ನಮ್ಮದೇನಿದ್ದರೂ ಅಭಿವೃದ್ಧಿ ಮತ್ತು ಕೆಲಸ ಮೇಲೆ ನಿಗಾ ಅಷ್ಟೇ: ಸತೀಶ್ ಜಾರಕಿಹೊಳಿ
ಬೆಳಗಾವಿ, ಜನವರಿ 11: ನನಗೆ ಆಪರೇಷನ್ ಕಮಲದ ಬಗ್ಗೆ ಗೊತ್ತಿಲ್ಲ. ನಮ್ಮದೇನಿದ್ದರೂ ಅಭಿವೃದ್ಧಿ ಮತ್ತು ಇಲಾಖೆ ಕೆಲಸದ ಬಗ್ಗೆ ಅಷ್ಟೇ ನಿಗಾ ಎಂದು ಅರಣ್ಯ ಸಚಿವ, ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ರಾಜಕೀಯದಲ್ಲಿ ಸಹಜ. ಈ ನಡೆಯನ್ನು ದೂರಲು ಆಗುವುದಿಲ್ಲ. ರಾಜಕೀಯದಲ್ಲಿ ತಂತ್ರಗಾರಿಕೆ ಇದ್ದೇ ಇರುತ್ತದೆ ಎಂದಿದ್ದಾರೆ.
ಬಿಜೆಪಿಯವರು ಏನೇ ಮಾಡಿದರೂ ನಮ್ಮ ಯಾವ ಶಾಸಕರೂ ಅಲ್ಲಿಗೆ ಹೋಗುವುದಿಲ್ಲ. ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗುತ್ತಾರೆ ಎನ್ನುವುದು ಊಹಾಪೋಹವಷ್ಟೇ. ನಮ್ಮ ಸರ್ಕಾರ ಸುಭದ್ರವಾಗಿದೆ. ಪಕ್ಷದ ಶಾಸಕರನ್ನು ಸೆಳೆಯಲು ರಾಜಕೀಯ ಸಪ್ರಯತ್ನಗಳು ನಡೆದೇ ನಡೆಯುತ್ತವೆ. ಆದರೆ ಅದು ಯಶಸ್ವಿಯಾಗುವುದಿಲ್ಲ ಎಂದು ಆಪರೇಷನ್ ಕಮಲದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸಂಕ್ರಾಂತಿ ನಂತರ ರಾಜ್ಯ ರಾಜಕೀಯದಲ್ಲಿ ಕ್ರಾಂತಿ ಆಗುತ್ತದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯವೂ ಇಲ್ಲಿಯೇ ಇರುತ್ತದೆ, ದೇಶವೂ ಇಲ್ಲಿಯೇ ಇರುತ್ತದೆ. ಏನೂ ಆಗುವುದಿಲ್ಲ. ಕ್ರಾಂತಿ ಆದರೂ ನಾವು ಇಲ್ಲೇ ಇರ್ತೀವಿ. ಅದೆಲ್ಲ ನಡೀತವೇ ಇರುತ್ತದೆ ಎಂದು ಹೇಳಿದ್ದಾರೆ.
ಸಂಪುಟ ಸಭೆಯಲ್ಲಿ ಬೇರೆ ಯಾವುದೇ ಚರ್ಚೆಗಳಾಗಿಲ್ಲ. ಅಲ್ಲಿ ಐವತ್ತು ವಿಚಾರಗಳು ಪಟ್ಟಿಯಲ್ಲಿದ್ದವು. ಅದಕ್ಕೇ ಸಮಯ ಸಾಕಾಯಿತು. ಪುಟ್ಟರಂಗಶೆಟ್ಟಿ ವಿಚಾರವಾಗಲೀ ಅಥವಾ ಬೇರೆ ವಿಚಾರವಾಗಲೀ ಚರ್ಚೆಯಾಗಲಿಲ್ಲ ಎಂದಿದ್ದಾರೆ.












Click it and Unblock the Notifications