ರಾಜ್ಯೋತ್ಸವದಂದು ಮತ್ತೆ ಕ್ಯಾತೆ ತೆಗೆದ ಎಂಇಎಸ್

ಕನ್ನಡ ಮಣ್ಣಿನ ಗಾಳಿ, ನೀರನ್ನು ಸೇವಿಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯವರು 58ನೇ ಕನ್ನಡ ರಾಜ್ಯೋತ್ಸವ ದಿನದಂದು ಮತ್ತೆ ಬೆಳಗಾವಿ ಬಗ್ಗೆ ಕ್ಯಾತೆ ತೆಗೆದಿದ್ದಾರೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿ ಕರ್ನಾಟಕದ ವಿರುದ್ಧ ಎಂಇಎಸ್ ತೊಡೆ ತಟ್ಟಿದೆ.
ಎಂಇಎಸ್ ನಾಯಕ ಸಂಭಾಜಿ ಪಾಟೀಲ ನಾಯಕತ್ವದಲ್ಲಿ ಹಲವಾರು ಮರಾಠಿ ಭಾಷಿಕರು ಸಂಭಾಜಿ ಉದ್ಯಾನವನದ ಬಳಿ ಕೈಗೆ ಕಪ್ಪುಪಟ್ಟಿ ಮತ್ತು ಕಪ್ಪು ಬಟ್ಟೆ ಧರಿಸಿ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು ಮತ್ತು ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಭಾಜಿ ಪಾಟೀಲ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಹೋರಾಟ ನಡೆಸುತ್ತಿರುವುದು ಇಂದು ನಿನ್ನೆಯಲ್ಲ. ರಾಜ್ಯಗಳು ಭಾಷಾವಾರು ವಿಂಗಡನೆಯಾದ 1956ರಿಂದಲೂ ಹೋರಾಟ ನಡೆಯುತ್ತಲೇ ಇದೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸುವವರೆಗೆ ನಮ್ಮ ಹೋರಾಟ ಯಾವ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಕನ್ನಡ ಭಾಷೆಯ ವಿರೋಧಿಗಳಲ್ಲ. ಆದರೆ, ಮರಾಠಿ ಭಾಷಿಕರೇ ಹೆಚ್ಚಾಗಿರುವ ಬೆಳಗಾವಿಯಲ್ಲಿ ಕರ್ನಾಟಕದಿಂದ ಮರಾಠಿಗರಿಗೆ ಅನ್ಯಾಯ ಆಗುತ್ತಿದೆ, ಸಿಗಬೇಕಾದ ಸವಲತ್ತುಗಳು ಸಿಗುತ್ತಿಲ್ಲ. ಇದರಿಂದಾಗಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಲೇಬೇಕು ಎಂದು ಸೈಕಲ್ ನಲ್ಲಿ ಮೆರವಣಿಗೆ ಮಾಡಿ ಘೋಷಣೆಗಳನ್ನು ಕೂಗಿದರು. ಇದಕ್ಕೆ ಹಲವಾರು ಮರಾಠಿಪರ ಸಂಘಟನೆಗಳು ಸೇರಿಕೊಂಡಿವೆ.
ಕೆಲ ವರ್ಷಗಳ ಹಿಂದೆ ಕನ್ನಡ ರಾಜ್ಯೋತ್ಸವದಂದು ಆಡಳಿತಾರೂಢ ಎಂಇಎಸ್ ಕರಾಳ ದಿನ ಆಚರಿಸಿದ್ದಕ್ಕೆ ಪ್ರತಿಯಾಗಿ ಬಿಜೆಪಿ ಸರಕಾರ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿತ್ತು. ಆದರೆ, ಈ ಬಾರಿ ಕನ್ನಡದಲ್ಲೇ ಮಾತನಾಡಿರುವ ಎಂಇಎಸ್ ನಾಯಕರು, ತಾವು ಕನ್ನಡ ವಿರೋಧಿಗಳಲ್ಲ ಎಂದು ಹೇಳಿ ಜಾಣತನ ಮರೆದಿದ್ದಾರೆ. ಸಿದ್ದರಾಮಯ್ಯ ಈ ನಡೆಗೆ ಏನು ಹೇಳುತ್ತಾರೆ?












Click it and Unblock the Notifications