ಕಿತ್ತೂರು ಉತ್ಸವ 2023; ದಿನಾಂಕ ನಿಗದಿ, 3 ಕೋಟಿ ರೂ. ಅನುದಾನ
ಬೆಳಗಾವಿ, ಅಕ್ಟೋಬರ್ 04; "ಕಿತ್ತೂರು ಉತ್ಸವ 2023 ಅನ್ನು ಅಕ್ಟೋಬರ್ 23ರಿಂದ ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು. ಉತ್ಸವಕ್ಕಾಗಿ ಕನಿಷ್ಠ 3 ಕೋಟಿ ರೂಪಾಯಿ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು" ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
2023ರ ಕಿತ್ತೂರು ಉತ್ಸವದ ಹಿನ್ನಲೆಯಲ್ಲಿ ಬುಧವಾರ ಚನ್ನಮ್ಮನ ಕಿತ್ತೂರಿನಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸತೀಶ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜನಪ್ರತಿನಿಧಿಗಳು, ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಉಪಸ್ಥಿತರಿದ್ದರು.

ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, "ಮೂರು ದಿನಗಳ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಕನಿಷ್ಠ 3 ಕೋಟಿ ರೂಪಾಯಿ ಅನುದಾನದ ಅಗತ್ಯವಿದೆ. ಇದಕ್ಕಾಗಿ ಪ್ರಯತ್ನಿಸಲಾಗುವುದು. ಈಗಾಗಲೇ 5 ಕೋಟಿ ರೂಪಾಯಿ ನೀಡುವಂತೆ ಪ್ರಸ್ತಾವನೆ ಕಳಿಸಲಾಗಿದೆ" ಎಂದರು.
"ಲೋಕೋಪಯೋಗಿ ಇಲಾಖೆಯಿಂದ ಮುಂದಿನ ಉತ್ಸವದ ವೇಳೆಗೆ ಕನಿಷ್ಠ 5 ಕೋಟಿ ರೂಪಾಯಿ ಅನುದಾನವನ್ನು ಕಿತ್ತೂರು ಪಟ್ಟಣದಲ್ಲಿ ಅಭಿವೃದ್ಧಿಗಾಗಿ ಖರ್ಚು ಮಾಡಲಾಗುವುದು. ಈ ಹಣದಲ್ಲಿ ವೀರ ಹೋರಾಟಗಾರರ ಭಾವಚಿತ್ರಗಳ ಅನಾವರಣ, ಶೌಚಾಲಯ ನಿರ್ಮಾಣ ಸೇರಿದಂತೆ ವಿವಿಧ ರೀತಿಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು" ಎಂದು ಸಚಿವರು ಘೋಷಿಸಿದರು.
ಮೈಸೂರು ದಸರಾ ಮಾದರಿಯಲ್ಲಿ ಆಯೋಜನೆ; ಸತೀಶ್ ಜಾರಕಿಹೊಳಿ ಮಾತನಾಡಿ, "ಕಿತ್ತೂರು ಉತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲಾಗುವುದು. ದಸರಾ ಮಾದರಿಯಲ್ಲಿ ಉತ್ಸವ ಆಗಬೇಕು ಎಂಬುದು ಎಲ್ಲರ ಆಶಯವಾಗಿದೆ. ಕಿತ್ತೂರು ಇತಿಹಾಸದ ಮೆರಗು ಸಾರುವಂತಹ ಛಾಯಾಚಿತ್ರಗಳ ಪ್ರದರ್ಶನವನ್ನು ಮುಂದಿನ ವರ್ಷದಿಂದ ಆರಂಭಿಸಲಾಗುವುದು. ಸ್ಥಳೀಯ ಕಲಾವಿದರಿಗೆ ಹಾಗೂ ನಿರೂಪಕರಿಗೆ ಪ್ರಾಮುಖ್ಯತೆ ನೀಡಬೇಕು" ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮಾತನಾಡಿದ ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, "ಕೋಟೆಯ ಆವರಣದಲ್ಲಿ ಮಾಹಿತಿ ಫಲಕಗಳ ಅಳವಡಿಕೆ ಮಾಡುವುದರ ಜತೆಗೆ ಧ್ವನಿಬೆಳಕು ಕಾರ್ಯಕ್ರಮವನ್ನು ವಾರದಲ್ಲಿ ಕನಿಷ್ಠ ಎರಡು ಬಾರಿ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಪಟ್ಟಣದ ಪ್ರವೇಶ ಮಾರ್ಗಗಳಲ್ಲಿ ದೊಡ್ಡದಾದ ಫಲಕಗಳನ್ನು ಅಳವಡಿಸಲು ಈಗಾಗಲೇ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೊರಗಿನವರು ಮತ್ತು ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುವುದು" ಎಂದರು.
