ಬೆಳಗಾವಿ: ಚರ್ಚ್‌ಗೆ ನುಗ್ಗಿ, ತಲ್ವಾರ್ ತೋರಿಸಿ ಪಾದ್ರಿಗೆ ಬೆದರಿಕೆ
ಬೆಳಗಾವಿ, ಡಿಸೆಂಬರ್ 12: ತಲ್ವಾರ್ ಹಿಡಿದ ಅಪರಿಚಿತ ವ್ಯಕ್ತಿಯೊಬ್ಬ ಬೆಳಗಾವಿಯ ಬಾಕ್ಸೈಟ್ ರಸ್ತೆಯ ಸಂತ ಜೋಸೆಫ್ ವರ್ಕರ್ ಚರ್ಚ್‌ನ ಪಾದ್ರಿ ಫಾ. ಫ್ರಾನ್ಸಿನ್ ಡಿಸೋಜ ಅವರ ಮೇಲೆ ದಾಳಿ ನಡೆಸಿದ ಘಟನೆಯು ಶನಿವಾರ ಸಂಜೆ ಸಂಭವಿಸಿದೆ. ಚರ್ಚ್ ಒಳಗೆ ನುಗ್ಗಿದ ಈ ಅಪರಿಚಿತ ವ್ಯಕ್ತಿ ಪಾದ್ರಿ ಮೇಲೆ ದಾಳಿ ನಡೆಸಿದ್ದಾನೆ. ಆದರೆ ಪಾದ್ರಿಗೆ ಯಾವುದೇ ಗಾಯಗಳು ಆಗದೆ, ಪಾರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಮೂಲಗಳ ಪ್ರಕಾರ, ತಲ್ವಾರ್ ಅನ್ನು ಹಿಡಿದ ವ್ಯಕ್ತಿಯು ಶನಿವಾರ ಸಂಜೆ ಸುಮಾರು 3:15 ರ ವೇಳೆಗೆ ಚರ್ಚಿನ ಗೋಡೆಯನ್ನು ಹಾರಿ ಒಳಗೆ ಬಂದಿದ್ದಾನೆ. ಮೊದಲ ಮಹಡಿಗೆ ಬಂದ ಈ ಅಪರಿಚಿತ ವ್ಯಕ್ತಿಯು ಕೋಣೆಯಲ್ಲಿ ಅಡಗಿ ಕೂತಿದ್ದನು. ಬಳಿಕ ಫಾದರ್ ಫ್ರಾನ್ಸಿನ್ ಮೇಲೆ ಹಲ್ಲೆ ಮಾಡುವ ಯತ್ನವನ್ನು ಮಾಡಿದ್ದಾನೆ. ಪಾದ್ರಿ ಫ್ರಾನ್ಸಿನ್ ಡಿಸೋಜ ಈ ದಾಳಿಯಿಂದ ತಪ್ಪಿಸಿಕೊಂಡಿದ್ದು, ಆ ಕೂಡಲೇ ಈ ವ್ಯಕ್ತಿಯು ಗೋಡೆಯನ್ನು ಹಾರಿ ಹೋಗಿ ತಪ್ಪಿಸಿಕೊಂಡಿದ್ದಾನೆ.
ಇನ್ನು ಈ ವ್ಯಕ್ತಿಯು ಬೆಳಗಾವಿಯ ಬಾಕ್ಸೈಟ್ ರಸ್ತೆಯ ಸಂತ ಜೋಸೆಫ್ ವರ್ಕರ್ ಚರ್ಚ್‌ನ ಪಾದ್ರಿ ಫಾ. ಫ್ರಾನ್ಸಿನ್ ಡಿಸೋಜ ಅವರಿಗೆ ಜೀವ ಬೆದರಿಕೆಯನ್ನು ಕೂಡಾ ಹಾಕಿದ್ದಾನೆ ಎಂದು ವರದಿಯು ಉಲ್ಲೇಖ ಮಾಡಿದೆ. ಸ್ಥಳೀಯರು ಆಗಮಿಸುತ್ತಿದ್ದಂತೆ ಅಲ್ಲಿನ ಗೋಡೆಯನ್ನು ಹಾರಿ ಆರೋಪಿ ಪರಾರಿಯಾಗಿದ್ದಾನೆ.

