ರೈಲ್ವೆ ಸಚಿವರನ್ನು ಭೇಟಿಯಾದ ಬೆಳಗಾವಿ ಸಂಸದೆ; ಬೇಡಿಕೆಗಳ ಪಟ್ಟಿ
ಬೆಳಗಾವಿ, ಡಿಸೆಂಬರ್ 14; ಬೆಳಗಾವಿಯ ಸಂಸದೆ ಮಂಗಲ ಸುರೇಶ್ ಅಂಗಡಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿದರು. ಬೆಳಗಾವಿ ಲೋಕಸಭಾ ವ್ಯಾಪ್ತಿಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯ ಹಲವು ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸಿದರು.
ಈ ಕುರಿತು ಸಂಸದರು ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ. ನವದೆಹಲಿಯ ರೈಲು ಭವನದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ, ನಮ್ಮ ಬೆಳಗಾವಿ ಲೋಕಸಭಾ ವ್ಯಾಪ್ತಿಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯ ಹಲವು ಅಭಿವೃದ್ಧಿ ವಿಷಯಗಳನ್ನು ಚರ್ಚಿಸಲಾಯಿತು ಎಂದು ಹೇಳಿದ್ದಾರೆ.

ಸಂಸದರು ತಮ್ಮ ಪೋಸ್ಟ್‌ನಲ್ಲಿ, 'ಈ ವೇಳೆ ನನ್ನೆಲ್ಲ ಬೇಡಿಕೆಗಳನ್ನು ಮಾನ್ಯ ಸಚಿವರು ಸಹಾನುಭೂತಿಯಿಂದ ಆಲಿಸಿ, ಮನವಿಯಲ್ಲಿರುವ ಎಲ್ಲ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸುವುದಾಗಿ ಭರವಸೆ ನೀಡಿದ್ದು, ಸಂತಸದ ವಿಷಯ' ಎಂದು ತಿಳಿಸಿದ್ದಾರೆ.
ಸಚಿವರಿಗೆ ಸಲ್ಲಿಕೆ ಮಾಡಿರುವ ಬೇಡಿಕೆಗಳು
* ಬೆಳಗಾವಿ-ಕಿತ್ತೂರು-ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಕಾಮಗಾರಿ ಪ್ರಾರಂಭಗೊಂಡಿದ್ದು ಇದನ್ನು ತೀವ್ರ ಗತಿಯಲ್ಲಿ ಪೂರ್ಣಗೊಳಿಸುವ ಬಗ್ಗೆ ಕ್ರಮ ಜರುಗಿಸಬೇಕು.
* ಬೆಳಗಾವಿ ನಗರದ ಬಳಕವಾಡಿ ಲೆವಲ್ ಕ್ರಾಸಿಂಗ್ 381ರ ಹತ್ತಿರ ನಿರ್ಮಾಣವಾಗಬೇಕಾದ ರಸ್ತೆ ಮೇಲ್ಸೇತುವೆ ಎರಡನೇ ಹಂತ ಲೇನ್ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡು ಹಲವಾರು ತಿಂಗಳು ಗತಿಸಿದ್ದು, ಇದರಿಂದಾಗಿ ನಗರದಲ್ಲಿ ಸುಗಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಇದನ್ನು ಪುನರ್ ಆರಂಭಿಸಿ ಬೇಗನೆ ಪೂರ್ಣಗೊಳಿಸಬೇಕು.
* ಲೆವಲ್ ಕ್ರಾಸಿಂಗ್ 382 & 383 ಹತ್ತಿರ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಸಹ ರೈಲ್ವೆ ಸಚಿವಾಲಯದಿಂದ ಅನುಮೋದನೆ ದೊರೆತಿದ್ದು, ಅವುಗಳ ಕಾಮಗಾರಿಯ ಶೀಘ್ರ ಪ್ರಾರಂಭಕ್ಕೆ ಅಧಿಕಾರಿಗಳಿಗೆ ಸೂಚಿಸಲು ಮನವಿ.