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, "ಕಿತ್ತೂರು ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. 5 ಕೋಟಿ ರೂಪಾಯಿ ಅನುದಾನ ಕೋರಿ ಪ್ರಸ್ತಾವನೆ ಸರ್ಕಾರಕ್ಕೆ ಕಳಿಸಲಾಗಿದೆ. ಉತ್ಸವದ ಸಿದ್ಧತೆಗಾಗಿ ಈಗಾಗಲೇ ಸಾರ್ವಜನಿಕರು ಹಾಗೂ ಅಧಿಕಾರಿಗಳನ್ನು ಒಳಗೊಂಡ 16 ಉಪ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲ ಸಮಿತಿಗಳು ಕಾರ್ಯಪ್ರವೃತ್ತವಾಗಿವೆ" ಎಂದು ಹೇಳಿದರು.
"ಕಳೆದ ಬಾರಿಯಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರ ಸಂಕಿರಣ, ಕ್ರೀಡೆ, ಕುಸ್ತಿ, ಸೈಕ್ಲಿಂಗ್, ದೋಣಿ ವಿಹಾರ ಸೇರಿದಂತೆ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಇದಲ್ಲದೇ ಸಾರ್ವಜನಿಕರ ಸಲಹೆಗಳನ್ನು ಆಧರಿಸಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು" ಎಂದು ತಿಳಿಸಿದರು.
"ಕಿತ್ತೂರು ಪ್ರವಾಸಿ ತಾಣವಾಗಿರುವುದರಿಂದ ಕುಡಿಯುವ ನೀರು ಮತ್ತು ಶೌಚಾಲಯಗಳನ್ನು ಲೋಕೋಪಯೋಗಿ ಇಲಾಖೆಯ ವತಿಯಿಂದ 50 ಶೌಚಾಲಯಗಳನ್ನು ನಿರ್ಮಿಸಿಕೊಡಲಾಗುವುದು. ಇದಕ್ಕಾಗಿ ಪಟ್ಟಣ ಪಂಚಾಯತಿ ಮತ್ತು ಸ್ಥಳೀಯರು ಸೂಕ್ತ ಜಾಗವನ್ನು ಒದಗಿಸಬೇಕು" ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
"ಕಿತ್ತೂರು ಅಭಿವೃದ್ಧಿಗೆ ಸಾಕಷ್ಟು ಅನುದಾನ ಖರ್ಚು ಮಾಡಲಾಗಿದೆ. ಆದಾಗ್ಯೂ ನಿರೀಕ್ಷಿತ ಸುಧಾರಣೆ ಕಂಡಿಲ್ಲ. ಆದ್ದರಿಂದ ಸಮಗ್ರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ನಿರ್ದಿಷ್ಟ ಯೋಜನೆಯನ್ನು ರೂಪಿಸುವ ಅಗತ್ಯವಿದೆ. ಚೆನ್ನಮ್ಮನ ಜನ್ಮಸ್ಥಳ ಖಾಸಗಿಯವರ ಜಾಗ ಆಗಿರುವುದರಿಂದ ಅಭಿವೃದ್ಧಿಗೆ ಸ್ವಲ್ಪ ಹಿನ್ನಡೆಯಾಗಿದೆ. ಆದ್ದರಿಂದ ಚೆನ್ನಮ್ಮನ ಕೋಟೆ ಹಾಗೂ ಜನ್ಮಸ್ಥಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಕಳೆದ 25 ವರ್ಷಗಳಿಂದ ಉತ್ಸವವನ್ನು ಆಚರಿಸಲಾಗುತ್ತಿದೆ. ಪ್ರತಿಬಾರಿಯಂತೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಲಹೆಗಳು ಪಾಲನೆಯಾಗಬೇಕು" ಎಂದರು.












Click it and Unblock the Notifications