Lakshman Savadi: ಮುಂದುವರಿದ ಬೆಳಗಾವಿ ಕಾಂಗ್ರೆಸ್ ಒಳಜಗಳ; ಲಕ್ಷ್ಮಣ ಸವದಿಯ ಸಚಿವ ಸ್ಥಾನದ ಕನಸು ನನಸಾಗಲ್ವಾ?
ಬೆಳಗಾವಿ, ಜೂನ್. 08: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಭಾರೀ ಭಿನ್ನಮತ ಸ್ಫೋಟಗೊಂಡಿದೆ. ಲಕ್ಷ್ಮಣ ಸವದಿ ಮತ್ತು ಮಹೇಂದ್ರ ತಮ್ಮಣ್ಣವರ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಹೆಚ್ಚಿನ ಪ್ರಯತ್ನ ಮಾಡಿಲ್ಲ ಎಂಬ ಆರೋಪಗಳು ಕಾಂಗ್ರೆಸ್ ನಾಯಕರಿಂದ ಬಂದಿವೆ.
ಲೋಕಸಭಾ ಫಲಿತಾಂಶ ಬಳಿಕ ಬೆಳಗಾವಿ ಕಾಂಗ್ರೆಸ್‌ನ ಭಿನ್ನಾಭಿಪ್ರಾಯದ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಲಕ್ಷ್ಮಣ ಸವದಿ ಹಾಗೂ ಮಹೇಂದ್ರ ತಮ್ಮಣ್ಣವರ ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಲೀಡ್ ತರಲು ಕೆಲಸ ಮಾಡಿಲ್ಲ ಎಂದಿದ್ದಾರೆ. ಜೊತೆಗೆ ತಾವು ಟಾರ್ಗೆಟ್ ಮಾಡುತ್ತಿಲ್ಲ ಎಂಬುದನ್ನು ಹೇಳಿದ್ದಾರೆ. ಹೀಗಾಗಿ ಲಕ್ಷ್ಮಣ ಸವದಿ ಮತ್ತೆ ಸಚಿವ ಆಗುವುದು ಸಾಧ್ಯವಿಲ್ಲ ಎನ್ನಲಾಗುತ್ತಿದೆ.

ನನಸಾಗದ ಸವದಿ ಸಚಿವ ಸ್ಥಾನದ ಕನಸು
ಲಕ್ಷ್ಮಣ ಸವದಿ ಅವರು ಕಳೆದ ವರ್ಷ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಗೆದ್ದಿದ್ದರು. ಅವರ ವಿಧಾನಸಭಾ ಕ್ಷೇತ್ರವು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಭಾಗವಾಗಿದ್ದು, ಅಲ್ಲಿ ಕಾಂಗ್ರೆಸ್ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಿತ್ತು. ಇತ್ತೀಚೆಗೆ ಅಥಣಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಬ್ಬರೂ ಕಾಂಗ್ರೆಸ್ ಉತ್ತಮ ಗೆಲುವಿನ ಅಂತರವನ್ನು ಪಡೆದರೆ ಸಂಪುಟ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು.
ಆದರೆ, ಪ್ರಿಯಾಂಕಾ ಜಾರಕಿಹೊಳಿ ಅವರು ಅಥಣಿಯಲ್ಲಿ ಕೇವಲ 9,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಈ ಭರವಸೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬಿಎಸ್ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಲಕ್ಷ್ಮಣ ಸವದಿ ಅವರು ಜಗದೀಶ್ ಶೆಟ್ಟರ್ ಅವರೊಂದಿಗೆ ಕಾಂಗ್ರೆಸ್ ಸೇರಿದ್ದರು. ಬಳಿಕ ಲೋಕಸಭೆ ಚುನಾವಣೆಗೂ ಮುನ್ನ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಆದರು. ಸವದಿ ಅಲ್ಲಿಯೇ ಉಳಿದುಕೊಂಡರು.

