊಂಡು ರಸ್ತೆ ಸಾರಿಗೆ ಸಂಸ್ಥೆ ಕಾಯ್ದೆ 1950 ರಡಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸ್ಥಾಪನೆಗೊಂಡಿತು.
ಸಂಸ್ಥೆಯ ವ್ಯಾಪ್ತಿಗೆ ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಬಾಗಲಕೋಟೆ, ಗದಗ ಮತ್ತು ಹಾವೇರಿ ಜಿಲ್ಲೆಗಳು ಒಳಪಡುತ್ತದೆ. ಕೇಂದ್ರ ಕಛೇರಿ ಹುಬ್ಬಳ್ಳಿಯಲ್ಲಿದ್ದು, ಸಂಸ್ಥೆಯ ಆಡಳಿತ ವ್ಯಾಪ್ತಿಯಲ್ಲಿ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಶಿರಸಿ, ಬಾಗಲಕೋಟೆ, ಗದಗ, ಚಿಕ್ಕೋಡಿ, ಹಾವೇರಿ, ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗ ಹೀಗೆ ಒಟ್ಟು 9 ವಿಭಾಗೀಯ ಕಛೇರಿ, 55 ಘಟಕ, ಹುಬ್ಬಳ್ಳಿಯ ಒಂದು ಪ್ರಾದೇಶಿಕ ಕಾರ್ಯಾಗಾರ ಮತ್ತು ಒಂದು ಪ್ರಾದೇಶಿಕ ತರಬೇತಿ ಕೇಂದ್ರವಿದೆ.












Click it and Unblock the Notifications