ಬೆಳಗಾವಿ- ಹುಬ್ಬಳ್ಳಿ-ಧಾರವಾಡ ನಡುವೆ ನೇರ ರೈಲ್ವೆ ಸಂಪರ್ಕಕ್ಕೆ ಒತ್ತಾಯ
ಬೆಳಗಾವಿ, ಜನವರಿ 31: ಬೆಳಗಾವಿ-ಹುಬ್ಬಳಿ-ಧಾರವಾಡ ನಗರಗಳಿಗೆ ನೇರ ರೈಲು ಸಂಪರ್ಕಕ್ಕೆ ಒತ್ತಾಯಿಸಿ ರೈಲ್ವೆ ಸಚಿವರಿಗೆ ಮನವಿ ಮಾಡಲಾಗುತ್ತಿದೆ.
ಬೆಳಗಾವಿ-ಹುಬ್ಬಳ್ಳಿ-ಧಾರವಾಡ ನಗರಗಳು ಉತ್ತರ ಕರ್ನಾಟಕದ ಪ್ರಮುಖ ನಗರಗಳು. ಇವುಗಳ ನಡುವಿನ ರಸ್ತೆ ಅಂತರ 72 ಕಿ.ಮೀ ಇದ್ದು ಬಸ್ಸಿನಲ್ಲಿ ಪ್ರಯಾಣಿಸಿದರೆ 1:30 ಗಂಟೆ ಆಗುತ್ತದೆ. ಆದರೆ ರೈಲಿನಲ್ಲಿ ಬಳಸು ಹಾದಿಯಿದ್ದು ಬೆಳಗಾವಿಯಿಂದ ಹುಬ್ಬಳ್ಳಿಗೆ ತಲುಪಲು ಬರೋಬ್ಬರಿ 4 ಗಂಟೆ ಬೇಕಾಗುತ್ತದೆ.
ಹಾಗಾಗಿ ಈ ಎರಡು ಬೆಳಗಾವಿ ಮತ್ತು ಅವಳಿ ನಗರಗಳ ನಡುವೆ ರೈಲ್ವೆ ಹಳಿ ನಿರ್ಮಿಸಿ ಎರಡೂ ನಗರಗಳ ನಡುವೆ ನೇರ ಸಂಪರ್ಕ ಸಾಧ್ಯವಾಗಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗುತ್ತಿದೆ. ಈ ಬಗ್ಗೆ ಆನ್‌ಲೈನ್ ಸಹಿ ಸಂಗ್ರಹ ಕಾರ್ಯ ಕೂಡ ನಡೆಯುತ್ತಿದೆ.

ಬೆಳಗಾವಿ ಮತ್ತು ಅವಳಿ ನಗರಗಳ ನಡುವೆ ನೇರ ರೈಲ್ವೆ ಸಂಪರ್ಕ ಸಾಧ್ಯವಾದರೆ ಬಸ್ಸಿನಲ್ಲಿ ಈಗ ತಗುಲುತ್ತಿರುವ ಸರಾಸರಿ ಪ್ರಯಾಣ ವೆಚ್ಚ 170 ರೂಗಳಿಗಿಂತ ಮೂರು ಪಟ್ಟಿ ಕಡಿಮೆ ಮೊತ್ತ ಅಂದರೆ ಸುಮಾರು ಕೇವಲ 20 ರೂಪಾಯಿಗೆ ಪ್ರಯಾಣಿಕರು ಈ ನಗರಗಳ ನಡುವೆ ಸಂಚರಿಸಬಹುದಾಗುತ್ತದೆ.
ಪ್ರತಿ ಬಾರಿ ಬಜೆಟ್ ಸಮಯದಲ್ಲಿ ಈ ನಗರಗಳ ನಡುವೆ ರೈಲ್ವೆ ಹಳಿ ಸ್ಥಾಪನೆ ಬಗ್ಗೆ ಘೋಷಣೆ ಹೊರಬೀಳುತ್ತದೆಯೇ ಎಂದು ಕಾತುರವಾಗಿ ಕಾಯುವುದೇ ಆಗಿದೆ. ಈಗಾಗಲೇ ಮಾರ್ಗದ ಸರ್ವೆ ಆಗಿದೆ ಆದರೆ ಕಾಮಗಾರಿಗೆ ಹಸಿರು ನಿಶಾನೆ ಸಿಕ್ಕಿಲ್ಲ. ಈ ಬಾರಿಯಾದರೂ ಈ ನಗರಗಳ ನಡುವೆ ನೇರ ರೈಲ್ವೆ ಸಂಪರ್ಕಕ್ಕೆ ಒಪ್ಪಿಗೆ ಸಿಗುತ್ತದೆಯೇ ಎಂದು ಪ್ರಯಾಣಿಕರು ಎದುರು ನೋಡುತ್ತಿದ್ದಾರೆ.












Click it and Unblock the Notifications