ನಿಪ್ಪಾಣಿ ಬಳಿ ಭೀಕರ ಅಪಘಾತ 5 ಮಂದಿ ದುರ್ಮರಣ
ಬೆಳಗಾವಿ, ಜೂನ್ 25: ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿರುವ ಭೀಕರ ಅಪಘಾತದಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ.
ನಿಪ್ಪಾಣಿ ಹೊರವಲಯದಲ್ಲಿ ಎಂಜಿಎಂ ಆಸ್ಪತ್ರೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೊಲೇರೊ ಮತ್ತು ಮಿನಿ ಟ್ರಕ್ ನಡುವೆ ಢಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ 5 ಜನ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಮೃತರನ್ನು ನದೀಂ, ರಾಜು, ಅಹಮದ್, ಶಬ್ಬೀರ್, ರಮೇಶ್ ಎಂದು ಗುರುತಿಸಲಾಗಿದೆ.
ಗೋಕಾಕದ ಘಟಪ್ರಭಾದಿಂದ ತರಕಾರಿ ತುಂಬಿಕೊಂಡು ಟ್ರಕ್ ಚಾಲಕ ರಮೇಶ್ ಕೊಲ್ಲಾಪುರಕ್ಕೆ ಹೊರಟಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಟ್ರಕ್ ಬೊಲೇರೋಗೆ ಡಿಕ್ಕಿಯಾದ ಪರಿಣಾಮ ಬೊಲೆರೋದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಮೇಶ ಸೇರಿ ಇನ್ನು ಇಬ್ಬರು ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.

ಟ್ರಕ್ ಚಾಲಕ ರಮೇಶ್ ಹಿರೇಕೆರೂರಿನವರು ಎಂಬ ಮಾಹಿತಿ ಲಭ್ಯವಾಗಿದೆ. ಬೊಲೆರೋದಲ್ಲಿದ್ದವರೆಲ್ಲರು ಕೊಲ್ಹಾಪುರ ನಿವಾಸಿಗಳು ಎಂದು ತಿಳಿದುಬಂದಿದೆ.
ಬೆಳಿಗ್ಗೆ 9:30ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ನಿಪ್ಪಾಣಿ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಅಪಘಾತದಿಂದ ಹೆದ್ದಾರಿಯಲ್ಲಿ ಉಂಟಾಗಿದ್ದ ಸಂಚಾರ ದಟ್ಟಣೆಯನ್ನು ತೆರವು ಮಾಡಿದ್ದಾರೆ.












Click it and Unblock the Notifications