* ಬೆಳಗಾವಿ ರೈಲು ನಿಲ್ದಾಣದಿಂದ ಮುಂಬರುವ ದಿನಗಳಲ್ಲಿ ಬೆಳಗಾವಿ ನಗರದಿಂದ ಅಯೋಧ್ಯಾಕ್ಕೆ ಶ್ರೀ ರಾಮ ಮಂದಿರ ಸುಕ್ಷೇತ್ರಕ್ಕೆ ಭೇಟಿ ನೀಡಿ ದರ್ಶನ ಪಡೆಯಲು ಮತ್ತು ಫಂಡರಪೂರ ಬೆಳಗಾವಿಗೆ ಶ್ರೀ ವಿಠಲ ರುಕ್ಕಿಣಿ ಮಂದಿರ ಪ್ರವಾಸಕ್ಕೆ ಅನುಕೂಲವಾಗುವಂತೆ ಹಾಗೂ ಶ್ರೀ ಶಬರಿಮಲೆ ಸುಕ್ಷೇತ್ರಕ್ಕೆ ಪ್ರಯಾಣಿಸಲು ಬೆಳಗಾವಿ-ಕೊಚ್ಚಿ ಹಾಗೂ ಬೆಳಗಾವಿ ಪೂನಾ ನಡುವೆ ನೂತನ ರೈಲು ಸಂಚಾರ ಪ್ರಾರಂಭಿಸಲು ಮನವಿ.
* ಅಂಚೆ ಇಲಾಖೆಗೆ ಸಂಬಂಧಿಸಿದಂತೆ ಬೆಳಗಾವಿ ಉದ್ಯಮ ಭಾಗದಲ್ಲಿರುವ ಅಂಚೆ ಇಲಾಖೆಯ 5000 ಚದರ ಅಡಿ ಜಮೀನಿನಲ್ಲಿ ಇಲಾಖೆಗೆ ಸ್ವಂತ ಕಟ್ಟಡ ನಿರ್ಮಿಸಲು ಅಗತ್ಯ ಅನುದಾನ ಒದಗಿಸುವಂತೆ ಮನವಿ ಸಲ್ಲಿಕೆ ಮಾಡಲಾಗಿದೆ.
2023ರ ಫೆಬ್ರವರಿಯಲ್ಲಿ ಬೆಳಗಾವಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಬೆಳಗಾವಿಯ ನೂತನ ರೈಲು ನಿಲ್ದಾಣ ಉದ್ಘಾಟಿಸಿದ್ದರು. ಆಧುನಿಕ ನಿಲ್ದಾಣದಿಂದ ಸೌಲಭ್ಯಗಳು ಮಾತ್ರವಲ್ಲದೆ ರೈಲ್ವೆಯ ಬಗ್ಗೆ ನಂಬಿಕೆಯೂ ಹೆಚ್ಚುತ್ತಿದೆ ಎಂದು ಹೇಳಿದ್ದರು.
ಲೋಂಡಾ-ಘಟಪ್ರಭಾ ಜೋಡಿ ಮಾರ್ಗವು ಪ್ರಯಾಣವನ್ನು ವೇಗ ಮತ್ತು ಸುರಕ್ಷಿತವಾಗಿಸುತ್ತದೆ. ಶಿಕ್ಷಣ, ಪ್ರವಾಸೋದ್ಯಮ ಮತ್ತು ಆರೋಗ್ಯ ರಕ್ಷಣೆಗೆ ಬೆಳಗಾವಿ ಪ್ರಮುಖ ಕೇಂದ್ರವಾಗಿದೆ ಸುಧಾರಿತ ರೈಲ್ವೆ ಸಂಪರ್ಕವು ಈ ವಲಯಗಳಿಗೆ ಇನ್ನಷ್ಟು ಉತ್ತೇಜನ ನೀಡಲಿದೆ ಎಂದು ತಿಳಿಸಿದ್ದರು. ಬೆಳಗಾವಿಯ ರೈಲ್ವೆ ನಿಲ್ದಾಣವನ್ನು ಮರು ಅಭಿವೃದ್ಧಿಗೊಳಿಸಲಾಗಿದೆ. ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸಲು ನಿಲ್ದಾಣವನ್ನು ಸುಮಾರು 190 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಮರು ಅಭಿವೃದ್ಧಿ ಮಾಡಲಾಗಿದೆ.
ಲೋಂಡಾ-ಬೆಳಗಾವಿ-ಘಟಪ್ರಭಾ ವಿಭಾಗದ ನಡುವಿನ ಜೋಡಿ ರೈಲು ಮಾರ್ಗ ಯೋಜನೆಯೂ ಪೂರ್ಣಗೊಂಡು ಉದ್ಘಾಟನೆಯಾಗಿದೆ. ಸುಮಾರು 930 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಯೋಜನೆಯು ಜನನಿಬಿಡ ಮುಂಬೈ-ಪುಣೆ-ಹುಬ್ಬಳ್ಳಿ-ಬೆಂಗಳೂರು ರೈಲ್ವೆ ಮಾರ್ಗದ ಉದ್ದಕ್ಕೂ ವ್ಯಾಪಾರ, ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಸಹಕಾರಿಯಾಗಿದೆ.












Click it and Unblock the Notifications