ಬೆಳಗಾವಿ ಚೆನ್ನಮ್ಮನ ವೃತ್ತದಲ್ಲಿ ಭವ್ಯ ರಾಜ್ಯೋತ್ಸವ: 5 ಗಂಟೆಯಲ್ಲಿ ₹20 ಸಾವಿರ ಗಳಿಸಿದ ಚಿಂದಿ ಆಯುವವರು
ಬೆಳಗಾವಿ, ನವೆಂಬರ್ 03: ಬೆಳಗಾವಿ ಅಂದರೇನೆ ಹಾಗೇ ಇಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಕೂಡ ಏನಾದರೂ ಹೊಸ ವಿಚಾರ ಇದ್ದೇ ಇರುತ್ತದೆ. ಅದರಲ್ಲೂ ಕರ್ನಾಟಕ ರಾಜ್ಯೋತ್ಸವ ಹತ್ತು ಹಲವಾರು ವಿಶೇಷತೆಗಳಿಗೆ ಪ್ರತಿ ವರ್ಷ ಸಾಕ್ಷಿ ಆಗುತ್ತಿದೆ.
ಬೆಳಗಾವಿ ಕರ್ನಾಟಕ ರಾಜ್ಯೋತ್ಸವ ಕನ್ನಡ ಪರ ಶ್ರಮಿಸುವ ಸಾಕಷ್ಟು ಜನರಿಗೆ ಆಧಾರವಾಗಿದೆ. ರಾಜ್ಯೋತ್ಸವ ಆಚರಣೆಯಿಂದ ಜಿಲ್ಲೆಯಲ್ಲಿ ಸುಮಾರು 60 ಲಕ್ಷ ರೂಪಾಯಿಯಷ್ಟು ಕನ್ನಡ ಧ್ವಜ ಮಾರಾಟವಾದರೆ, ಬೆಳಗಾವಿ ಚೆನ್ನಮ್ಮ ಸರ್ಕಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ವ್ಯಾಪಾರ ವಹಿವಾಟು ನಡೆಯುತ್ತದೆ. ಇದರಿಂದ ಅನೇಕರು ತಮ್ಮ ಜೀವನ ಕಟ್ಟಿಕೊಳ್ಳುತ್ತಾರೆ.

ಇದರ ಜೊತೆಗೆ ಈ ಬಾರಿಯ ಇನ್ನೊಂದು ವಿಶೇಷ ಅಂದರೆ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಚಿಂದಿ ಆಯುವ 10 ಮಂದಿ ಐದೇ ಗಂಟೆಯಲ್ಲಿ ಇಪ್ಪತ್ತು ಸಾವಿರ ರೂಪಾಯಿ ಗಳಿಸಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಬುಧವಾರ ರಾಣಿ ಚನ್ನಮ್ಮ ವೃತ್ತದಲ್ಲಿ ಲಕ್ಷಾಂತರ ಜನ ಸೇರಿದ್ದರು. ಅವರು ನೀರು ಕುಡಿದು ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನು ಗುರುವಾರ 10 ಮಂದಿ ಚಿಂದಿ ಆಯುವವರು ಸಂಗ್ರಹಿಸಿದರು. ನಸುಕಿನ 3ರಿಂದ ಬೆಳಿಗ್ಗೆ 8ರವರೆಗೆ ಎರಡು ಟನ್‌ಗೂ ಅಧಿಕ ಪ್ಲಾಸ್ಟಿಕ್ ಬಾಟಲಿಗಳು ಸಂಗ್ರಹವಾದ್ದು ಗಮನಾರ್ಹವಾಗಿದೆ.

ಬೆಳಗಾವಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಬಳಿಕ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಚಿಂದಿ ಆಯುವವರು ಸಂಗ್ರಹಿಸಿದ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಪಾಲಿಕೆ ವಾಹನದಲ್ಲಿ ಸಾಗಿಸಲಾಯಿತು.
ಈ ಬಗ್ಗೆ ಬೆಳಗಾವಿ ಪಾಲಿಕೆ ಪರಿಸರ ಎಂಜಿನಿಯರ್ ಹಣಮಂತ ಕಲಾದಗಿ ಮಾತನಾಡಿದ್ದು, ಪ್ರತಿ ಕೆ.ಜಿ.ಗೆ ಮಹಾನಗರ ಪಾಲಿಕೆ ₹10 ದರ ನೀಡುತ್ತದೆ. 2,000 ಕೆ.ಜಿ ಬಾಟಲಿಗಳನ್ನು ನೀಡಿ ₹20 ಸಾವಿರ ಗಳಿಸಿದರು. ಎಲ್ಲ ಹತ್ತು ಮಂದಿಗೆ ತಲಾ ₹2,000 ಹಂಚಲಾಗಿದೆ. ಬೆಳಗಾವಿ ಮಹಾನಗರ ಪಾಲಿಕೆಯಿಂದ 475 ಮಂದಿಗೆ ಚಿಂದಿ ಆಯುವ ಗುರುತಿನ ಚೀಟಿ ನೀಡಲಾಗಿತ್ತು. ಹೀಗಾಗಿ ಪ್ರತಿಯೊಬ್ಬರೂ ಪ್ರತಿದಿನ ಗರಿಷ್ಠ ಇನ್ನೂರು ರೂಪಾಯಿ ಗಳಿಸುತ್ತಾರೆ. ಆದರೆ ಈ ಬಾರಿ ರಾಜ್ಯೋತ್ಸವಕ್ಕೆ ಬಂದ ಜನರು ಬಿಸಾಡಿದ ತ್ಯಾಜ್ಯ ಅಧಿಕ ಪ್ರಮಾಣದಲ್ಲಿತ್ತು ಎಂದು ವಿವರಿಸಿದರು.
ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರ ನಿರ್ದೇಶನದಂತೆ, ರಾಜ್ಯೋತ್ಸವ ಮೆರವಣಿಗೆ ನಡೆದ ಮಾರ್ಗಗಳಲ್ಲಿ 100 ಕೆ.ಜಿ.ಯಷ್ಟು ತ್ಯಾಜ್ಯ ಪದಾರ್ಥಗಳನ್ನು ಸಂಗ್ರಹಿಸುವ ದೊಡ್ಡ ತೊಟ್ಟಿಗಳನ್ನು ಇಡಲಾಗಿತ್ತು. ಇದರಿಂದ ಮಾಲಿನ್ಯವಾಗದಂತೆ, ತ್ಯಾಜ್ಯದಿಂದ ನಗರದ ಸೌಂದರ್ಯ ಹಾಳಾಗದಂತೆ ಕಾಪಾಡಲಾಯಿತು ಎಂದು ಹಣಮಂತ ಕಲಾದಗಿ ತಿಳಿಸಿದರು.
ಇನ್ನು ಬೆಳಗಾವಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಬಳಿಕ 2,000 ಕೆ.ಜಿ ಬಾಟಲಿ ಹೊರತುಪಡಿಸಿ, 200 ಕೆ.ಜಿಯಷ್ಟು ವಿವಿಧ ಬಗೆಯ ಹೂವು, 100 ಕೆ.ಜಿ.ಗೂ ಅಧಿಕ ಹರಿದ ಚಪ್ಪಲಿಗಳು, ಪ್ಲಾಸ್ಟಿಕ್ ಚೀಲಗಳು, ತಿಂಡಿ ತಿಂದು ಬಿಸಾಡಿದ ವ್ಯರ್ಥ ಪದಾರ್ಥಗಳು ಹೀಗೆ ಅಪಾರ ಪ್ರಮಾಣದ ತ್ಯಾಜ್ಯ ಸಂಗ್ರಹವಾಗಿತ್ತು. ಸದ್ಯ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತವನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗಿದ್ದು, ವೃತ್ತದಲ್ಲಿ ನಿಯೋಜನೆಗೊಂಡಿದ್ದ ಹತ್ತು ಮಂದಿ ಚಿಂದಿ ಆಯುವವರಿಗೆ ನಾಡ ಹಬ್ಬದಿಂದ ಉಡುಗೊರೆ ಸಿಕ್ಕಂತಾಗಿದೆ.












Click it and Unblock the Notifications