ಮತ ಕೇಳಲು ಬಂದ ಬಿಜೆಪಿ ನಾಯಕನನ್ನು ಶೆಡ್ ನಲ್ಲಿ ಲಾಕ್ ಮಾಡಿದ ಜನ
ಬೆಳಗಾವಿ, ನ 27: ಜನರ ತಾಳ್ಮೆ ಕೆಟ್ಟರೆ, ಏನಾಗುತ್ತದೆ ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆಯಾಗಬಲ್ಲದು. ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಸಿಟ್ಟು ಇದಾಗಿತ್ತು.
ಅಥಣಿಯ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಪರ, ಪ್ರಚಾರಕ್ಕೆ ಬಂದ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರನ್ನು, ಜನ ಶೆಡ್ ನಲ್ಲಿ ಹಾಕಿದ ಘಟನೆ, ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿದೆ.
ಕ್ಷೇತ್ರದ ಜಂಝರವಾಡ ಗ್ರಾಮಕ್ಕೆ ಪಂಚಾಯತ್ ಸದಸ್ಯ ಸಿದ್ದಪ್ಪ ಮುದಕನ್ನವರ್, ಬಿಜೆಪಿ ಕಾರ್ಯಕರ್ತರೊಂದಿಗೆ ಮತಯಾಚನೆಗೆ ಬಂದಿದ್ದರು. ಈ ವೇಳೆ, ಈ ಘಟನೆ ನಡೆದಿದೆ.

ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ, ಬಿಜೆಪಿ ಮುಖಂಡನನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆ ವೇಳೆ, ಬಿಜೆಪಿ ಮುಖಂಡ ನೀಡಿದ ಸಮಜಾಯಿಷಿ ಗ್ರಾಮಸ್ಥರಿಗೆ ತೃಪ್ತಿ ನೀಡಲಿಲ್ಲ.
ಸಿಟ್ಟಾದ ಗ್ರಾಮಸ್ಥರು, ಬಿಜೆಪಿ ಮುಖಂಡ ಮುದಕನ್ನವರ್ ಮತ್ತು ಅವರ ಜೊತೆಗೆ ಬಂದ ಕೆಲವರನ್ನು ಶೆಡ್ ನಲ್ಲಿ ಕೂಡಿಹಾಕಿದ್ದಾರೆ. ಸುಮಾರು ಒಂದು ಗಂಟೆಯ ನಂತರ ಅವರನ್ನು ಶೆಡ್ ನಿಂದ ಹೊರಬಿಡಲಾಗಿದೆ.
ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ, ಮತದಾರರ ಆಕ್ರೋಶ ಅಲ್ಲಲ್ಲಿ ಎದುರಾಗುತ್ತಿದೆ. ಯಲ್ಲಾಪುರ ಅಭ್ಯರ್ಥಿ ಶಿವರಾಂ ಹೆಬ್ಬಾರ್, ಹುಣಸೂರು ಅಭ್ಯರ್ಥಿ ಎಚ್.ವಿಶ್ವನಾಥ್, ಕೂಡಾ, ಪ್ರತಿಭಟನೆ ಬಿಸಿಯನ್ನು ಎದುರಿಸಿದ್ದಾರೆ.












Click it and Unblock the Notifications