ಆರೋಗ್ಯವಂತ ಭಾರತ ನಿರ್ಮಾಣಕ್ಕೆ ಕರೆ ನೀಡಿದ ಮೋದಿ
ಬೆಳಗಾವಿ, ಡಿ. 20 : "2022ರ ವೇಳೆಗೆ ಸಂಪೂರ್ಣ ಆರೋಗ್ಯವಂತ ಭಾರತ ನಿರ್ಮಾಣಕ್ಕಾಗಿ ನಾವೆಲ್ಲರೂ ಸಂಕಲ್ಪ ಮಾಡಬೇಕು. ಆರೋಗ್ಯವಂತ ಭಾರತ ನಿರ್ಮಾಣ ಅಭಿಯಾನ ಎಲ್ಲೆಡೆ ನಡೆಯಬೇಕು" ಎಂದು ಗುಜರಾತ್ ಮುಖ್ಯಮಂತ್ರಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಗುರುವಾರ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಭಾಗವಹಿಸಿದ್ದರು. ತಮ್ಮ ಅರ್ಧತಾಸಿನ ಭಾಷಣದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಬಗ್ಗೆ ನರೇಂದ್ರ ಮೋದಿ ಮಾತನಾಡಿದರು.

2022ರ ವೇಳೆಗೆ ದೇಶಕ್ಕೆ ಸ್ವಾತಂತ್ರ ದೊರೆತು 75 ವರ್ಷ ತುಂಬಲಿದೆ ಆ ವೇಳೆಗೆ ಸಂಪೂರ್ಣ ಆರೋಗ್ಯವಂತ ಭಾರತ ನಿರ್ಮಾಣಕ್ಕಾಗಿ ನಾವೆಲ್ಲರೂ ಸಂಕಲ್ಪ ಮಾಡಬೇಕು ಎಂದು ಮೋದಿ ಕರೆ ನೀಡಿದರು. ವೈದ್ಯಕೀಯ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದ ಮೋದಿ, ಸಂಶೋಧನಾ ಕ್ಷೇತ್ರದಲ್ಲಿ ಹಿಂದೆ ಬಿದ್ದಿದ್ದೇವೆ ಎಂದು ಅಭಿಪ್ರಾಯಪಟ್ಟರು.
ದೇಶಕ್ಕೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಇಂದಿಗೂ ನಾವು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮಲ್ಲಿ ಪ್ರತಿಭಾವಂತ ಯುವಕರಿದ್ದು, ಇಂತಹ ಉಪಕರಣ ಉತ್ಪಾದಿಸುವ ಸಂಶೋಧನೆಗಳತ್ತ ಯುವಕರು ಗಮನಹರಿಸಬೇಕು ಎಂದು ಮೋದಿ ಸ್ಫೂರ್ತಿ ತುಂಬಿದರು. ದೇಶದ ಗ್ರಾಮೀಣ ಭಾಗದ ಜನರು ಜನರು ಉತ್ತಮ ವೈದ್ಯಕೀಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಶಿಕ್ಷಣ ಕ್ಷೇತ್ರದತ್ತ ಗಮನ : ತಮ್ಮ ಭಾಷಣದಲ್ಲಿ ಶಿಕ್ಷಣ ಕ್ಷೇತ್ರದ ಬಗ್ಗೆಯೂ ಗಮನಹರಿಸಿದ ಮೋದಿ, ಭಾರತದ ನೆರೆಯ ದೇಶವಾದ ಚೀನಾದಲ್ಲಿ ಇಂಗ್ಲಿಷ್ ವ್ಯಾಪಕವಾಗಿರಲಿಲ್ಲ. ಜಾಗತೀಕರಣದ ನಂತರ ತನ್ನ ಪರಂಪರೆಯ ಜೊತೆಗೆ ಪ್ರಾಥಮಿಕ ಶಾಲಾ ಮಟ್ಟದಿಂದಲೇ ಇಂಗ್ಲಿಷ್‌ನಲ್ಲಿ ಶಿಕ್ಷಣ ನೀಡಲು ಚೀನಾ ಆರಂಭಿಸಿತು.
ಜಗತ್ತಿನ ಬದಲಾಗುತ್ತಿರುವ ವಾತಾವರಣಕ್ಕೆ ಚೀನಾ ಹೊಂದಿಕೊಂಡಿತು, ಇದರಿಂದ ಚೀನಾದ 10 ವಿಶ್ವವಿದ್ಯಾಲಯಗಳು ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯಗಳಾಗಿ ರೂಪಗೊಂಡವು. ನಮ್ಮ ಭಾರತ ದೇಶಕ್ಕೆ ಇದನ್ನು ಮೀರಿ ನಿಲ್ಲುವ ಸಾಮರ್ಥ್ಯವಿದೆ. ಅದನ್ನು ನಾವು ಸಾಧಿಸಿ ತೋರಿಸಬೇಕು ಎಂದು ಮೋದಿ ಹೇಳಿದರು.
ವಿಮೆ ಪ್ರಶ್ನಿಸಿದ ಮೋದಿ : ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ವಿಮಾ ಕಂಪನಿಗಳ ಕಾರ್ಯಗಳನ್ನು ಪ್ರಶ್ನಿಸಿದರು. ವಿಮೆ ಮಾಡಿಸಿದ ವಾಹನ ಅಪಘಾತಕ್ಕೀಡಾದರೆ ಅದರಲ್ಲಿದ್ದ ಪ್ರಯಾಣಿಕರಿಗೆ ವಿಮಾ ಮೊತ್ತ ಪಾವತಿಯಾಗುತ್ತದೆ. ಆದರೆ, ಆಸ್ಪತ್ರೆಗಳಿಗೆ ದಾಖಲಾದ ರೋಗಿಗಳಿಗೆ ಮಾತ್ರ ಏಕೆ? ಯಾವುದೇ ವಿಮಾ ಸೌಲಭ್ಯ ನೀಡುವುದಿಲ್ಲ ಎಂದು ಮೋದಿ ಪ್ರಶ್ನಿಸಿದರು.












Click it and Unblock the Notifications