ಮನೆಮನೆಗೆ ಕಾರ್ಡ್ ಕೊಟ್ಟಂತೆ, ಎಲ್ಲರಿಗೂ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ; ಸಚಿವ ಸತೀಶ್ ಜಾರಕಿಹೊಳಿ
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ರಚಿಸಿದೆ. ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಸೇರಿದಂತೆ 32 ಶಾಸಕರು ಸಚಿವರಾಗಿದ್ದಾರೆ.
ಇನ್ನು ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಪ್ರಚಾರದ ವೇಳೆ ರಾಜ್ಯದ ಜನರಿಗೆ 5 ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಇದರಿಂದಾಗಿ ಜನ ಉಚಿತ ಗ್ಯಾರಂಟಿ ಯೋಜನೆಗಳನ್ನು ನಂಬಿ ಕಾಂಗ್ರೆಸ್‌ಗೆ ಮತ ನೀಡಿದರು. ಇದೀಗ ಸರ್ಕಾರ ರಚನೆಯಾಗಿ 15 ದಿನ ಕಳೆದರೂ ಇನ್ನೂ ಜಾರಿಯಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇದೇ ವೇಳೆ ನೂತನ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಚುನಾವಣೆಯಲ್ಲಿ ಮನೆಮನೆಗೆ ಕಾರ್ಡ್ ಎಸೆದಂತೆ ಗ್ಯಾರಂಟಿ ಯೋಜನೆಗಳನ್ನು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬೈಲೂರು ಗ್ರಾಮದಲ್ಲಿ ಭಾನುವಾರ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, "ನಿರ್ಗತಿಕರು, ಬಡವರು ಯಾರಿದ್ದಾರೆ ಅಂತವರನ್ನು ಗುರುತಿಸಿ ಗ್ಯಾರಂಟಿ ಯೋಜನೆ ತಲುಪಿಸುತ್ತೇವೆ," ಎಂದು ತಿಳಿಸಿದ್ದಾರೆ.
"ರಾಜ್ಯದ ಜನರು ಕಾಂಗ್ರೆಸ್ ಸರ್ಕಾರದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಚುನಾವಣೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ನಾವು ಗ್ಯಾರಂಟಿ ಯೋಜನೆ ನೀಡಲು ಸಿದ್ಧರಿದ್ದೇವೆ. ಆದರೆ ವಿಪಕ್ಷಗಳ ಜನರಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಗ್ಯಾರಂಟಿ ಯೋಜನೆ ಈಡೇರಿಸಲು ಸಮಯ ಬೇಕು," ಎಂದರು.

ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆ ಭರವಸೆ ನೀಡಿದ್ದು ನಾವು, ವಿಪಕ್ಷಗಳಲ್ಲ. ಯೋಜನೆ ಜಾರಿಗಾಗಿ ಸಿದ್ಧತೆ ನಡೆದಿದೆ, ಶೀಘ್ರದಲ್ಲೇ ಜಾರಿಗೊಳಿಸುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
"ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆಯಲು ಬಂದಿರುವೆ. ಸ್ವಾಮೀಜಿ ಮತ್ತು ನಮ್ಮ ಹೋರಾಟ ಒಂದೇ ಆಗಿದೆ. ನಾವು ಜೊತೆಗೂಡಿ ಮೌಢ್ಯದ ವಿರುದ್ಧ ಹೋರಾಟ ಮಾಡಿದ್ದೇವೆ. ನಿಜಗುಣಾನಂದ ಸ್ವಾಮೀಜಿಗೆ ಶಕ್ತಿ ತುಂಬಲು ನಾನು ಇಲ್ಲಿಗೆ ಬಂದಿದ್ದೇನೆ," ಎಂದು ನೂತನ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
"ಬುದ್ಧ, ಬಸವೇಶ್ವರ, ಅಂಬೇಡ್ಕರ್ ವಿಚಾರ ಎಲ್ಲೆಡೆ ತಲುಪಿಸಬೇಕು. ಐದು ವರ್ಷಗಳ ಕಾಲ ನಮ್ಮ ಸರ್ಕಾರ ಆಡಳಿತ ನಡೆಸಲಿದೆ. ಮೌಢ್ಯದ ವಿರುದ್ಧ ಹೋರಾಟ ಮುಂದುವರೆಸುತ್ತೇವೆ. ಹಿಂದಿನಿಂದಲೂ ನಾನು ಮಾನವ ಬಂಧುತ್ವ ವೇದಿಕೆ ಮೂಲಕ ಈ ಕಾರ್ಯ ಮಾಡಿದ್ದೇನೆ".

"ನಿಜಗುಣಾನಂದ ಸ್ವಾಮೀಜಿ ಕೂಡ ಹೋರಾಟ ಮಾಡಿದ್ದಾರೆ. ನಾವೂ ಅವರ ಜೊತೆ ಕೈ ಜೋಡಿಸಿದ್ದೇವೆ. ನಮ್ಮ ಸರ್ಕಾರ ಬಸವೇಶ್ವರ ಅವರ ವಿಚಾರಧಾರೆಯಲ್ಲಿ ಮುನ್ನಡೆಯುತ್ತದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ ಹಾಕಿದ್ದರು," ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
"ಬಸವಣ್ಣನನ್ನು ವಿಶ್ವಗುರು ಎನ್ನುತ್ತಾರೆ. ಆದರೆ ಅವರನ್ನು ವಿಶ್ವಕ್ಕೆ ಪರಿಚಯಿಸುವ ಕಾರ್ಯವಾಗುತ್ತಿಲ್ಲ. ಬಸವೇಶ್ವರರನ್ನು ಅರಿತರೆ ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ. ನಿಜಗುಣಾನಂದ ಸ್ವಾಮೀಜಿಗಳ ವೈಚಾರಿಕ ಹೋರಾಟ ಇನ್ನಷ್ಟು ಹೆಚ್ಚಾಗಲಿ, ನಾವು ಅವರಿಗೆ ಸಹಕಾರ ನೀಡುತ್ತೇವೆ," ಎಂದು ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದರು.












Click it and Unblock the Notifications