ಗಲಭೆ ನಂತರ ಸಹಜ ಸ್ಥಿತಿಯತ್ತ ಬೆಳಗಾವಿ ನಗರ
ಬೆಳಗಾವಿ, ಜೂ. 10 : ಬೆಳಗಾವಿ ನಗರದ ಸೂಕ್ಷ್ಮ ಪ್ರದೇಶಗಳಾದ ಖಡಕ್ ಗಲ್ಲಿ ಹಾಗೂ ಜಾಲಗಾರ ಗಲ್ಲಿಯ ಸುತ್ತಲಿನ ಪ್ರದೇಶಗಳಲ್ಲಿ ಭಾನುವಾರ ತಡರಾತ್ರಿ ನಡೆದ ಎರಡು ಗುಂಪುಗಳು ಘರ್ಷಣೆಗೆ ಸಂಬಂಧಿಸಿದಂತೆ ಪೊಲೀಸರು 29 ಜನರನ್ನು ಬಂಧಿಸಿದ್ದಾರೆ. ಗಲ್ಲಿಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದು, ಪೊಲೀಸರು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
ಭಾನುವಾರ ತಡರಾತ್ರಿ ನಡೆದ ಗುಂಪು ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಎರಡೂ ಗುಂಪಿನವರು ಸೇರಿ 29 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಪೂರ್ತಿ ಈ ಭಾಗದಲ್ಲಿ 144 ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಮಂಗಳವಾರ ಗಲ್ಲಿಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ.
ಭಾನುವಾರ ನಡೆದ ಕಲ್ಲು ತೂರಾಟದಲ್ಲಿ ಒಬ್ಬ ಪೊಲೀಸ್ ಪೇದೆ ಗಾಯಗೊಂಡಿದ್ದರು. ಎಂಟು ದ್ವಿಚಕ್ರ ವಾಹನಗಳು ಸೇರಿದಂತೆ ಹಲವು ವಾಹನಗಳಿಗೆ ಹಾನಿ ಉಂಟಾಗಿದೆ. ಕಲ್ಲು ತೂರಾಟದಿಂದಾಗಿ ಹಲವು ಮನೆಗಳ ಕಿಟಕಿ ಗಾಜುಗಳು ಪುಡಿಯಾಗಿವೆ.
ಘಟನೆಗೆ ಕಾರಣವೇನು? : ಬೆಳಗಾವಿಯ ಖಡಕ್ ಗಲ್ಲಿ ಹಾಗೂ ಜಾಲಗಾರ ಗಲ್ಲಿಯ ಸುತ್ತಲಿನ ಪ್ರದೇಶಗಳಲ್ಲಿ ದೇವರ ಚಿತ್ರವೊಂದನ್ನು ವಿರೂಪಗೊಳಿಸಿದ ಛಾಯಾಚಿತ್ರ ಭಾನುವಾರ ಕೆಲವರ ಮೊಬೈಲ್ ಗೆ ಬಂದಿತ್ತು. ಇದರಿಂದ ಸಿಟ್ಟಿಗೆದ್ದ ಗುಂಪು ಪೊಲೀಸರಿಗೆ ಮಾಹಿತಿ ನೀಡಿತ್ತು. ಈ ಕುರಿತು ತನಿಖೆ ನಡೆಸುವುದಾಗಿ ಪೊಲೀಸರು ಭರವಸೆ ನೀಡಿದ್ದರು. ಆದರೆ, ರಾತ್ರಿ 11ರ ವೇಳೆಗೆ ಖಡಕ್ ಗಲ್ಲಿ ಬಳಿ ಯಾರೋ ಕಿಡಿಗೇಡಿಗಳು ರಸ್ತೆಗೆ ಬಾಟಲಿ ಎಸೆದಿದ್ದರು.
ಇದರಿಂದಾಗಿ ಕಲ್ಲು ತೂರಾಟ ನಡೆದಿದೆ ಎಂಬ ವದಂತಿ ಹರಡಿ ರಾತ್ರಿ 12 ಗಂಟೆ ಹೊತ್ತಿಗೆ ಎರಡೂ ಗುಂಪಿನವರು ಪರಸ್ಪರ ಕಲ್ಲು ತೂರಾಟ ಆರಂಭಿಸಿದರು. ನಗರದ ವಿವಿಧ ಪ್ರದೇಶಗಳಲ್ಲೂ ಇದೇ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಬೆಳಿಗ್ಗೆವರೆಗೂ ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಅಂದಿನಿಂದಲೂ ಎರಡೂ ಗಲ್ಲಿಗಳು ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸರು ಅಗತ್ಯ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ.













Click it and Unblock the Notifications