ಈ ವ್ಯಕ್ತಿಯು ಕೌಂಪೌಂಡ್ ಗೋಡೆಯನ್ನು ಹಾರಿ ಬಂದು ಕೋಣೆಯಲ್ಲಿ ಪಾದ್ರಿಗೆ ದಾಳಿ ಮಾಡಿದಾಗ ದಾಳಿಯಿಂದ ತಪ್ಪಿಸಿಕೊಂಡ ಪಾದ್ರಿ ಮೊದಲ ಮಹಡಿಯಿಂದ ಕೂಡಲೇ ಕೆಳಕ್ಕೆ ಇಳಿದಿದ್ದಾರೆ. ಈ ಬೆನ್ನಲ್ಲೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದಾರೆ. ಇದನ್ನು ಗಮನಿಸುತ್ತಿದ್ದಂತೆ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ವ್ಯಕ್ತಿಯೊಬ್ಬ ತಲ್ವಾರ್ ಹಿಡಿದು ಚರ್ಚ್‌ಗೆ ನುಗ್ಗಿದ ದೃಶ್ಯ ಸೆರೆ
ಈ ನಡುವೆ ಈ ವ್ಯಕ್ತಿಯು ಚರ್ಚ್ ಗೋಡೆ ಹಾರಿ ಚರ್ಚ್‌ಗೆ ನುಗ್ಗಿದ ದೃಶ್ಯವು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯದಲ್ಲಿ ತಲ್ವಾರ್ ಹಿಡಿದಿರುವ ವ್ಯಕ್ತಿಯು ಚರ್ಚ್‌ಗೆ ನುಗ್ಗಿ ಪಾದ್ರಿ ಫಾ. ಫ್ರಾನ್ಸಿನ್ ಡಿಸೋಜರನ್ನು ಹಿಂಬಾಳಿಸಿಕೊಂಡು ಹೋಗುವುದು ಕಂಡು ಬಂದಿದೆ. ಇನ್ನು ಈ ತಲ್ವಾರ್ ಹಿಡಿದ ಅಪರಿಚಿತ ವ್ಯಕ್ತಿಯನ್ನು ನೋಡಿ ಪಾದ್ರಿ ಅಲ್ಲಿಂದ ತಪ್ಪಿಸಿಕೊಂಡಿದ್ದು ಕೂಡಾ ಕಂಡು ಬಂದಿದೆ. ಪಾದ್ರಿಯನ್ನು ಹಿಂಬಾಳಿಸಿದ ಈ ಅಪರಿಚಿತ ವ್ಯಕ್ತಿ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಇನ್ನು ಈ ದೃಶ್ಯದಲ್ಲಿ ಈ ವ್ಯಕ್ತಿಯು ವೈರ್ ಅನ್ನು ಹಿಡಿದಿರುವುದು ಕೂಡಾ ಕಂಡು ಬಂದಿದೆ. ಆದರೆ ಈತ ಯಾಕಾಗಿ ವೈರ್ ಹಿಡಿದಿದ್ದಾನೆ ಎಂಬುವುದು ಈವರೆಗೂ ಖಚಿತವಾಗಿಲ್ಲ.
ಇನ್ನು ಈ ಆರೋಪಿಯು ಚರ್ಚ್‌ಗೆ ಹೊಂದಿಕೊಂಡೇ ಇರುವ ಮನೆಯಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ಆಗಮಿಸರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಈ ಘಟನೆ ನಡೆದ ಬೆನ್ನಲ್ಲೇ ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಈ ಸಿಸಿ ಟಿವಿ ದೃಶ್ಯಾವಳಿಯನ್ನು ವಶಕ್ಕೆ ಪಡೆದಿದ್ದಾರೆ.
"ನಾವು ಸಿಸಿ ಟಿವಿ ದೃಶ್ಯಾವಳಿಯನ್ನು ಪರಿಶೀಲನೆ ಮಾಡುತ್ತಿದ್ದೇವೆ, ಅಗತ್ಯ ಭದ್ರತೆಯನ್ನು ಈಗ ಒದಗಿಸಲಾಗಿದೆ," ಎಂದು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಆರ್ಚ್‌ಬಿಷಪ್ ಕಚೇರಿಯ ವಕ್ತಾರ ಜೆ ಎ ಕಾಂತರಾಜ್, "ಇದು ಅತ್ಯಂತ ಅಪಾಯಕಾರಿ ಹಾಗೂ ಆಘಾತಕಾರಿ ಘಟನೆ ಆಗಿದೆ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಚಳಿಗಾಲದ ಅಧಿವೇಶನಕ್ಕೂ ಮುನ್ನ ನಡೆದ ಘಟನೆ
ಸೋಮವಾರದಿಂದ ಚಳಿಗಾಲ ಅಧಿವೇಶನವು ಬೆಳಗಾವಿಯಲ್ಲಿ ನಡೆಯಲಿದೆ. ಈ ನಡುವೆ ಈ ಘಟನೆಯು ನಡೆದಿದೆ, ಈ ಅಧಿವೇಶನದಲ್ಲಿ ಧಾರ್ಮಿಕ ಮತಾಂತರ ವಿರೋಧಿ ಮಸೂದೆಯು ಮಂಡನೆ ಆಗುವ ಸಾಧ್ಯತೆ ಇದೆ. ಈ ಮಸೂದೆಯನ್ನು ವಿರೋಧ ಪಕ್ಷಗಳು ಹಾಗೂ ಕ್ರೈಸ್ತ ಸಂಘಟನೆಗಳು ವಿರೋಧ ಮಾಡಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications