ಜಯಮಾಲಾ ನನ್ನ ಹಿರಿಯ ಅಕ್ಕನಂತೆ: ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ, ಜೂನ್.17: ನಮ್ಮ ಉತ್ತರ ಕರ್ನಾಟಕ ಶೈಲಿಯಲ್ಲಿ ಸೇವೆ ಅಂದರೆ ಅದು ಉರುಳು ಸೇವೆ, ಹರಕೆ ಸೇವೆ ಮತ್ತು ಪಕ್ಷದ ಸೇವೆ ಎಂದು ಅರ್ಥ. ನಾನು ಆ ಅರ್ಥದಲ್ಲಿ ಜಯಮಾಲಾ ಅವರು ಪಕ್ಷದ ಸೇವೆ ಮಾಡಿದ್ದಾರೆ ಎಂದು ಹೇಳಿದ್ದೆ.
ಆದರೆ ನನ್ನ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥ ಮಾಡಿಕೊಂಡಿವೆ ಎಂದು ಶಾಸಕಿ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಆ ರೀತಿಯ ಭಾವನೆಗಳು ನನ್ನ ಬಳಿಯಿಲ್ಲ. ಜಯಮಾಲಾ ಅವರ ಜೊತೆಯಲ್ಲಿ ನನ್ನ ವೈಯಕ್ತಿಕ ಸಂಬಂಧ ಅನೋನ್ಯವಾಗಿದೆ.
ನನ್ನ ಹಿರಿಯ ಅಕ್ಕನಂತೆ ಜಯಮಾಲಾ ಅವರು ಇದ್ದಾರೆ.

ಸದಾ ನನ್ನ ಬೆನ್ನು ತಟ್ಟುವ ಕೆಲಸ ಜಯಮಾಲಾ ಅವರು ಮಾಡಿದ್ದಾರೆ. ಅವರ ಭವಿಷ್ಯ ಉಜ್ವಲವಾಗಲಿ, ಅವರಿಂದ ಒಳ್ಳೆಯ ಕೆಲಸ ಆಗಲಿ. ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಹೆಸರು ಬರಲಿ ಎಂದು ಆಶಿಸಿದರು.
ಪರಿಷತ್‌ನ ಹಿರಿಯ ಕಾಂಗ್ರೆಸ್ ನಾಯಕರಾದ ವಿ.ಎಸ್.ಉಗ್ರಪ್ಪ, ಎಸ್.ಆರ್.ಪಾಟೀಲ್, ಕೆ.ಸಿ.ಕೊಂಡಯ್ಯ ಸೇರಿದಂತೆ ಇನ್ನೂ ಹಲವರು ಜಯಮಾಲಾರನ್ನು ಮೇಲ್ಮನೆಯ ಸಭಾ ನಾಯಕಿ ಮಾಡುವ ನಿರ್ಣಯಕ್ಕೆ ಬೇಸರ ವ್ಯಕ್ತಪಡಿಸಿದ್ದು, ಜಯಮಾಲಾ ವಿರುದ್ಧ ಸಹಿ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ.
ಜಯಮಾಲಾ ಅವರಿಗೆ ಸಚಿವೆ ಸ್ಥಾನ ನೀಡಲಾಗಿದ್ದು, ಇದೂ ಸಹ ಹಲವು ಶಾಸಕರಲ್ಲಿ ಅಸಮಾಧಾನ ಮೂಡಿಸಿತ್ತು. ಮಹಿಳಾ ಶಾಸಕಿಯರು ಇರುವಾಗಲೂ ಕೂಡ ಚುನಾವಣೆಯನ್ನೇ ಎದುರಿಸದ ಜಯಮಾಲಾ ಅವರಿಗೆ ಸಚಿವ ಸ್ಥಾನ ನೀಡಿರುವುದನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ವಿರೋಧಿಸಿದ್ದರು.












Click it and Unblock the Notifications