40 ದಿನದ ಅಧಿವೇಶನಕ್ಕೆ 49 ಕೋಟಿ ಖರ್ಚು ಮಾಡಿದ ಸರ್ಕಾರ
ಬೆಳಗಾವಿ, ಜೂ, 27 : ನಗರದ ಹೊರವಲಯದಲ್ಲಿರುವ ಸುವರ್ಣಸೌಧದಲ್ಲಿ ಜುಲೈ 29 ರಿಂದ ಮುಂಗಾರು ಅಧಿವೇಶನ ನಡೆಯಲಿದೆ. ಕಳೆದ ಐದು ಬಾರಿ ೪೦ ದಿನಗಳ ಕಾಲ ಅಧಿವೇಶನ ನಡೆದಿತ್ತು. ಅದಕ್ಕಾಗಿ ಸರ್ಕಾರ 49.21 ಕೋಟಿ ಖರ್ಚು ಮಾಡಿದೆ ಎಂದು ಮೂಡಲಗಿಯ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದರು.
ಶುಕ್ರವಾರ ಮಾಹಿತಿ ನೀಡಿದ ಅವರು, 2006ರಿಂದ 2014ರವರೆಗೆ ಐದು ಬಾರಿ ನಗರದ ಕೆಎಲ್ಇ ಸಂಸ್ಥೆಯ ಜಿರಗೆ ಸಭಾಭವನದಲ್ಲಿ ಮೂರು ಬಾರಿ ಅಧಿವೇಶನ ನಡೆಸಲು ಸರ್ಕಾರ ಒಟ್ಟು ರೂ 37 ಕೋಟಿ ವ್ಯಯಿಸಿದೆ. ಆದರೆ ಈ ಬಾರಿ 400 ಕೋಟಿ ವೆಚ್ಚದ ಸುವರ್ಣ ಸೌಧ ಇದ್ದರೂ ಖರ್ಚು ಹೆಚ್ಚಾಗಿದೆ ಎಂದರು. [ಬೆಳಗಾವಿ ಅಧಿವೇಶನ : ಹೋರಾಟಕ್ಕೆ ಸಜ್ಜಾದ ಕಬ್ಬು ಬೆಳೆಗಾರರು]

ಹಿಂದೆ ಸಚಿವರ ಊಟ, ವಸತಿಗಾಗಿ ಸರ್ಕಾರ ಕೋಟ್ಯಂತರ ಹಣ ವ್ಯಯಿಸುತ್ತಿತ್ತು. ಆದರೆ ಸಚಿವರೇ ಈ ಬಾರಿ ಅದರ ಹೊರೆ ಹೊತ್ತುಕೊಳ್ಳಬೇಕಾಗಿದೆ. ಆದ್ದರಿಂದ ತಮ್ಮ ಜೇಬಿಗೆ ಕತ್ತರಿ ಬೀಳುತ್ತಿದೆ ಎಂದು ಹೆಸರು ಹೇಳಲು ಇಚ್ಚಿಸದ ಬಹುತೇಕ ಅಧಿಕಾರಿಗಳು ಹೇಳುತ್ತಿದ್ದಾರೆ' ಎಂದು ಭೀಮಪ್ಪ ತಿಳಿಸಿದರು.
ಪ್ರತಿಭಟನೆಗೆ ಕುಮ್ಮಕ್ಕು: ವಿವಿಧ ಸಂಘ- ಸಂಸ್ಥೆಗಳ ಸದಸ್ಯರು, ರೈತರು, ಸಾರ್ವಜನಿಕರು ಅಧಿವೇಶನದ ವೇಳೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುವರ್ಣಸೌಧದ ಎದುರು ಪ್ರತಿಭಟನೆ ಕೈಗೊಳ್ಳುವ ಸಂಭವವಿದೆ. 2014ರ ಚಳಿಗಾಲ ಅಧಿವೇಶನದಲ್ಲಿ ಸರ್ಕಾರ ಪೆಂಡಾಲ್ ಗಾಗಿ ರೂ 70 ಲಕ್ಷ ವ್ಯಯಿಸಿತ್ತು. ಪೆಂಡಾಲ್ ಬಾಡಿಗೆಗೆ ಖರ್ಚು ಮಾಡುವ ಬದಲು, ಒಂದು ಶಾಶ್ವತ ಕಟ್ಟಡ ನಿರ್ಮಿಸಬಹುದಿತ್ತು ಎಂದೂ ಅವರು ಅಭಿಪ್ರಾಯಪಟ್ಟರು.
ಪ್ರತಿಭಟನೆ ಮಾಡುವವರಿಗೆ ಇಷ್ಟು ಪ್ರಮಾಣದ ಹಣ ಖರ್ಚು ಮಾಡುವ ಮೂಲಕ ಸರ್ಕಾರವೇ ಪರೋಕ್ಷವಾಗಿ ಪ್ರತಿಭಟನೆಗೆ ಕುಮ್ಮಕ್ಕು ನೀಡಿದಂತಾಗಿದೆ ಎಂದು ಅವರು ಟೀಕಿಸಿದರು.












Click it and Unblock the Notifications