ಮರ್ಯಾದಾ ಹತ್ಯೆ: ಮಗಳು ಸೇರಿ ಪ್ರಿಯಕರನನ್ನು ಕೊಚ್ಚಿ ಕೊಂದ ತಂದೆ
ಬೆಳಗಾವಿ, ಏಪ್ರಿಲ್ 23 : ರಾಜ್ಯದಲ್ಲಿ ಮತ್ತೊಂದು ಮರ್ಯಾದೆ ಹತ್ಯೆ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬೆಡಸೂರ ಗ್ರಾಮದಲ್ಲಿಯೆ ಮರ್ಯಾದೆ ಹತ್ಯೆ ನಡೆದಿದೆ.
ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂಬ ಕಾರಣಕ್ಕೆ ತಂದೆಯೊಬ್ಬ ತನ್ನ ಮಗಳು ಹಾಗೂ ಪ್ರಿಯಕರನನ್ನು ಮನೆಯಲ್ಲೇ ಕೊಚ್ಚಿ ಕೊಲೆ ಮಾಡಿದ್ದಾನೆ.

45 ವರ್ಷದ ಯಲ್ಲಪ್ಪ ಭೀಮಪ್ಪ ಎಂಬಾತ ತನ್ನ ಮಗಳು ರುಕ್ಮವ್ವ (16) ಪ್ರಿಯಕ ಮಂಜುನಾಥ್ ಪಡೇಶ್ವರ್ (21) ನನ್ನು ಕೊಚ್ಚಿ ಕೊಂದಿದ್ದಾನೆ.
ರುಕ್ಮವ್ವ ಅದೇ ಗ್ರಾಮದ ಮಂಜುನಾಥ್ ಎಂಬವರನ್ನು ಪ್ರೀತಿ ಮಾಡುತ್ತಿದ್ದರು. ರುಕ್ಮವ್ವ ಮತ್ತು ಮಂಜುನಾಥ್ ಇಬ್ಬರದೂ ಜಾತಿ ಬೇರೆಯಾಗಿದ್ದರಿಂದ ಪೋಷಕರ ವಿರೋಧವಿತ್ತು.
ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ರುಕ್ಮವ್ವಳನ್ನು ಭೇಟಿಯಾಗಲು ಮಂಜುನಾಥ್ ಹೋಗಿದ್ದಾನೆ. ಆದರೆ, ಅದೇ ವೇಳೆಗೆ ಮನೆಗೆ ಬಂದ ಯಲ್ಲಪ್ಪ ಇಬ್ಬರನ್ನು ಕಂಡು ಕೋಪದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ಬಳಿಕ ನೇರವಾಗಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಬಗ್ಗೆ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ, ಧರ್ಮದ ವಿಷ ವರ್ತುಲದಲ್ಲಿ ಸಿಕ್ಕಿ ತೊಳಲಾಡುತ್ತಿರುವ ಕೆಲವರು ಮಾನ ಮರ್ಯಾದೆ ಹೆಸರಿನಲ್ಲಿ ಮಾನಗೇಡಿ ಕೃತ್ಯಕ್ಕೆ ಮುಂದಾಗುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.












Click it and Unblock the Notifications