ಸರ್ಕಾರ ಬೀಳಿಸುತ್ತೇವೆ ಎಂದಿದ್ದ ಬಾಲಚಂದ್ರ ಜಾರಕಿಹೊಳಿ ಯೂಟರ್ನ್
ಬೆಳಗಾವಿ, ಆಗಸ್ಟ್ 14: ನಿನ್ನೆಯಷ್ಟೆ ಪ್ರವಾಹ ಸಂತ್ರಸ್ತರ ಮುಂದೆ ಬಿಜೆಪಿ ಸರ್ಕಾರವನ್ನು ಬೀಳಿಸುವ ಮಾತನ್ನಾಡಿದ್ದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇಂದು ಯೂಟರ್ನ್ ಹೊಡೆದಿದ್ದಾರೆ.
ನಿನ್ನೆ ಪ್ರವಾಹ ಸಂತ್ರಸ್ತರೊಂದಿಗೆ ಮಾತನಾಡುತ್ತಿದ್ದ ಬಾಲಚಂದ್ರ ಜಾರಕಿಹೊಳಿ, 'ನಿಮಗೆಲ್ಲಾ ಕೆಲವೇ ದಿನಗಳಲ್ಲಿ ಇರಲು ಮನೆ ನಿರ್ಮಾಣ ಮಾಡಿಕೊಡದೇ ಇದ್ದಲ್ಲಿ, ಸರ್ಕಾರವನ್ನೇ ಬೀಳಿಸುತ್ತೇವೆ' ಎಂದು ಗುಡುಗಿದ್ದರು.
ಸ್ವಂತ ಪಕ್ಷದ ವಿರುದ್ಧವೇ ಆಕ್ರೋಶ ಹೊರಹಾಕಿದ ಬಾಲಚಂದ್ರ ಜಾರಕಿಹೊಳಿ ಅವರ ಹೇಳಿಕೆ ಬಹು ಚರ್ಚೆಗೆ ಕಾರಣವಾಗಿತ್ತು. ಪಕ್ಷದಲ್ಲಿ ಈಗಾಗಲೇ ಭಿನ್ನಮತ ಸ್ಫೋಟಗೊಂಡಿದೆ ಎಂಬ ಅನುಮಾನವೂ ಬಾಲಚಂದ್ರ ಜಾರಕಿಹೊಳಿ ಅವರ ಹೇಳಿಕೆಯಿಂದ ಉದ್ಭವಿಸಿತ್ತು.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ಬಾಲಚಂದ್ರ ಜಾರಕಿಹೊಳಿ ಅವರು, 'ಬಾಯಿ ತಪ್ಪಿ ಸರ್ಕಾರ ಉರುಳಿಸುವ ಮಾತನ್ನಾಡಿದ್ದೇನೆ. ಯಾವುದೇ ದುರುದ್ಧೇಶ ಇರಲಿಲ್ಲ' ಎಂದಿದ್ದಾರೆ.
ಸಂತ್ರಸ್ತರ ಜೊತೆ ಮಾತನಾಡುವಾಗ ದುಖಃದಲ್ಲಿದ್ದ ಅವರನ್ನು ಸಮಾಧಾನಪಡಿಸುವ ಭರದಲ್ಲಿ ಸರ್ಕಾರ ಬೀಳಿಸುವ ಮಾತನ್ನಾಡಿದೆ. ನನಗೆ ಅಂತಹಾ ಉದ್ದೇಶವಿಲ್ಲ. ನಾನು ಪಕ್ಷದ ಅತ್ಯಂತ ನಿಷ್ಠ ಸಿಪಾಯಿ ಎಂದು ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಕೇಂದ್ರದಲ್ಲಿ, ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ರಾಜ್ಯದಲ್ಲಿ ಕಷ್ಟಪಟ್ಟು ಸರ್ಕಾರ ರಚನೆ ಮಾಡಿದ್ದೇವೆ. ಸರ್ಕಾರ ಅಭಿವೃದ್ಧಿ ಪಥದಲ್ಲಿದೆ ಹೀಗಿರುವಾಗ ನಾನೇಕೆ ಸರ್ಕಾರ ಬೀಳುವ ಮಾತನಾಡಲಿ ಎಂದಿರುವ ಅವರು, ಆ ವಿಡಿಯೋವನ್ನು ವೈರಲ್ ಮಾಡಿರುವ ಹಿಂದೆ ರಾಜಕೀಯ ಉದ್ದೇಶ ಇದೆ ಎಂದು ಹೇಳಿದರು.












Click it and Unblock the Notifications