ಇಬ್ಬರಿಗೂ ಕಾಂಗ್ರೆಸ್ ಕ್ಯಾಬಿನೆಟ್ ಸ್ಥಾನದ ಭರವಸೆ ನೀಡಿತ್ತು. ಆದರೆ, ಸಂಪುಟಕ್ಕೆ ಪ್ರವೇಶಿಸುವ ಮೊದಲು ಸ್ವಲ್ಪ ಸಮಯ ಕಾಯುವಂತೆ ಸವದಿ ಅವರಿಗೆ ಹೇಳಲಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬರುವ ಮತಗಳ ಅಂತರದ ಮೇಲೆ ಸವದಿ ಅವರ ಸಚಿವ ಸ್ಥಾನ ನಿಂತಿತ್ತು. ಆದರೆ, ಈಗ ನಡೆದಿರುವ ಬೆಳವಣಿಗೆಗೆಳ ಪ್ರಕಾರ ಸಚಿವ ಸ್ಥಾನದ ಕನಸು ಕನಸಾಗಿಯೇ ಉಳಿಯಲಿದೆ.
ಸವದಿ ಅವರೇ ಗೆಲುವಿನ ಅಂತರ ಕಡಿಮೆಯಾಗಲು ಕಾರಣ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ. "ಬಿಜೆಪಿಯಿಂದ ಬಂದು ನಮ್ಮೊಂದಿಗೆ ಸೇರಿಕೊಂಡವರು ಭರವಸೆಯಂತೆ ಕೆಲಸ ಮಾಡಲಿಲ್ಲ" ಎಂದು ಜಾರಕಿಹೊಳಿ ಆರೋಪಿಸಿದ್ದಾರೆ. ಆದರೆ, "ನನ್ನ ಬೆಂಬಲಿಗರು ಮತ್ತು ನಾನು ನಮ್ಮ ಕೈಲಾದಷ್ಟು ಮಾಡಿದ್ದೇವೆ. ಹಲವು ನ್ಯೂನತೆಗಳ ನಡುವೆಯೂ ನಾವು ಗೆಲುವನ್ನು ಖಚಿತಪಡಿಸಿಕೊಂಡಿದ್ದೇವೆ. ಕಳೆದ ವರ್ಷ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ದೊಡ್ಡ ಗೆಲುವು ಸಾಧಿಸಿದ್ದರು. ಆದರೆ, ವಿಧಾನಸಭೆ ಮತ್ತು ಸಂಸತ್ತಿನ ಚುನಾವಣೆಗಳ ವಿಭಜಿತ ಮತದಾನ ಇತ್ತೀಚಿನ ಚುನಾವಣೆಯಲ್ಲಿ ಫಲಿತಾಂಶಗಳ ಮೇಲೆ ಪರಿಣಾಮ ಬೀರಿದೆ" ಎಂದಿದ್ದಾರೆ.
ಹಿನ್ನಡೆಯ ನಡುವೆಯೂ ಲಕ್ಷ್ಮಣ್ ಸವದಿ ಕಾಂಗ್ರೆಸ್ ಪಕ್ಷಕ್ಕೆ ಬದ್ಧರಾಗಿದ್ದಾರೆ. 'ಪ್ರಬಲ ಅಭ್ಯರ್ಥಿಯನ್ನು ಸೋಲಿಸಲು ನಾವು ಕೊನೆಯ ಗಂಟೆಯವರೆಗೂ ಶ್ರಮಿಸಿದ್ದೇವೆ. ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿರಾಶೆಗೊಳ್ಳುವುದಿಲ್ಲ. ನನ್ನ ರಾಜಕೀಯ ಜೀವನಕ್ಕೆ ಮರುಜೀವ ನೀಡಿದ ಪಕ್ಷಕ್ಕೆ ನಿಷ್ಠನಾಗಿರುತ್ತೇನೆ" ಎಂದಿದ್ದಾರೆ.












Click it and Unblock the Notifications